ಆನ್‌ಲೈನ್ ಮೂಲಕ ಶಿಕ್ಷಕರ ವರ್ಗಾವಣೆ ನಾಳೆಯಿಂದ

Advertisement

ಬೆಂಗಳೂರು: ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರನ್ನು ಒಳಗೊಂಡಂತೆ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಅಧಿಸೂಚನೆ ಪ್ರಕಟಗೊಂಡಿದೆ. ೨೦೨೦ರಲ್ಲಿ ಜಾರಿಯಾದ ಶಿಕ್ಷಕರ ವರ್ಗಾವಣೆ ಕಾಯ್ದೆಯಂತೆ ಮಾರ್ಗಸೂಚಿಗಳನ್ನೊಳಗೊಂಡ ವೇಳಾಪಟ್ಟಿಯನ್ನು ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಪ್ರಕಟಿಸಿದ್ದಾರೆ.
ವರ್ಗಾವಣೆ ಪ್ರಕ್ರಿಯೆ ಮಾರ್ಚ್ ೧೮ರಿಂದ ಆರಂಭಗೊಂಡು ಜೂನ್ ೧೩ರವರೆಗೆ ನಡೆಯಲಿದೆ. ಹೆಚ್ಚುವರಿ ಶಿಕ್ಷಕರ ಸಮರ್ಪಕ ಮರುಹಂಚಿಕೆ ಮತ್ತು ಕಡ್ಡಾಯ ವಲಯ ವರ್ಗಾವಣೆಗಳನ್ನು ಒಂದರ ನಂತರ ಒಂದನ್ನು ಪರ್ಯಾಯ ವರ್ಷಗಳಲ್ಲಿ ಹಮ್ಮಿಕೊಳ್ಳಬೇಕಾಗುತ್ತದೆ. ಅಂತೆಯೇ ಈ ಬಾರಿಯ ವರ್ಗಾವಣೆ ಪ್ರಕ್ರಿಯೆ ಆರಂಭಿಸಲಾಗಿದೆ. ವರ್ಗಾವಣೆಗೆ ಪೂರಕವಾದ ಇ.ಇ.ಡಿ.ಎಸ್ ದತ್ತಾಂಶ, ಖಾಲಿ ಹುದ್ದೆಗಳ ಮಾಹಿತಿ, ಶಾಲಾ ವಲಯಗಳ ಮಾಹಿತಿಯನ್ನು ಪರಿಷ್ಕರಿಸಲಾಗಿದೆ.
ಸಾಮಾನ್ಯ ಹಾಗೂ ಪರಸ್ಪರ ವರ್ಗಾವಣೆಗಳು ಆನ್‌ಲೈನ್ ಮೂಲಕವೇ ನಡೆಯಲಿದೆ. ಶಿಕ್ಷಕರ ಅಂಕಗಳ ಪ್ರಕಟ, ಆಕ್ಷೇಪಣೆ ಸಲ್ಲಿಕೆ, ವರ್ಗಾವಣೆ ಅರ್ಜಿ ಸಲ್ಲಿಸುವುದು, ಅರ್ಜಿಗಳ ಪರಿಶೀಲನೆ, ಅರ್ಜಿಗಳ ಅನುಮೋದನೆ, ತಿರಸ್ಕಾರ, ಕರಡು ಪಟ್ಟಿ ಪ್ರಕಟಣೆ, ಆಕ್ಷೇಪಣೆಗಳ ಸಲ್ಲಿಕೆ, ಅಂತಿಮ ಆದ್ಯತಾ ಪಟ್ಟಿ ಪ್ರಕಟಣೆ, ಆದ್ಯತಾ ಪಟ್ಟಿ ಅನುಸಾರ ವರ್ಗಾವಣಾ ಕೌನ್ಸೆಲಿಂಗ್ ಪ್ರಕ್ರಿಯೆಗಳು ಇಲಾಖೆಯ ನಿಗದಿತ ತಂತ್ರಾಂಶದಲ್ಲಿಯೇ ನಿರ್ವಹಣೆಯಾಗಲಿದೆ. ಪ್ರಸ್ತುತ ಅಧಿಸೂಚನೆ ಕೇವಲ ವರ್ಗಾವಣೆಗಳ ಆಡಳಿತ ನಿರ್ವಹಣೆಗ ಮತ್ತು ಶಿಕ್ಷಕರ ಆಕರ ಸೂಚನೆಗಾಗಿ ಮಾತ್ರ ಮೀಸಲಾಗಿದೆ.
ಈ ಅಧಿಸೂಚನೆಯು ತಾಂತ್ರಿಕ ಕಾರಣಗಳಿಂದಾಗಿ ಸಮಸ್ಯೆಯಾದರೆ ವೇಳಾಪಟ್ಟಿಯಲ್ಲಿ ಬದಲಾವಣೆಯಾಗಲಿದೆ ಎಂದು ಅಧಿಸೂಚನೆಯಲ್ಲಿ ಪ್ರಕಟಿಸಲಾಗಿದೆ. ಮಾರ್ಚ್ ೧೮ರಂದು ವರ್ಗಾವಣೆ ಪ್ರಕ್ರಿಯೆ ನಡೆಯಲಿದ್ದು ಜೂನ್ ೧೨ರಂದು ಆದ್ಯತಾ ಪಟ್ಟಿ ಪ್ರಕಟಗೊಳ್ಳಲಿದೆ.
ಶಿಕ್ಷಕರ ವರ್ಗಾವಣೆಯ ಅಧಿಸೂಚನೆ ಪ್ರಕಟಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ. ನಾಗೇಶ್ ಮತ್ತು ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.