ಸಕಲಂ ಶೀಲೇನ ಕುರ್ಯಾತ್ ವಶಂ

Advertisement

ಈ ಜಗತ್ತಿನಲ್ಲಿ ಒಬ್ಬಬ್ಬರನ್ನು ಒಂದೊಂದು ಸಾಧನಗಳಿಂದ ವಶಪಡಿಸಿ ಕೊಳ್ಳಬೇಕು. ಎಲ್ಲರನ್ನು ವಶಪಡಿಸಿಕೊಳ್ಳಲು ಉಪಾಯವೆಂದರೆ ಶೀಲ ಮಾತ್ರ.
ಹೀಗೆ ಹೇಳಲು ಕಾರಣ ಒಬ್ಬೊಬ್ಬರು ಒಂದೊಂದನ್ನು ಅಪೇಕ್ಷೆ ಪಡುತ್ತಾರೆ. ಇದನ್ನು ತಿಳಿಪಡಿಸುವ ಸುಭಾಷಿತವೊಂದು ಪ್ರಸಿದ್ಧವಾಗಿದೆ. `ಮಿತ್ರಂ ಸ್ವಚ್ಛತಯಾ ರಿಪುಂ ನಯಬಲೈಃ ಲುಬ್ಧಂ ಧನೈಃ ಈಶ್ವರಂ ಕಾಣ ದ್ವಿಜಂ ಆದರೇಣ ಯುವತೀಂ ಪ್ರೇಮ್ಣಾ ಶ್ರಮೈಃ ಬಾಂಧವಾನ್ ಅತ್ಯುಗ್ರಂ ಸ್ತುತಿಭಿಃ ಗುರುಂ ಪ್ರಣತಿಭಿಃ ಮೂರ್ಖಂ ಕಥಾಭಿಃ ಬುಧಂ ವಿದ್ಯಾಭಿಃ ರಸಿಕಂ ರಸೇನ ಸಕಲಂ ಶೀಲೇನ ಕುರ್ಯಾತ್ ವಶು’.
ಮಿತ್ರನನ್ನು ಸ್ವಚ್ಛತೆಯಿಂದ ಗೆಲ್ಲಬೇಕು. ಯಾಕೆಂದರೆ ಒಬ್ಬ ಮಿತ್ರನು ಇನ್ನೊಬ್ಬ ಮಿತ್ರನಲ್ಲಿ ಸ್ವಚ್ಛತೆಯ ಬಗ್ಗೆ ಗಮನಹರಿಸುತ್ತಾನೆ. ಶತ್ರುಗಳನ್ನು ಉಪಾಯದಿಂದ ಕೂಡಿದ ಬಲದಿಂದ ವಶಪಡಿಸಿಕೊಳ್ಳಬೇಕು. ಯಾವಾಗಲೂ ಹಣದ ಬಗ್ಗೆ ಹಪಹಪಿಸುವ ಲೋಭಿಯನ್ನು ಹಣದ ಮೂಲಕ ವಶಪಡಿಸಿಕೊಳ್ಳಬೇಕು. ಈಶ್ವರನನ್ನು ಶ್ರದ್ಧಾ-ಭಕ್ತಿಪೂರ್ವಕವಾದ ಕರ್ಮಯೋಗದ ಮೂಲಕ ವಶಪಡಿಸಿಕೊಳ್ಳಬೇಕು.
ದ್ವಿಜನನ್ನು ಗೌರವ ಆದರಗಳಿಂದ ನೋಡಿದರೆ ವಶನಾಗುತ್ತಾನೆ. ಏಕೆಂದರೆ ಅವನು ಗೌರವ ಆದರವನ್ನು ಅಪೇಕ್ಷಿಸುತ್ತಾನೆ. ಯುವತಿಯನ್ನು ಪ್ರೇಮದಿಂದ ವಶಪಡಿಸಿಕೊಳ್ಳಬೇಕು. ಶಾಂತವಾದ ನಡತೆಯಿಂದ ಬಾಂಧವರನ್ನು ವಶಪಡಿಸಿಕೊಳ್ಳಬೇಕು. ಅತಿಯಾದ ಉಗ್ರಸ್ವಭಾವವುಳ್ಳವನನ್ನು ‘ನೀನೇ ಇಂದ್ರ ನೀನೇ ಚಂದ್ರ’ಎಂದು ಹೊಗಳಿದರೆ ವಶನಾಗಿ ಬಿಡುತ್ತಾನೆ. ನಮಸ್ಕಾರ ಹಾಕಿದರೆ ಗುರುಗಳಿಗೆ ಖುಷಿಯಾಗಿಬಿಡುತ್ತದೆ. ಮೂರ್ಖನಿಗೆ ಒಣ ಹರಟೆಯ ಮಾತುಗಳನ್ನಾಡಿದರೆ ಸಂತೋಷಗೊಳ್ಳುತ್ತಾನೆ. ಬೇರೆ ಬೇರೆ ವಿದ್ಯೆಗಳ ಅಥವಾ ಶಾಸ್ತ್ರಗಳ ಬಗ್ಗೆ ಮಾತನಾಡಿದರೆ ವಿದ್ವಾಂಸನು ವಶನಾಗಿಬಿಡುತ್ತಾನೆ. ರಸಿಕನಾದ ಮನುಷ್ಯನನ್ನು ರಸವತ್ತಾದ ಮಾತುಗಳಿಂದ ವಶಪಡಿಸಿಕೊಳ್ಳಬೇಕು.
‘ಸಕಲಂ ಶೀಲೇನ ಕುರ್ಯಾತ್ ವಶಂ’ಇಲ್ಲಿ ಸ್ವಲ್ಪ ವಿಶೇಷವಿದೆ. ಎಲ್ಲವನ್ನೂ ತನ್ನ ಒಳ್ಳೆಯ ಸ್ವಭಾವ, ಒಳ್ಳೆಯ ನಡತೆಯ ಮೂಲಕ ವಶಪಡಿಸಿಕೊಳ್ಳಲು ಸಾಧ್ಯವಿದೆ. ಯಾಕೆಂದರೆ ಒಳ್ಳೆಯ ಶೀಲ ಎಲ್ಲರಿಗೂ ಮೆಚ್ಚುಗೆಯನ್ನುಂಟುಮಾಡುತ್ತದೆ. ಮಿತ್ರನಿರಲಿ-ಶತ್ರುವಿರಲಿ-ವಿದ್ವಾಂಸನಿರಲಿ-ಮೂರ್ಖನಿರಲಿ-ಭಗವಂತನಿರಲಿ-ಗುರುವಿರಲಿ ಎಲ್ಲರಿಗೂ ಒಳ್ಳೆಯ ಶೀಲವೆಂದರೆ ಇಷ್ಟ, ಶೀಲವಂತ ವ್ಯಕ್ತಿ ಇಷ್ಟ.
ಶೀಲದ ಮಹಿಮೆಯಿದು. ಅದು ಎಲ್ಲರನ್ನೂ ಆಕರ್ಷಿಸಬಲ್ಲದು. ಎಷ್ಟರ ಮಟ್ಟಿಗೆಂದರೆ ದ್ವೇಷಿಸುವ ಶತ್ರುರಾಜನನ್ನು ತನ್ನ ಶೀಲದಿಂದ ವಶಪಡಿಸಿಕೊಂಡ (ಅಂದರೆ ದ್ವೇಷವನ್ನು ತ್ಯಜಿಸಿ ಮಿತ್ರನಾಗುವಂತೆ ಮಾಡಿದ) ರಾಜರ ಇತಿಹಾಸ ನಮ್ಮ ಭೂಮಿಯಲ್ಲಿದೆ. ಆದ್ದರಿಂದ ಮನುಷ್ಯನಾಗಿ ಹುಟ್ಟಿ ಒಳ್ಳೇಯ ಶೀಲವನ್ನು ತನ್ನದಾಗಿಸಿಕೊಳ್ಳಬೇಕು.