ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾ

Advertisement

ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ನಡೆಯುವ ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾ ಕಡ್ಡಾಯಗೊಳಿಸಲಾಗಿದೆ. ಎಸ್‌ಎಸ್‌ಎಲ್‌ಸಿ ೨೦೨೩-೨೪ನೇ ಸಾಲಿನ ವಾರ್ಷಿಕ ಮೊದಲ ಪರೀಕ್ಷೆಯು ಮಾ.೨೫ ರಿಂದ ಏ. ೬ರವರೆಗೆ ನಡೆಯಲಿದೆ. ಪರೀಕ್ಷೆ ನಡೆಯುವ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನಿರ್ದೇಶನ ನೀಡಿದೆ.
ಇಲಾಖೆಯು ಎಲ್ಲಾ ಉಪನಿರ್ದೇಶಕರಿಗೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಈ ನಿರ್ದೇಶನ ನೀಡಿದ್ದು, ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ. ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳು ಸುಸ್ಥಿತಿಯಲ್ಲಿರುವ ಬಗ್ಗೆ ಪರಿಶೀಲಿಸಿ ದೃಢಪಡಿಸಿಕೊಳ್ಳಲು ಆಯಾ ಜಿಲ್ಲೆಯ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಖುದ್ದು ಭೇಟಿ ನೀಡಿ ಪರಿಶೀಲಿಸಿಕೊಳ್ಳಲು ನಿರ್ದೇಶಿಸಲಾಗಿದೆ.
ಪರೀಕ್ಷಾ ಕೇಂದ್ರಗಳಲ್ಲಿನ ಪರೀಕ್ಷಾ ಮುಖ್ಯ ಅಧಿಕ್ಷಕರು ಪರೀಕ್ಷೆಗಾಗಿ ಕಚೇರಿಯನ್ನು ಮಾಡಿಕೊಂಡಿರುವ ಅಂದರೆ ಮಾರ್ಗಾಧಿಕಾರಿಗಳಿಂದ ಪ್ರಶ್ನೆಪತ್ರಿಕೆಗಳನ್ನು ಸ್ವೀಕರಿಸಿ ಅಲ್ಮೆರಾದಲ್ಲಿಟ್ಟುಕೊಳ್ಳುವ, ಪ್ರಶ್ನೆ ಪತ್ರಿಕೆಗಳನ್ನು ಪರೀಕ್ಷಾ ಕೊಠಡಿಗಳಿಗೆ ಹಂಚಿಕೆ ಮಾಡುವ, ಪರೀಕ್ಷೆ ಮುಗಿದ ನಂತರ ಉತ್ತರ ಪತ್ರಿಕೆಗಳ ಬಂಡಲ್ ಮಾಡುವ ಕಾರ್ಯವನ್ನು ನಿರ್ವಹಿಸುವ ಕಚೇರಿ ಕೊಠಡಿಗೆ ಪರೀಕ್ಷಾ ಕೊಠಡಿ ಹಾಗೂ ಕೊಠಡಿಗಳ ಕಾರಿಡಾರ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಕಡ್ಡಾಯಗೊಳಿಸಲಾಗಿದೆ.
ಪರೀಕ್ಷಾ ದಿನದಂದು ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳು ಕಾರ್ಯ ನಿರ್ವಹಿಸುತ್ತಿರುವುದನ್ನು ಪರೀಕ್ಷಾ ಮುಖ್ಯ ಅಧಿಕ್ಷಕರು ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕು. ಎಲ್ಲಾ ವಿಷಯಗಳ ಪರೀಕ್ಷೆ ಪೂರ್ಣಗೊಂಡ ದಿನದಂದು ಎಲ್ಲಾ ಪರೀಕ್ಷಾ ದಿನಗಳ ಸಿಸಿಟಿವಿ ಪುಟೇಜ್ ಸಾಫ್ಟ್ಕಾಪಿಯನ್ನು ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕಡ್ಡಾಯವಾಗಿ ಸಲ್ಲಿಸುವ ಸೂಚನೆ ನೀಡಲಾಗಿದೆ.
ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾ ಪರೀಕ್ಷೆ ಸಮಯದಲ್ಲಿ ಚಾಲನೆ ಇರುವುದನ್ನು ತಾಲೂಕು ಹಾಗೂ ಜಿಲ್ಲಾ ಹಂತದಲ್ಲಿ ಒಂದೇ ಕಡೆ ವೀಕ್ಷಿಸಲು ಅನುಕೂಲವಾಗುವಂತೆ ಸಾಫ್ಟ್ವೇರ್ ಅಳವಡಿಸಿಕೊಂಡು ವೀಕ್ಷಣೆಗೆ ಸಂಬಂಧಿಸಿದ ಲಿಂಕ್ ಅನ್ನು ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತಲುಪಿಸಲು ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಲಾಗಿದೆ.