ಧಾರವಾಡದಿಂದ ಪಕ್ಷೇತರನಾಗಿ ಸ್ಪರ್ಧೆಗೆ ಅಣಿ

Advertisement

ಹುಬ್ಬಳ್ಳಿ: ರಾಜ್ಯದಲ್ಲಿ ಕಾಂಗ್ರೆಸ್‌ನಲ್ಲಿಯೂ ಕುಟುಂಬ ರಾಜಕಾರಣ ನಡೆದಿದ್ದು ಬಿಜೆಪಿ ಜೊತೆ ಹೊಂದಾಣಿಕೆ ರಾಜಕಾರಣವನ್ನು ಅನೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮಾಡುತ್ತಿರುವುದು ಗೊತ್ತಾಗಿದೆ. ಇದರಿಂದ ಬೇಸತ್ತು ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ಮಾಜಿ ಸಂಸದ ಹಾಗೂ ಕಾಂಗ್ರೆಸ್ ಮುಖಂಡ ಮಂಜುನಾಥ ಕುನ್ನೂರು ಹೇಳಿದರು.
ಸ್ಪರ್ಧೆ ಬಯಸಿ ಕಾಂಗ್ರೆಸ್ ಪಕ್ಷಕ್ಕೆ ಅರ್ಜಿ ಹಾಕಿದ್ದೆ. ಆದರೆ, ಹೈಕಮಾಂಡ್ ನಮ್ಮ ಅರ್ಜಿ ಪರಿಗಣಿಸದೇ ಕಡೆಗಣಿಸಿದೆ. ಇದರಿಂದ ನನಗೆ ಅನ್ಯಾಯವಾಗಿದೆ ಎಂದು ಎರಡು ಬಾರಿ ಶಾಸಕ, ಒಂದು ಬಾರಿ ಸಂಸದನಾಗಿದ್ದ ಕುನ್ನೂರ ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಲಿಂಗಾಯತರಿಗೆ ಟಿಕೆಟ್ ನೀಡಬೇಕಾಗಿತ್ತು. ನೀಡದೇ ಇರುವುದರಿಂದ ಲಿಂಗಾಯತರಿಗೆ ಅನ್ಯಾಯವಾಗಿದೆ. ಸಮಾಜವನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿದ ಅವರು, ಹಿತೈಷಿಗಳು, ಸಮಾಜದ ಮುಖಂಡರು ಹಾಗೂ ಧಾರ್ಮಿಕ ಮುಖಂಡರು ಸ್ಪರ್ಧೆ ಮಾಡುವಂತೆ ಒತ್ತಡ ಹೇರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಪರ್ಧೆಗೆ ಅಣಿಯಾಗುತ್ತಿದ್ದೇನೆ ಎಂದರು.
ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿ ಹಾಗೂ ಕೇಂದ್ರ ಸಚಿವರಾಗಿರುವ ಪ್ರಲ್ಹಾದ ಜೋಶಿ ಅವರು, ಬೇಡ್ತಿ, ವರದಾ ನದಿ ನೀರು ತರುವುದು, ಕಳಸಾ ಬಂಡೂರಿ ಮಹದಾಯಿ ಯೋಜನೆ ಇತ್ಯರ್ಥ ಮಾಡಲು ಆಗಲಿಲ್ಲ. ಇವರಿಂದ ಈ ಕ್ಷೇತ್ರಗಳಿಗೆ ಅನ್ಯಾಯವಾಗಿದೆ ಎಂದರು.
ಏಪ್ರಿಲ್ ೧೨ರಿಂದ ಏ. ೧೯ರವರೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯಲಿದೆ. ಇದಕ್ಕೂ ಮೊದಲು ಬೆಂಬಲಿಗರು, ಹಿತೈಷಿಗಳ ಸಭೆ ಕರೆದು ಸ್ಪರ್ಧೆಯ ರೂಪುರೇಷೆಗಳನ್ನು ಚರ್ಚಿಸಿ ಸೂಕ್ತ ತೀರ್ಮಾನ ಮಾಡಲಾಗುವುದು ಎಂದು ಹೇಳಿದರು.

ದಿಂಗಾಲೇಶ್ವರಶ್ರೀ ಸ್ಪರ್ಧಿಸಿದರೆ..
ಒಂದು ವೇಳೆ ಧಾರವಾಡ ಕ್ಷೇತ್ರದಿಂದ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧೆ ಮಾಡಿದರೆ, ನಾನು ಕಣದಿಂದ ಹಿಂದೆ ಸರಿಯುತ್ತೇನೆ. ಆದರೆ, ನಾನು ಸ್ಪರ್ಧೆ ಮಾಡಿದರೆ ಸ್ವಾಮೀಜಿ ಬೆಂಬಲ ಕೇಳುವುದಿಲ್ಲ. ದಿಂಗಾಲೇಶ್ವರ ಶ್ರೀಗಳನ್ನು ನಾನು ಭೇಟಿಯಾಗಿಲ್ಲ. ಯಾವುದೇ ಸಲಹೆ ಪಡೆದಿಲ್ಲ ಎಂದು ಮಂಜುನಾಥ ಕುನ್ನೂರ ಸ್ಪಷ್ಟಪಡಿಸಿದರು.