ಘರ್‌ಘರ್ ಗ್ಯಾರಂಟಿ ಅಭಿಯಾನಕ್ಕೆ ಖರ್ಗೆ ಚಾಲನೆ

Advertisement

ನವದೆಹಲಿ: ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಯಕ್ರಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ದೇಶದ ೮ ಕೋಟಿ ಮನೆಗಳನ್ನು ತಲುಪುವ `ಘರ್‌ಘರ್ ಗ್ಯಾರಂಟಿ’ ಅಭಿಯಾನಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಚಾಲನೆ ನೀಡಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಯಾವೆಲ್ಲ ಭರವಸೆಗಳನ್ನು ಈಡೇರಿಸುತ್ತದೆ ಎನ್ನುವ ಮಾಹಿತಿ ಇರುವ ಗ್ಯಾರಂಟಿ ಕಾರ್ಡ್ಗಳನ್ನು ಮನೆಗಳಿಗೆ ತೆರಳಿ ವಿತರಿಸಲಾಯಿತು. ಈ ಗ್ಯಾರಂಟಿ ಕಾರ್ಡ್ಗಳನ್ನು ದೇಶಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಹಂಚಲಿದ್ದಾರೆ ಎಂದು ಖರ್ಗೆ ವಿವರಿಸಿದರು.
ಕಾಂಗ್ರೆಸ್ ೫ ಗ್ಯಾರಂಟಿಗಳ ಅಡಿಯಲ್ಲಿ ೨೫ ಭರವಸೆಗಳನ್ನು ಈಡೇರಿಸುತ್ತದೆ. ಇಂಡಿಯಾ ಬ್ಲಾಕ್ ಅಧಿಕಾರಕ್ಕೆ ಬಂದಲ್ಲಿ ಏನೆಲ್ಲ ಮಾಡಲಿದ್ದೇವೆ ಎನ್ನುವುದರ ಕುರಿತು ಜನರಲ್ಲಿ ಅರಿವು ಮೂಡಿಸುವುದೇ ಈ ಅಭಿಯಾನ ಮುಖ್ಯ ಉದ್ದೇಶ. ಈ ಸಂದರ್ಭದಲ್ಲಿ ಮೋದಿಯನ್ನು ಅಣಕವಾಡಿದ ಖರ್ಗೆ, ಅವರು ‘ಮೋದಿ ಗ್ಯಾರಂಟಿ’ ಬಗ್ಗೆ ಮಾತನಾಡುತ್ತಾರೆ. ಆದರೆ ಅವರು ಯಾವ ಭರವಸೆಯನ್ನು ನೀಡಿದ್ದಾರೋ, ಅದನ್ನು ಎಂದೂ ಈಡೇರಿಸಿಲ್ಲ. ತಮ್ಮ ಪಕ್ಷ ಅಧಿಕಾರಕ್ಕೆ ಬಂದಲ್ಲಿ ವಿದೇಶಗಳಲ್ಲಿ ಇಟ್ಟಿರುವ ಕಪ್ಪುಹಣವನ್ನು ತಂದು ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ ೧೫ ಲಕ್ಷ ರೂಪಾಯಿ ನೀಡುವುದಾಗಿ ಹೇಳಿದ್ದರು. ಅದು ಆಗಲಿಲ್ಲ. ರೈತರ ಆದಾಯ ದ್ವಿಗುಣಗೊಳಿಸಲಾಗುವುದು ಎಂದರು. ಅದನ್ನೂ ಮಾಡಿಲ್ಲ. ಅವರು ಸುಳ್ಳು ಭರವಸೆಗಳನ್ನು ನೀಡುತ್ತಾರೆ. ಆದರೆ ಕಾಂಗ್ರೆಸ್ ಏನು ಹೇಳುತ್ತದೋ ಅದನ್ನು ಮಾಡುತ್ತದೆ ಎಂದರು.