ನಾಗರಿಕ ಕಾಯ್ದೆ ಜಾರಿಯಿಂದ ಮುಸ್ಲಿಮರ ಪೌರತ್ವ ರದ್ದಾಗದು

Advertisement

ಗಾಜಿಯಾಬಾದ್: ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಬಂದರೆ ದೇಶದಲ್ಲಿರುವ ಯಾರೇ ಮುಸ್ಲಿಮರು ಪೌರತ್ವ ಕಳೆದುಕೊಳ್ಳುವುದಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ಸಿಎಎ ಕಾಯ್ದೆ ಕುರಿತಂತೆ ವಿರೋಧ ಪಕ್ಷಗಳು ಗೊಂದಲ ಸೃಷ್ಟಿಸುತ್ತಿರುವ ಹಿನ್ನೆಲೆಯಲ್ಲಿ ದೇಶದ ಮುಸ್ಲಿಮರಿಗೆ ಸಚಿವರು ಈ ರೀತಿ ಭರವಸೆ ನೀಡಿದ್ದಾರೆ.
ಘಾಜಿಯಾಬಾದ್‌ನಲ್ಲಿ ಚುನಾವಣಾ ರ‍್ಯಾಲಿಯನ್ನು ಉದ್ದೇಶಿಸಿ ಭಾಷಣ ಮಾಡಿದ ಅವರು, ಭಾರತೀಯ ಜನತಾ ಪಾರ್ಟಿಯು ಜಾತಿ, ಧರ್ಮದ ಆಧಾರ ಮೇಲೆ ರಾಜಕೀಯ ಮಾಡುತ್ತಿಲ್ಲ. ರಾಷ್ಟçನಿರ್ಮಾಣಕ್ಕೆ ಕಟಿಬದ್ಧವಾಗಿದೆ ಎಂದರು. ನಮ್ಮ ಸರ್ಕಾರ ರಚನೆಯಾದರೆ ಪೌರತ್ವ ಕಾಯ್ದೆ ಜಾರಿಗೆ ತರುತ್ತೇವೆ ಎಂದು ಹೇಳಿದ್ದೆವು. ಅದರಂತೆ ೨೦೧೪ರಲ್ಲಿ ನಾನು ಗೃಹ ಸಚಿವನಾಗಿದ್ದಾಗ ಪ್ರಧಾನಿಯ ಜೊತೆ ಮಾತುಕತೆ ನಡೆಸಿದ ನಂತರ ಈ ಪ್ರಕ್ರಿಯೆ ಆರಂಭಿಸಿದ್ದೆ. ಲೋಕಸಭೆಯಲ್ಲಿ ಈ ಮಸೂದೆಯನ್ನು ಅಂಗೀಕರಿಸಿದರೂ ರಾಜ್ಯಸಭೆಯಲ್ಲಿ ಬಹುಮತದ ಕೊರತೆ ಕಾರಣ ಕಾಯ್ದೆ ನೆನೆಗುದಿಗೆ ಬಿದ್ದಿತ್ತು ಎಂದರು.
ಆನಂತರ ಅಮಿತ್ ಶಾ ಗೃಹಸಚಿವರಾದಾಗ ಈ ಜವಾಬ್ದಾರಿ ವಹಿಸಿಕೊಂಡು ಸಂಸತ್ತಿನ ಎರಡೂ ಸದನಗಳಲ್ಲೂ ಪೂರ್ಣಬಹುಮತದೊಂದಿಗೆ ಮಸೂದೆ ಅಂಗೀಕಾರವಾಗುವಂತೆ ಮಾಡಿದರು ಎಂದವರು ವಿವರಿಸಿದರು.
ಪ್ರತಿಪಕ್ಷದವರು ಈಗ ಮುಸ್ಲಿಮರಲ್ಲಿ ಭ್ರಮೆ ಹುಟ್ಟಿಸುತ್ತಿದ್ದಾರೆ. ದೇಶದಿಂದ ಮುಸ್ಲಿಮರನ್ನು ಹೊರಹಾಕಲಾಗುತ್ತದೆ ಎಂದು ಭಯಹುಟ್ಟಿಸುತ್ತಿದ್ದಾರೆ. ನಾವು ವಸುದೈವ ಕುಟುಂಬಕಂ ಪರಿಕಲ್ಪನೆಯಲ್ಲಿ ನಂಬಿಕೆ ಹೊಂದಿದವರು. ಜಗತ್ತಿನಲ್ಲಿ ಯಾವುದೇ ಜಾತಿ, ಧರ್ಮದಲ್ಲಿ ಜನಿಸಿದರೂ ಯಾವುದೇ ಧರ್ಮದ ಅನುಯಾಯಿಯಾದರೂ ಪ್ರತಿಯೊಬ್ಬರೂ ನಮ್ಮ ಕುಟುಂಬದವರು ಎಂದು ಪರಿಗಣಿಸುತ್ತೇವೆ ಎಂದರು. ರಾಮಮಂದಿರ ನಿರ್ಮಾಣ ಹಾಗೂ ತ್ರಿವಳಿ ತಲಾಖ್ ರದ್ದತಿ ಕುರಿತು ನಾವು ಜನಸಂಘ ಕಾಲದಿಂದಲೂ ಭರವಸೆ ನೀಡುತ್ತಾ ಬಂದಿದ್ದೇವೆ. ಆ ಭರವಸೆಗಳನ್ನು ಈಗ ಈಡೇರಿಸಿದ್ದೇವೆ ಎಂದೂ ಹೇಳಿಕೊಂಡರು. ಹಿಂದೂ ಮಹಿಳೆಯರಿರಲಿ, ಮುಸ್ಲಿಮ್, ಕ್ರಿಶ್ಚಿಯನ್, ಪಾರ್ಸಿ-ಹೀಗೆ ಎಲ್ಲರನ್ನೂ ನಾವು ಗೌರವದಿಂದ ನೋಡುತ್ತೇವೆ. ಆದರೆ ಮದುವೆಯಾದ ನಂತರ ಯಾರೇ ವ್ಯಕ್ತಿ ತನ್ನ ಹೆಂಡತಿಗೆ ಮೂರು ಬಾರಿ ತಲಾಖ್ ಹೇಳುವ ಮೂಲಕ ತ್ಯಜಿಸುವುದನ್ನು ನಾವು ಒಪ್ಪಿಕೊಳ್ಳುವುದಿಲ್ಲ. ಈ ಪದ್ದತಿಯನ್ನು ಕೊನೆಗೊಳಿಸಲು ನಿರ್ಧರಿಸಿದ್ದೆವು. ಹಾಗೆಯೇ ಅದನ್ನು ಸಾಧಿಸಿದ್ದೇವೆ ಎಂದವರು ವಿವರಿಸಿದರು.