ಮುಸಾವೀರ್ ಹುಸೇನ್ ಪ್ರಮುಖ ಆರೋಪಿ

Advertisement

ಬೆಂಗಳೂರು: ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟದ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಥಹಳ್ಳಿಯ ಮುಸಾವೀರ್ ಹುಸೇನ್ ಶಾಜೀಬ್ (೩೦) ಪ್ರಮುಖ ಆರೋಪಿಯಾಗಿದ್ದಾನೆ ಎಂದು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಧಿಕಾರಿಗಳು ಹೇಳಿದ್ದಾರೆ.
ಮಾರ್ಚ್ ೧ರಂದು ನಡೆದಿದ್ದ ಕೆಫೆ ಸ್ಫೋಟದಲ್ಲಿ ಭಾಗಿಯಾಗಿರುವ ಪ್ರಮುಖ ಆರೋಪಿ ಮುಸಾವೀರ್ ಹುಸೇನ್ ಬಗ್ಗೆ ಹಲವು ಸಾಕ್ಷಿಗಳು ದೊರೆತಿವೆ. ಅಲ್ಲದೇ ಈತನ ಜೊತೆ ತಲೆಮರೆಸಿಕೊಂಡಿರುವ ಇನ್ನೊಬ್ಬ ಆರೋಪಿ ಅಬ್ದುಲ್ ಮಥೀನ್ ಅಹ್ಮದ್ ತಾಹ ಕೂಡ ಕೃತ್ಯದಲ್ಲಿ ಭಾಗಿಯಾಗಿದ್ದಾನೆ ಎಂದು ಶುಕ್ರವಾರ (ಏ.೦೫ ರಂದು) ಎನ್‌ಐಎ ಅಧಿಕಾರಿಗಳು ಪ್ರಟಕಣೆ ಹೊರಡಿಸಿದ್ದಾರೆ. ಇವರ ಜೊತೆ ಒಡನಾಟ ಹೊಂದಿದ್ದ ವ್ಯಕ್ತಿಗಳನ್ನು ಒಬ್ಬೊಬ್ಬರಾಗಿ ಪತ್ತೆ ಮಾಡಲಾಗುತ್ತಿದೆ.
ಶಂಕಿತ ಮುಜಮಿಲ್ ಶರೀಫ್‌ನನ್ನು ಈಗಾಗಲೇ ಬಂಧಿಸಿದ್ದಾರೆ. ಬಂಧಿತ ಆರೋಪಿ ನೀಡಿದ ಮಾಹಿತಿ ಆಧಾರದ ಮೇಲೆ ಮುಸಾವೀರ್ ಬಾಂಬ್ ಸ್ಫೋಟದ ಪ್ರಮುಖ ಪಾತ್ರ ವಹಿಸಿದ್ದು, ಕಚ್ಚಾ ಬಾಂಬ್ (ಐಇಡಿ) ತಯಾರಿಸಿದ್ದಾನೆ ಎಂಬ ಮಾಹಿತಿ ಅಧಿಕಾರಿಗಳಿಗೆ ಲಭ್ಯವಾಗಿದೆ. ಅಲ್ಲದೇ ಮುಜಮಿಲ್ ವಿಚಾರಣೆ ಸಂದರ್ಭದಲ್ಲಿ ದೊರೆತ ಮಾಹಿತಿಯ ಆಧಾರದ ಮೇಲೆ ತೀರ್ಥಹಳ್ಳಿಯ ಬಿಜೆಪಿ ಮುಖಂಡನೋರ್ವನನ್ನು ವಶಕ್ಕೆ ಪಡೆದಿರುವ ಎನ್‌ಐಎ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.