ಸಮಾಜ ಸುಧಾರಿಸುವ ಲೇಖನಿ ನಿಮ್ಮದಾಗಲಿ

Advertisement

ಧಾರವಾಡ: ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದಲ್ಲಿಯ ಅಂಕುಡೊಂಕುಗಳನ್ನು ತಿದ್ದುವ ಮೂಲಕ ಸ್ವಸ್ಥ ಸಮಾಜ ನಿರ್ಮಾಣ ಮಾಡುವುದು ಪತ್ರಿಕಾ ರಂಗದ ಕೆಲಸವಾಗಿದೆ ಎಂದು ಸಂಯುಕ್ತ ಕರ್ನಾಟಕ ಪತ್ರಿಕೆ ಹುಬ್ಬಳ್ಳಿ ವಿಭಾಗದ ಸ್ಥಾನಿಕ ಸಂಪಾದಕ ಷಣ್ಮುಖ ಕೋಳಿವಾಡ ಹೇಳಿದರು.
ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಗುರುವಾರ ಪತ್ರಕರ್ತ ದಿ. ಮೊಹರೆ ಹಣಮಂತರಾಯ ದತ್ತಿ ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕಾ ರಂಗ ಸಾಕಷ್ಟು ಜವಾಬ್ದಾರಿಯುತ ರಂಗವಾಗಿದೆ. ಸಮಾಜದಲ್ಲಿ ಆಗುತ್ತಿರುವ ಪ್ರಾದೇಶಿಕ ಅಸಮಾನತೆ, ಸರಕಾರ ತೋರುತ್ತಿರುವ ನಿಷ್ಕಾಳಜಿ, ಹಗರಣಗಳು, ಭ್ರಷ್ಟಾಚಾರ ಹೀಗೆ ಸಮಾಜ ಸುಧಾರಣೆಯಲ್ಲಿ ಪತ್ರಕರ್ತರು ನೇರ ಲೇಖನಿಯ ಮೂಲಕ ಸಮಾಜದ ಹಾಗೂ ಸರಕಾರದ ಕಣ್ತೆರೆಸುವ ಕೆಲಸ ಮಾಡಬೇಕು ಎಂದರು.
ಇಂದು ಬದಲಾಗುತ್ತಿರುವ ಸಮಾಜಕ್ಕೆ ತಕ್ಕಂತೆ ಪತ್ರಿಕಾ ರಂಗದಲ್ಲಿಯೂ ಸಾಕಷ್ಟು ಬದಲಾವಣೆಗಳಾಗಿವೆ. ಡಿಜಿಟಲ್ ಯುಗದಲ್ಲಿ ಇಂದಿನ ಯುವ ಪತ್ರಕರ್ತರು ಕೆಲಸ ಮಾಡುತ್ತಿದ್ದಾರೆ. ಅಲ್ಲದೇ ಇತ್ತೀಚೆಗೆ ಕೃತಕ ಬುದ್ಧಿಮತ್ತೆ(ಎಐ) ಹೆಚ್ಚಿನ ಪ್ರಮಾಣದಲ್ಲಿ ಸದ್ದು ಮಾಡುತ್ತಿದೆ. ಆದರೆ, ಪತ್ರಕರ್ತರಾಗುವವರು ನಿರಂತರ ಓದುವುದನ್ನು ರೂಢಿಸಿಕೊಳ್ಳಬೇಕು. ನಮ್ಮಲ್ಲಿ ಆಳವಾದ ಜ್ಞಾನವಿದ್ದಾಗ ಮಾತ್ರವೇ ಲೇಖನಿಯ ಮೂಲಕ ಸಮಾಜ ಸುಧಾರಿಸಲು ಸಾಧ್ಯವಾಗುತ್ತದೆ ಎಂದರು.
ಸಂಯುಕ್ತ ಕರ್ನಾಟಕಕ್ಕೆ ಮೊಹರೆ ಹಣಮಂತರಾಯರು ಕೊಡುಗೆ ಅಪಾರವಿದೆ. ಅವರು ತಮ್ಮ ವೈಯಕ್ತಿಕ ಜೀವನವನ್ನೂ ಸಂಪೂರ್ಣವಾಗಿ ಪತ್ರಿಕೆಯ ಅಭಿವೃದ್ಧಿಗೆ ಮುಡುಪಾಗಿಟ್ಟಿದ್ದರು. ಅಲ್ಲದೇ ಕರ್ನಾಟಕ ವಿಶ್ವವಿದ್ಯಾಲಯದ ಸ್ಥಾಪನೆಗೂ ಮೊಹರೆ ಹಣಮಂತರಾಯರ ಕೊಡುಗೆ ಇದೆ ಎನ್ನುವುದು ಇತಿಹಾಸದ ಪುಟದಲ್ಲಿ ದಾಖಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಷಣ್ಮುಖ ಕೋಳಿವಾಡ ದಂಪತಿಯನ್ನು ಸನ್ಮಾನಿಸಲಾಯಿತು. ವಿಭಾಗದ ಮುಖ್ಯಸ್ಥ ಪ್ರೊ. ಜೆ.ಎಂ. ಚಂದುನವರ ಅಧ್ಯಕ್ಷತೆ ವಹಿಸಿದ್ದರು. ಡಾ. ಸಂಜಯಕುಮಾರ ಮಾಲಗತ್ತಿ, ಡಾ. ನಯನಾ ಗಂಗಾಧರಪ್ಪ, ಡಾ. ಶಕುಂತಲಾ ಸೊರಟೂರ, ಡಾ. ನಾಗರಾಜ ರೋಣದ, ಪ್ರೊ. ಎಚ್.ಬಿ. ನೀಲಗುಂದ, ಡಾ. ಮಂಜುನಾಥ ಅಡಿಗಲ್, ಪತ್ರಕರ್ತರಾದ ಸುನೀಲ ಪಾಟೀಲ, ರವೀಶ ಪವಾರ, ಪ್ರಕಾಶ ಚಳಗೇರಿ ಸೇರಿದಂತೆ ಇತರರು ಇದ್ದರು.

ಧಾರವಾಡ ಕವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಯುಕ್ತ ಕರ್ನಾಟಕ ಪತ್ರಿಕೆಯ ಹುಬ್ಬಳ್ಳಿ ವಿಭಾಗದ ಸ್ಥಾನಿಕ ಸಂಪಾದಕ ಷಣ್ಮುಖ ಕೋಳಿವಾಡ ದಂಪತಿಯನ್ನು ಸನ್ಮಾನಿಸಲಾಯಿತು.