ತಾಯತ ಕಟ್ಟಿಸಿಕೊಂಡು ಮತ್ತೆ ಕುರ್ಚಿಯ ಮೇಲೆ ಕುಳಿತ ಪುಟ್ಯಾ..

Advertisement

ರಷಿಯಾ ಪುಟ್ಯಾ ಮತ್ತೊಮ್ಮೆ ಗೆದ್ದಮೇಲೆ ಯಾರನ್ನೂ ಹೆಚ್ಚಾಗಿ ಮಾತನಾಡಿಸುತ್ತಿಲ್ಲ. ಯಾರಾದರೂ ಎದುರಿಗೆ ಬಂದರೆ… ವಿಷ್ ಮಾಡಲು ಕೈ ಸಹಿತ ಎತ್ತುವುದಿಲ್ಲ. ಬರೀ ಹಲ್ಲು ಕಿಸಿಯಲೋ ಬೇಡವೋ ಎಂದು ನಕ್ಕು ಮುನ್ನಡೆಯುತ್ತಾನೆ ಎಂದು ತಿಗಡೇಸಿ ಮೆಸೇಜ್ ಮಾಡಿದ್ದಾನೆ. ಎಂದು ಅಮೆರಿಕದ ಬುಡ್ಡೇಸಾಬ.. ಚೀನಾದ ಚಿಂಗ್ಯಾ ಮುಂತಾದವರು ಮಾತನಾಡಿಕೊಂಡರು. ಅವನದು ಅದೇನು ಲಕ್ಕೋ ಏನೋ… ಅಷ್ಟಿದ್ದರೂ ಮತ್ತೆ ಅವನೇ ಕುರ್ಚಿಯ ಮೇಲೆ ಕೂಡುತ್ತಾನೆ ಎಂದರೆ ಸುಮ್ಮನೇ ಮಾತಲ್ಲ ಎಂದು ದಪ್ಪ ಗಲ್ಲ ಮಾಡಿಕೊಂಡು ಚೀನಾದ ಚಿಂಗ್ಯಾ ಹೇಳಿದ. ಅದಕ್ಕೆ ಅಮೆರಿಕದ ಬುಡ್ಯಾನ ಪರಾಕ್ರಮ ನೋಡಿದರೆ ಅವನು ಕರಿಲಕ್ಷಂಪತಿ ಹತ್ತಿರ ತಾಯತ ಕಟ್ಟಿಸಿಕೊಂಡಿರಬೇಕು ಎಂದು ಅಂದ. ಹೋಗಲಿ ಎಲ್ಲರೂ ಕೂಡಿ ಆತನಿಗೆ ಫೋನ್ ಮಾಡೋಣ ಎಂದು ಬುಡ್ಯಾ ತನ್ನ ಮೊಬೈಲ್ ತೆಗೆದು ಸ್ಪೀಕರ್ ಆನ್ ಮಾಡಿ ಕಾಲ್ ಮಾಡಿದರು. ಆ ಕಡೆಯಿಂದ ಫೋನ್ ಎತ್ತಿದ ಪುಟ್ಯಾ… ಹೇಳು ಬುಡ್ಯಾ… ಹೇಳಪಾ ಬುಡ್ಯಾ ಎಂದು ಹೇಳುತ್ತಿದ್ದಂತೆ…. ಕಂಗ್ರಾತುಲೇಸ್ಯನ್ ಬುಡ್ಯಾ… ಅಂದ ಕೂಡಲೇ ಥ್ಯಾಂಕ್ಸ್…ಥ್ಯಾಂಕ್ಸ್ ಎಂದು ಹೇಳಿದ ಕೂಡಲೇ ಆ ಮೂವರೂ.. ಶಬ್ಬಾಷ್ ಪುಟ್ಯಾ ಎಂದು ಒದರಿದರು. ಪುಟ್ಯಾ ಒಕೆ ಅನ್ನುತ್ತಿದ್ದಂತೆ ಸ್ಪೀಕರ್ ಆಫ್ ಮಾಡಿದ ಬುಡ್ಯಾ… ನೋಡು ಪುಟ್ಯಾ ಇನ್ನು ಮೇಲೆ ಮೇಕಪ್ ಮಾಡಿಕೊಳ್ಳುವುದು ಕಡಿಮೆ ಮಾಡು. ಅದ್ಯಾವುದೋ ದೇಶದಿಂದ ಪೌಡರ್ ತರಿಸಿ ಹಚ್ಚಿಕೊಳ್ಳುತ್ತಿಯಂತೆ..ಅದನ್ನು ನಿಲ್ಲಿಸಿ ಒಲೆಯಲ್ಲಿದ್ದ ಬೂದಿ ಹಚ್ಚಿಕೋ…. ಸೌತ್ ಆಫ್ರಿಕದಿಂದ ಸ್ನೋ ತರಿಸುವುದನ್ನು ಕಡಿಮೆ ಮಾಡು. ಮೊದಲೇ ನಿನ್ನ ಆರೋಗ್ಯ ಸರಿಯಿಲ್ಲ ಎಂದು ಬುದ್ಧಿ ಹೇಳಿದ್ದಕ್ಕೆ ಪುಟ್ಯಾ… ಅಯ್ಯೋ ಬುಡಪ್ಪ ಅವೆಲ್ಲ..ನಿನಗೆ ಯಾವನೋ ಸುಳ್ಳು ಹೇಳಿರಬಹುದು. ನಾನು ಅಂತಹ ಪೌಡರ್ ಹಚ್ಚಿಯೇ ಕೊಳ್ಳುವುದಿಲ್ಲ ಎಂದು ಹೇಳಿದ. ಪಟಕ್ಕನೇ ಬುಡ್ಡೇಸಾಬನಿಂದ ಫೋನು ಕಸಿದುಕೊಂಡ ಜಿಂಗೇಸಿ… ಬುಡ್ಯಾ.. ನಾನ್ ಜಿಂಗ್ಯಾ ಅಂದ ಕೂಡಲೇ ಹೇಳೋ ಅಂದ. ಅವೆಲ್ಲ ಹೋಗಲಿ ಬಿಡು ಮತ್ತೆ ನೀನೇ ಕುರ್ಚಿಯ ಮೇಲೆ ಕುಳಿತಿಯಲ್ಲ… ಅದು ನಿನಗೆ ಹೇಗೆ ಸಾಧ್ಯವಾಯಿತು? ಎಂದು ಕೇಳಿದಾಗ… ಸ್ವಲ್ಪ ಕೆಮ್ಮಿದ ಬುಡ್ಯಾ… ದಿನಾಲೂ ಬರಿಗಾಲಿನಲ್ಲಿ ಬಯಲು ಹನುಮಪ್ಪನ ಗುಡಿಗೆ ಹೋಗಿ ಬೇಡಿಕೊಂಡು ಬರುತ್ತಿದ್ದೆ. ಶನಿವಾರ ಮಾತ್ರ ತಪ್ಪದೇ ಕಾಯಿ ಒಡೆಸುತ್ತಿದ್ದೆ. ಕೆಲವೊಂದು ಬಾರಿ ಕುಂಟ್ತಿರುಪ್ತಿ ಬಂದು ಪ್ರಸಾದ ಕೊಡುತ್ತಿದ್ದ. ಕೊನೆಗೆ ತಿಗಡೇಸಿ ಹೇಳಿದ ಅಂತ ಕರಿಲಕ್ಷಂಪತಿ ಹತ್ತಿರ ತಾಯತ ಕಟ್ಟಿಸಿಕೊಂಡೆ. ನಿನಗೂ.. ಬುಡ್ಯಾಗೂ ತಾಯತ ಕೊಡು ಎಂದು ಹೇಳಿದ್ದೇನೆ. ನೀವು ಅಲ್ಲಿಗೆ ಹೋಗಬೇಕಾದರೆ ಸೋದಿ ಮಾಮಾನನ್ನು ಒಂದು ಮಾತು ಕೇಳಿಯೇ ಹೋಗಬೇಕು… ವಿಚಾರ ಮಾಡಿ.. ಈಗ ನನಗೆ ಟೈಮಿಲ್ಲ.. ಜನ ಬಂದಿದ್ದಾರೆ. ರಾತ್ರಿ ಮಾತನಾಡುತ್ತೇನೆ ಎಂದು ಹೇಳಿ ಫೋನ್ ಕಟ್ ಮಾಡಿದ.