ಎಚ್‌ಡಿಕೆ ಆರೋಪಕ್ಕೆ ಡಿಕೆಸು ಟಾಂಗ್

Advertisement

ಬೆಂಗಳೂರು: ಕಾಂಗ್ರೆಸ್ ಪಕ್ಷದಿಂದ ನಾವು ಜೆಡಿಎಸ್ ನಾಯಕರನ್ನು ಪ್ರಧಾನಮಂತ್ರಿ, ಮುಖ್ಯಮಂತ್ರಿಯನ್ನಾಗಿ ಮಾಡಿದ್ದೇವೆ. ಆ ಮೂಲಕ ದೇಶ ಹಾಗೂ ರಾಜ್ಯದ ಜನರ ನೆನಪಿನಲ್ಲಿ ಅವರು ಉಳಿಯುವಂತೆ ಮಾಡಿದ್ದೇವೆ ಎಂದು ಸಂಸದ ಡಿ.ಕೆ. ಸುರೇಶ್ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನಂತೆ ಬಿಜೆಪಿಯವರು ಕುತ್ತಿಗೆ ಕೊಯ್ಯುವ ಕೆಲಸ ಮಾಡಿಲ್ಲ ಎಂಬ ಕುಮಾರಸ್ವಾಮಿ ಅವರ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ದೇವೇಗೌಡರನ್ನು ದೇಶ ಗುರುತಿಸುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡಿದೆ. ಕಾಂಗ್ರೆಸ್ ಪ್ರಧಾನಿ ಮಾಡದಿದ್ದರೆ ಅವರನ್ನು ದೇಶ ಸ್ಮರಿಸಿಕೊಳ್ಳುತ್ತಿರಲಿಲ್ಲ. ಕುಮಾರಸ್ವಾಮಿ ಸಿಎಂ ಕೂಡಾ ಆಗುತ್ತಿರಲಿಲ್ಲ ಎಂದು ತಿರುಗೇಟು ನೀಡಿದರು.
ಮಂಡ್ಯದಿಂದ ಕುಮಾರಸ್ವಾಮಿ ಅವರೇ ಕಣಕ್ಕಿಳಿದರೂ ನಮ್ಮ ಅಭ್ಯರ್ಥಿ ಬಲಿಷ್ಠವಾಗಿದ್ದಾರೆ, ಗೆಲ್ಲುತ್ತಾರೆ. ನಾವು ಕೊಟ್ಟಿರುವ ಐದು ಗ್ಯಾರಂಟಿಗಳು, ರಾಜ್ಯದ ಅಭಿವೃದ್ಧಿಗೆ ನಾವು ಕೈಗೊಂಡಿರುವ ಕೆಲಸಗಳನ್ನು ಇಟ್ಟುಕೊಂಡು ಚುನಾವಣೆ ಎದುರಿಸುತ್ತಿದ್ದೇವೆ. ನಾವು ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ ೨೦ಕ್ಷೇತ್ರಗಳಲ್ಲಿ ಗೆಲ್ಲುವ ಗುರಿಯೊಂದಿಗೆ ಸ್ಪರ್ಧಿಸುತ್ತಿದ್ದೇವೆ. ಬಿಜೆಪಿಯವರ ಆಂತರಿಕ ಕಲಹ ನಮಗೆ ಅನುಕೂಲವಾಗಲಿದೆ ಎಂದು ಸುರೇಶ್ ಹೇಳಿದರು.
ರಾಜ್ಯಕ್ಕೆ ಅನುದಾನ ಹಂಚಿಕೆಯಲ್ಲಿ ಅನ್ಯಾಯವಾಗಿದೆ ಎಂದು ಧ್ವನಿ ಎತ್ತಿದ್ದಕ್ಕೆ ನನಗೆ ದೇಶವಿಭಜಕ ಪಟ್ಟ ಕಟ್ಟಿದರು. ಕಾಂಗ್ರೆಸ್ ಪಕ್ಷ ಯಾವತ್ತೂ ಏಕತೆ ಮತ್ತು ಅಖಂಡತೆಯನ್ನು ಪ್ರತಿಪಾದಿಸುತ್ತದೆ. ಜನರನ್ನು ಸಣ್ಣಪುಟ್ಟ ವಿಚಾರಗಳಿಗೆ ಭಾವನೆಗಳನ್ನು ಕೆರಳಿಸಿ ಬಿಜೆಪಿ ರಾಜಕಾರಣ ಮಾಡುತ್ತಿದೆ. ಇದು ದೀರ್ಘಕಾಲ ನಡೆಯುವುದಿಲ್ಲ ಎಂಬುದನ್ನು ಈ ಚುನಾವಣೆಯೇ ಸಾಬೀತು ಮಾಡಲಿದೆ ಎಂದರು.