ಅಂತರ್ಜಲ ಮಟ್ಟ ಭಾರಿ ಕುಸಿತ: ಸಂಕಷ್ಟ ನಿಶ್ಚಿತ

Advertisement

ನರಸಿಂಹರಾವ್
ಬೆಂಗಳೂರು: ರಾಜ್ಯದಲ್ಲಿ ಬರದ ಛಾಯೆ ಸಂಪೂರ್ಣವಾಗಿ ಆವರಿಸಿದ್ದು ಒಟ್ಟು ೧೩೬ ತಾಲೂಕುಗಳಲ್ಲಿ ಅಂತರ್ಜಲ ಮಟ್ಟ ಕುಸಿದುಹೋಗಿದೆ.
೨೩೬ ತಾಲೂಕುಗಳಲ್ಲಿ ೧೩೬ ತಾಲೂಕುಗಳಲ್ಲಿ ಕನಿಷ್ಠ ೫ ರಿಂದ ೨೫ ಮೀಟರ್ ವರಗೆ ಭೂಮಿಯಲ್ಲಿನ ನೀರಿನ ಪ್ರಮಾಣ ಕಡಿಮೆಯಾಗಿವೆ. ೩೮ ತಾಲೂಕುಗಳಲ್ಲಿ ೫ ಮೀಟರ್‌ಗಿಂತ ಕಡಿಮೆ, ೧೩ ತಾಲೂಕುಗಳಲ್ಲಿ ೧೦ ಮೀಟರ್‌ಗಿಂತ ಅಧಿಕವಾಗಿ ಕುಸಿತ ಕಂಡುಬಂದಿದೆ.
ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಕಲ್ಯಾಣ ಕರ್ನಾಟಕದ ಕಲಬುರಗಿ, ಯಾದಗಿರಿ, ಕೊಪ್ಪಳ, ರಾಯಚೂರು ಭಾಗಗಳಲ್ಲಿ ಅಂತರ್ಜಲ ಕುಸಿದಿರುವುದು ತೀರಾ ಆತಂಕಕ್ಕೆ ಕಾರಣವಾಗಿದೆ. ಚಿಕ್ಕಮಗಳೂರು ಜಿಲ್ಲೆಯ ೯ ತಾಲೂಕು, ಶಿವಮೊಗ್ಗದ ೭, ಕೊಡಗಿನ ೪, ಉತ್ತರಕನ್ನಡದ ೧೨, ದಕ್ಷಿಣ ಕನ್ನಡದ ನಾಲ್ಕು ಸೇರಿದಂತೆ ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕದ ಅನೇಕ ತಾಲೂಕುಗಳಲ್ಲಿ ನೀರಿನ ಮಟ್ಟ ಕುಸಿದಿರುವ ದಾಖಲೆಯಾಗಿದೆ. ಈ ಕುರಿತು ಅಂತರ್ಜಲ ನಿರ್ದೇಶನಾಲಯವು ಹತ್ತು ವರ್ಷಗಳ ಫೆಬ್ರವರಿ ತಿಂಗಳ ಅಂತರ್ಜಲ ಮಟ್ಟದ ಸರಾಸರಿ ಹಾಗೂ ಇದೇ ಫೆಬ್ರವರಿಯಲ್ಲಿ ದಾಖಲಾದ ಪ್ರಮಾಣವನ್ನು ತಾಳೆ ನೋಡಿ ಅಂತರ್ಜಲ ಕುಸಿತದ ಮಟ್ಟವನ್ನು ದಾಖಲಿಸಿಕೊಂಡಿದೆ.
ಆದರೆ ಬೆಳಗಾವಿ ಜಿಲ್ಲೆಯ ಸವದತ್ತಿ, ಬೆಂಗಳೂರು ಗ್ರಾಮಾಂತರದ ಹೊಸಕೋಟೆ, ಹಾಸನದ ಅರಸಿಕೆರೆ ಗಳಲ್ಲಿ ೧೦ ಮೀಟರ್ ಅಂತರ್ಜಲ ಹೆಚ್ಚಾಗಿದೆ.
ಮಳೆ ಆಗದಿದ್ದರೆ ಕಷ್ಟ ಗ್ಯಾರಂಟಿ…: ಈಗಾಗಲೇ ರಾಜ್ಯದ ಅನೇಕ ಕಡೆಗಳಲ್ಲಿ ಬರದಿಂದಾಗಿ ಜನರು ಗುಳೆ ಹೋಗುತ್ತಿದ್ದಾರೆ. ತಮ್ಮ ಬದುಕೂ ಅಲ್ಲದೇ ಜಾನುವಾರುಗಳನ್ನು ನೋಡಿಕೊಳ್ಳಬೇಕಾಗುತ್ತದೆ. ಆದರೆ ಅವುಗಳಿಗೆ ಹೊಲದಲ್ಲಿ ಮೇವಿಲ್ಲ, ಕೆರೆಗಳಲ್ಲಿ ನೀರಿಲ್ಲ. ಹೀಗಾಗಿ ಕೈಗೆ ಬಂದಷ್ಟು ದುಡ್ಡಿಗೆ ಜಾನುವಾರುಗಳನ್ನು ಮಾರಿ ಊರು ಬಿಟ್ಟು ಹೋಗುತ್ತಿದ್ದಾರೆ. ಮಳೆ ಆಗದಿದ್ದರೆ ಮುಂದಿನ ಗತಿ ಏನು ಎಂಬ ಚಿಂತೆ ಅವರನ್ನು ಕಾಡುತ್ತಿದೆ.
ಸಾವಿರ ಅಡಿ ಕೊರೆದರೂ ಜಲವಿಲ್ಲ..: ಕೋಲಾರ, ಚಿಕ್ಕಮಗಳೂರು, ರಾಯಚೂರು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಸಾವಿರ ಅಡಿಗಳಷ್ಟು ಕೊರೆದರೂ ನೀರು ಸಿಗದಂತಾಗಿದೆ. ಈಗಾಗಲೇ ಹೊಲಗಳಲ್ಲಿ ಮೊದಲಿದ್ದ ನಾಲ್ಕು ಐದಿಂಚು ನೀರು ಬರುತ್ತಿರುವುದು ಈಗ ಅವುಗಳು ಸಂಪೂರ್ಣ ಬತ್ತಿ ಹೋಗಿವೆ. ಇದರಿಂದಾಗಿ ರೈತರು ತೀರ ಕಷ್ಟಪಡುತ್ತಿದ್ದಾರೆ. ಇದೇ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಜನರು ಮತ್ತು ಜಾನುವಾರುಗಳು ನೀರು ಆಹಾರ ಇಲ್ಲದೇ ಕೊರಗುವಂತಾಗುತ್ತದೆ.

೮೧೩ ಕೆರೆಗಳಲ್ಲಿ ಹನಿ ನೀರಿಲ್ಲ…
ರಾಜ್ಯದ ವಿವಿಧ ತಾಲೂಕುಗಳಲ್ಲಿರುವ ೮೧೩ ಕೆರೆಗಳಲ್ಲಿ ಹನಿನೀರು ಇಲ್ಲ. ಇದರಿಂದಾಗಿ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಕೊರತೆ ಎದ್ದು ಕಾಣುತ್ತಿದೆ. ರಾಜ್ಯದ ಬಹುತೇಕ ಕರೆಗಳಲ್ಲಿ ನೀರಿನ ಸಂಗ್ರಹ ಸಾಮರ್ಥ್ಯದ ಅರ್ಧದಷ್ಟೂ ಇಲ್ಲ ಎಂದು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.