ಸಂಕಲ್ಪ ಯಾತ್ರೆಯಿಂದ ವಿಜಯ ಯಾತ್ರೆ: ಸಿಎಂ ಬೊಮ್ಮಾಯಿ

ಜನಸಂಕಲ್ಪ ಯಾತ್ರೆ
Advertisement

ರಾಯಚೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಜನ ಸಂಕಲ್ಪ ಯಾತ್ರೆಗೆ ರಾಯಚೂರು ತಾಲೂಕಿನ ಗಿಲೆಸುಗೂರು ಗ್ರಾಮದಲ್ಲಿ ಅದ್ಧೂರಿ ಚಾಲನೆ ದೊರೆಯಿತು.
ಬೃಹತ್ ಸಮಾವೇಶದಲ್ಲಿ ಮರದಿಂದ ಭತ್ತವನ್ನು ಸುರಿಯುವ ಮೂಲಕ ಜನ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ಅಸ್ತಿತ್ವ ಉಳಿಸಿಕೊಳ್ಳಲು ಪಾದಯಾತ್ರೆ ಮಾಡುತ್ತಿದ್ದಾರೆ ಎಂದರು.
‘ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಮಾಜವಾದಿ ಹಿನ್ನೆಲೆಯಿಂದ ಬಂದಿರುವವರು. ಯಾವಾಗ ಕಾಂಗ್ರೆಸ್ ಸೇರಿದರೋ ಅಂದಿನಿಂದ ಸಮಾಜವಾದವನ್ನು ಮಡಿಚಿ ಮನೆಯಲ್ಲಿಟ್ಟಿದ್ದಾರೆ. ದುಃಖದ ಸಂಗತಿಯೆಂದರೆ ಆ ಸಣ್ಣ ಹುಡುಗನ ಕೈಕೆಳಗೆ ಸೇವೆ ಮಾಡುತ್ತೀರಲ್ಲ. ಅವರು ಓಡು ಎಂದರೆ ಓಡುತ್ತೀರಿ, ಕುಳಿತುಕೋ ಎಂದರೆ ಕುಳಿತುಕೊಳ್ಳುತ್ತೀರಿ. ಇದು ಸ್ವಾಭಿಮಾನದ ಸಂಕೇತವಲ್ಲ.”
“ಅಧಿಕಾರಕ್ಕಾಗಿ ಏನೆಲ್ಲವನ್ನೂ ಮಾಡಲು ಸಿದ್ಧರಾಗಿದ್ದಿರಿ. ರಾಹುಲ್ ಗಾಂಧಿ ರಾಜಕೀಯದಲ್ಲಿ ಪ್ರಸ್ತುತವಾಗಬೇಕೆಂದು ಪಾದಯಾತ್ರೆ ಮಾಡುತ್ತಿದ್ದಾರೆ. ಈ ಯಾತ್ರೆ ದೇಶಕ್ಕಾಗಿ, ಜನರಿಗಾಗಿ, ದೀನದಲಿತರಿಗಾಗಿ ಅಲ್ಲ. ಅಂಥ ಭಾರತ್ ಜೋಡೋ ಯಾತ್ರೆಗೆ ನೀವು ಸಾಥ್ ನೀಡುತ್ತಿದ್ದೀರಿ, ನಿಮ್ಮ ಸ್ಥಾನ ಎಲ್ಲಿತ್ತು, ಏನಾಗಿದೆ ಎಂದು ನೀವು ನೋಡಿಕೊಳ್ಳಿ. ನಿಮ್ಮಿಂದ ನಾವು ಪಾಠ ಕಲಿಯಬೇಕಿಲ್ಲ” ಎಂದರು.