ಮುಂದುವೆರೆದ ಶೆಟ್ಟರ್ ಗೋ ಬ್ಯಾಕ್ ಅಭಿಯಾನ

Advertisement

ಬೆಳಗಾವಿ: ಲೋಕಸಮರದಲ್ಲಿ ಟಿಕೆಟ್ ಗಿಟ್ಟಿಸಿಕೊಳ್ಳಲು ಎರಡೂ ಪಕ್ಷದಲ್ಲಿ ಕೊನೆ ಹಂತದ ಕಸರತ್ತುಗಳು ಜೋರಾಗಿ ನಡೆದಿವೆ. ಅದರಲ್ಲಿ ಬೆಳಗಾವಿ ಜಿಲ್ಲೆಯ ಎರಡು ಕ್ಷೇತ್ರಗಳಲ್ಲಿ ಒಂದು ಚಿಕ್ಕೋಡಿ ಅಭ್ಯರ್ಥಿ ಘೋಷಣೆಯಾಗಿದೆ, ಬೆಳಗಾವಿಗೆ ಬಿಜೆಪಿಯಿಂದ ಯಾರು ಎನ್ನುವುದು ಸ್ಪಷ್ಟವಾಗಿಲ್ಲ.
ಸದ್ಯ ಬಂದಿರುವ ಮಾಹಿತಿ ಪ್ರಕಾರ ಅಂಗಡಿ ಕುಟುಂಬ ಹೊರತುಪಡಿಸಿ ಟಿಕೆಟ್ ನೀಡಿದರೆ ಹೇಗೆ ಎನ್ನುವ ಚರ್ಚೆ ಕೂಡ ನಡೆದಿದೆ. ಆದರೆ ಹಾವೇರಿ ಮತ್ತು ಧಾರವಾಡ ಲೋಕಸಭಾ ಕ್ಷೇತ್ರದ ಟಿಕೆಟ್ ತಪ್ಪಿದ ನಂತರ ಹುಬ್ಬಳ್ಳಿಯ ಜಗದೀಶ ಶೆಟ್ಟರ್ ಚಿತ್ತ ಬೆಳಗಾವಿಯತ್ತ ನೆಟ್ಟಿದೆ. ಆದರೆ ಜಗದೀಶ ಶೆಟ್ಟರ್‌ಗೆ ಬೆಳಗಾವಿ ಬಿಜೆಪಿಯಲ್ಲಿಯೇ ವ್ಯಾಪಕ ಅಸಮಾಧಾನ ಭುಗಿಲೆದ್ದಿದೆ.
ಈಗ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಮಾಜಿ ಸಂಸದ ರಮೇಶ ಕತ್ತಿ, ಮಾಜಿ ಶಾಸಕ ಅನಿಲ ಬೆನಕೆ ಮತ್ತು ಸಂಜಯ ಪಾಟೀಲರ ಹೆಸರು ಬಲವಾಗಿ ಕೇಳಿ
ಬಂದಿತ್ತು. ಇದೆಲ್ಲದರ ಮಧ್ಯೆ ದಿ.ಸುರೇಶ ಅಂಗಡಿಯವರ ಪುತ್ರಿ ಮತ್ತು ಜಗದೀಶ ಶೆಟ್ಟರ್ ಸೊಸೆ ಶ್ರದ್ಧಾ ಶೆಟ್ಟರ್ ಹೆಸರೂ ಕೇಳಿ ಬರುತ್ತಿದೆ.
ಆದರೆ ಬೆಳಗಾವಿ ಲೋಕಸಭೆ ಕ್ಷೇತ್ರದ ಕಾಂಗ್ರೆಸ್‌ನ ಸಂಭವನೀಯ ಅಭ್ಯರ್ಥಿ ಮೃನಾಲ್ ಹೆಬ್ಬಾಳಕರ ವಿರುದ್ಧ ಎಲ್ಲ ಲೆಕ್ಕಾಚಾರ ಹಾಕಿ ಅಭ್ಯರ್ಥಿ ಆಯ್ಕೆಯಲ್ಲಿ ಬಿಜೆಪಿ ಹೈಕಮಾಂಡ್ ನಿರತವಾಗಿದೆ ಎನ್ನಲಾಗುತ್ತಿದೆ. ಈಗ ಬಂದಿರುವ ಮಾಹಿತಿ ಪ್ರಕಾರ ಪಂಚಮಸಾಲಿಗೆ ಸೇರಿದವರಿಗೆ ಟಿಕೆಟ್ ಕೊಡಬೇಕು ಎನ್ನುವ ಆಲೋಚನೆಯಲ್ಲಿ ಬಿಜೆಪಿ ಇದೆ. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿ ಹೆಸರು ಪ್ರಕಟಿಸಿದ ನಂತರ ಬಿಜೆಪಿ ಬೆಳಗಾವಿ ಅಭ್ಯರ್ಥಿ ಹೆಸರು ಅಂತಿಮವಾಗುವ ಸಾಧ್ಯತೆಗಳು ಹೆಚ್ಚಾಗಿವೆ.
ಅಚ್ಚರಿ ಅಭ್ಯರ್ಥಿ ಬರ‍್ತಾರಾ…?
ಮೂಲಗಳ ಪ್ರಕಾರ ಬೆಳಗಾವಿ ಲೋಕಸಭೆ ಕ್ಷೇತ್ರಕ್ಕೆ ಅಚ್ಚರಿ ಅಭ್ಯರ್ಥಿ ಯಾರಾಗಬಹುದು ಎನ್ನುವ ಚರ್ಚೆ ಕೂಡ ನಡೆದಿದೆ. ಕೆಲವರು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಹೆಸರು ಕೇಳಿ ಬಂದಿತ್ತು. ಆದರೆ ಖುದ್ದು ಬಾಲಚಂದ್ರ ಅವರೇ ಸ್ಪರ್ಧಿಸಲ್ಲ, ಯಾರೇ ಸ್ಪರ್ಧಿಸಿದರೂ ಕೆಲಸ ಮಾಡುವುದಾಗಿ ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತರ ಕಾಳಜಿ
ಬೆಳಗಾವಿ ಜಿಲ್ಲೆಯಲ್ಲಿ ಕುಟುಂಬ ರಾಜಕಾರಣದ ವಿರುದ್ಧ ಬಿಜೆಪಿ ಬ್ಯಾನರ್ ಅಭಿಯಾನ ಶುರುವಿಟ್ಟುಕೊಂಡಿದೆ. ಬೆಳಗಾವಿಯ ಸರದಾರ್ಸ್ ಪ್ರೌಢಶಾಲೆಯ ಮೈದಾನದ ಬಳಿ ಸಚಿವರ ಮಕ್ಕಳು‌ ಸ್ಪರ್ಧಿಸುತ್ತಿರುವುದನ್ನು ವ್ಯಂಗ್ಯವಾಗಿ ಬಿಜೆಪಿ ಪ್ರಶ್ನೆ ಮಾಡಿದೆ, ಕಾಂಗ್ರೆಸ್ ಕಾರ್ಯಕರ್ತರ ಪಾಡೇನು ಎಂದು ಪ್ರಶ್ನೆ ಮಾಡಲಾಗಿದೆ.
ಮತ್ತೊಂದು ಕಡೆಗೆ ಜೆಡಿಎಸ್ ಕುಟುಂಬ ರಾಜಕಾರಣದ ಬಗ್ಗೆ ಮೇರಾ ಪರಿವಾರ್ ಎಂದು ಉಲ್ಲೇಖಿಸಿ ದೇವೇಗೌಡರ ಫೋಟೋ ಹಾಕಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹರಿಬಿಡುವ ಕೆಲಸವನ್ನು ಕಾಂಗ್ರೆಸ್ ಕಾರ್ಯಕರ್ತರು ಮಾಡುತ್ತಿದ್ದಾರೆ.