ಚುನಾವಣಾ ಆಯುಕ್ತರ ನೇಮಕಕ್ಕೆ ತಡೆ ಇಲ್ಲ

Advertisement

ನವದೆಹಲಿ: ಚುನಾವಣಾ ಆಯೋಗಕ್ಕೆ ಹೊಸ ಆಯುಕ್ತರ ನೇಮಕದ ವಿಷಯದಲ್ಲಿ ತಡೆ ನೀಡಲು ಸುಪ್ರೀಂ ಕೋರ್ಟ್ ಗುರುವಾರ ನಿರಾಕರಿಸಿದೆ. ಕೇಂದ್ರ ಸರ್ಕಾರ ತರಾತುರಿಯಲ್ಲಿ ಆಯೋಗಕ್ಕೆ ಇಬ್ಬರು ಆಯುಕ್ತರ ನೇಮಕ ಮಾಡಿದ್ದನ್ನು ಅಸಿಂಧುಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳನ್ನು ತಳ್ಳಿಹಾಕಿದ ನ್ಯಾಯಾಲಯ, ಕೇಂದ್ರದ ಕ್ರಮದಲ್ಲಿ ದೋಷವಿಲ್ಲ. ಆಯುಕ್ತರ ನೇಮಕ ಸಮಿತಿಯಲ್ಲಿ ನ್ಯಾಯಾಂಗ ಸದಸ್ಯರ ಸೇರ್ಪಡೆ ಕಡ್ಡಾಯವಲ್ಲ ಎಂದು ಸ್ಪಷ್ಟಪಡಿಸಿದೆ.
ಆಯುಕ್ತರ ನೇಮಕ ಸಂ­ಬಂಧ ಕೇಂದ್ರ ಮಾಡಿದ ಶಾಸನವನ್ನು ತಡೆಯುವುದಿಲ್ಲ. ಅದರ ಕಾರ್ಯಾಚರಣೆಯನ್ನು ಅಮಾನ್ಯಗೊಳಿಸುವುದಿಲ್ಲ. ಹೀಗೆ ಮಾಡಿದರೆ ಅನಿಶ್ಚಿತ ಮತ್ತು ಗೊಂದಲದ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ನ್ಯಾಯಮೂರ್ತಿಗಳಾದ ಸಂಜೀವ್‌ಕುಮಾರ್ ಮತ್ತು ದೀಪಂಕರ್ ದತ್ತಾ ಅವರಿದ್ದ ಪೀಠ ಸ್ಪಷ್ಟ ನಿಲುವು ಪ್ರಕಟಿಸಿತು.
ತಮಿಳು­ನಾಡು ರಾಜ್ಯಪಾಲರಿಗೆ ತರಾಟೆ: ಇದೇ ವೇಳೆ, ಡಿಎಂಕೆ ನಾಯಕ ಕೆ. ಪೊನ್ಮುಡಿ ಅವರನ್ನು ಸ್ಟಾಲಿನ್ ಸಂಪುಟದ ಸಚಿವರಾಗಿ ನೇಮಿಸಲು ನಿರಾಕರಿಸಿದ ತಮಿಳುನಾಡು ರಾಜ್ಯಪಾಲ ಆರ್.ಎನ್ ರವಿ ಅವರನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ನೇತೃತ್ವದ ತ್ರಿಸದಸ್ಯಪೀಠ, ಪೊನ್ಮುಡಿ ಮರುಸೇರ್ಪಡೆ ಕುರಿತಂತೆ ನ್ಯಾಯಾಲಯದ ಆದೇಶವನ್ನು ರಾಜ್ಯಪಾಲರು ಧಿಕ್ಕರಿಸಿದ್ದಾರೆ ಎಂದು ಅಸಮಾಧಾನ ಸೂಚಿಸಿತು. ನಿಮ್ಮ ರಾಜ್ಯಪಾಲರು ಏನು ಮಾಡುತ್ತಿದ್ದಾರೆ. ಅವರ ಧೋರಣೆ ಬಗ್ಗೆ ನಮಗೆ ಆತಂಕವಾಗುತ್ತಿದೆ ಎಂದು ಕಲಾಪದ ವೇಳೆ ಹಾಜರಿದ್ದ ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರನ್ನು ನ್ಯಾಯಮೂರ್ತಿಗಳು ಪ್ರಶ್ನಿಸಿದರು.
ನಾಳೆಯಿಂದ ಈ ಪ್ರಕರಣದ ಬಗ್ಗೆ ವಿಚಾರಣೆ ನಡೆಸಲು ಇಚ್ಛಿಸುವುದಿಲ್ಲ. ಸಂವಿಧಾನದ ಅನುಗುಣವಾಗಿ ಕಾರ್ಯನಿರ್ವಹಿಸುವಂತೆ ರಾಜ್ಯಪಾ­ಲರಿಗೆ ನಿರ್ದೇಶನ ನೀಡುತ್ತಿದ್ದೇವೆ ಎಂದು ಕೋರ್ಟ್ ಸ್ಪಷ್ಟವಾಗಿ ಹೇಳಿತು.