ಇನ್ನೂ ಎಷ್ಟು ವರ್ಷ ಮರಳು ಮಾಡ್ತೀರಿ

Advertisement

ಬೆಂಗಳೂರು: ಇನ್ನೂ ಎಷ್ಟು ವರ್ಷ ಭಾರತೀಯರನ್ನು ಭಾವನಾತ್ಕವಾಗಿ ಮರಳು ಮಾಡ್ತೀರಿ ನರೇಂದ್ರ ಮೋದಿ ಅವರೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿರುವ ಅವರು ಸೋಲಿನ ಭಯದಲ್ಲಿ ಕಾಂಗ್ರೆಸ್ ಬ್ಯಾಂಕ್ ಖಾತೆಗಳನ್ನು ಕೇಂದ್ರ ಬಿಜೆಪಿ ಸರ್ಕಾರ ಫ್ರೀಜ್ ಮಾಡಿದೆ. ಈ ಬಾರಿ ಬಿಜೆಪಿಯನ್ನು ದೇಶದ ಜನ ಸ್ಪಷ್ಟವಾಗಿ ತಿರಸ್ಕರಿಸಿ ಭಾರತವನ್ನು ಉಳಿಸುತ್ತಾರೆ.‌
ಬ್ರಿಟೀಷರನ್ನು ಭಾರತದಿಂದ ಓಡಿಸಲು ಸುದೀರ್ಘ ಹೋರಾಟ ನಡೆಸಿ ಹುತಾತ್ಮರಾದ, ಜೈಲು ಸೇರಿದ ಚರಿತ್ರೆ ಇರುವ ಪಕ್ಷ ಕಾಂಗ್ರೆಸ್. ಬಿಜೆಪಿ ನಮಗೆ ಎಷ್ಟೇ ತೊಂದರೆ ಕೊಟ್ಟರೂ ಕಾಂಗ್ರೆಸ್ ಕಾರ್ಯಕರ್ತರು ಹೋರಾಟದ ಹಾದಿಯಲ್ಲೇ ಎಲ್ಲವನ್ನೂ ಎದುರಿಸಲಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಜನಾಭಿಪ್ರಾಯ ಅಂತಿಮ.‌ ಕಾಂಗ್ರೆಸ್ ಜನರಿಂದ ಹಣ ಸಂಗ್ರಹಿಸಿದೆ. ಜನರು ಸ್ವಯಂಪ್ರೇರಿತವಾಗಿ ಕೊಟ್ಟ ಹಣ ಕಾಂಗ್ರೆಸ್ ಖಾತೆಯಲ್ಲಿತ್ತು. ಸಣ್ಣ ತಾಂತ್ರಿಕ ಕಾರಣ ನೀಡಿ ಇಡೀ ಖಾತೆಯನ್ನು ಫ್ರೀಜ್ ಮಾಡಿರುವುದು ಸರ್ವಾಧಿಕಾರಿ ಧೋರಣೆ.
ಎದುರಾಳಿ ಪಕ್ಷವೊಂದು ಚುನಾವಣೆ ನಡೆಸದಂತೆ ಈ ರೀತಿಯ ತೊಂದರೆ ಕೊಡುವುದು ಪ್ರಜಾಪ್ರಭುತ್ವಕ್ಕೆ ಮಾರಕ. ಕೇಂದ್ರ ಬಿಜೆಪಿಯು ಮನುಸ್ಮೃತಿಯ ಮಾರಕ ಮನಸ್ಥಿತಿಯನ್ನು ಹೊಂದಿದೆ. ಹೀಗಾಗಿ ಬಿಜೆಪಿಗೆ ಅಸಮಾನತೆ ಇರಬೇಕು, ಜಾತಿ ವ್ಯವಸ್ಥೆ ಗಟ್ಟಿಯಾಗಬೇಕು, ನಿರುದ್ಯೋಗ ಹೆಚ್ಚಾಗಬೇಕು, ರೈತರ ಸಮಸ್ಯೆಗಳಿಗೆ ಪರಿಹಾರ ಸಿಗಬಾರದು. ಈ ಸಮಸ್ಯೆಗಳ ವಿರುದ್ಧ ಕಾಂಗ್ರೆಸ್ ಹೋರಾಟ ನಡೆಸಬಾರದು ಎನ್ನುವ ಮನಸ್ಥಿತಿ ಬಿಜೆಪಿಯದ್ದಾಗಿದೆ. ಇದಕ್ಕಾಗಿ ಕಾಂಗ್ರೆಸ್ ಪಕ್ಷಕ್ಕೆ ಹಣ ಇಲ್ಲದಂತೆ ಮಾಡಲು ಬ್ಯಾಂಕ್ ಖಾತೆಗಳನ್ನು ಸೀಜ್ ಮಾಡಿದ್ದಾರೆ.
ಸಿಎಎ, ಪುಲ್ವಾಮಾ, ಅಯೋಧ್ಯೆ ಹೆಸರಲ್ಲಿ ಇನ್ನೂ ಎಷ್ಟು ವರ್ಷ ಭಾರತೀಯರನ್ನು ಭಾವನಾತ್ಕವಾಗಿ ಮರಳು ಮಾಡ್ತೀರಿ ನರೇಂದ್ರ ಮೋದಿ ಅವರೇ? ಜನರ ಬದುಕಿನ ಸಮಸ್ಯೆಗಳಿಗೆ ನೆಪಕ್ಕೂ ಸ್ಪಂದಿಸದ ನೀವು ಕೇವಲ ಭಾವನಾತ್ಮಕವಾಗಿ ಕೆರಳಿಸುತ್ತಾ ಇದ್ದೀರಿ. ಆದರೆ ಭಾರತದ ಜನತೆ ನಿಮ್ಮನ್ನು ಈ ಬಾರಿ ಅಧಿಕಾರದಿಂದ ಕೆಳಗಿಳಿಸಲಿದ್ದಾರೆ ಎಂದಿದ್ದಾರೆ.