ಪಿಒಕೆ ಜನರಿಗೆ ಭಾರತ ಸೇರುವ ತವಕ

Advertisement

ಸತ್ನಾ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಇದೀಗ ಜನತೆ ಭಾರತದೊಂದಿಗೆ ಸೇರುವ ಕುರಿತು ಮಾತನಾಡುತ್ತಿದ್ದಾರೆ ಎಂದಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್, ಪಿಒಕೆ ಭಾರತದ ಭಾಗವಾಗಿತ್ತು, ಭಾಗವಾಗಿದೆ ಮತ್ತು ಭಾಗವಾಗಿಯೇ ಮುಂದುವರಿಯುತ್ತದೆ ಎಂದು ಖಡಾ ಖಂಡಿತವಾಗಿ ಹೇಳಿದರು. ಮಧ್ಯಪ್ರದೇಶದ ಸತ್ನಾದಲ್ಲಿ ಅವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಪಿಒಕೆಯನ್ನು ಪಾಕಿಸ್ತಾನದಿಂದ ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ ಎಂದು ಅಲ್ಲಿನ ಜನತೆ ನಂಬಿದ್ದಾರೆ. ಆದರೆ ಅವರಿಗೆ ಮೋದಿ ಮೇಲೆ ವಿಶ್ವಾಸವಿದೆ. ಆ ಭಾಗ ಮೋದಿ ಅವರ ಭಾರತದ ಆಳ್ವಿಕೆಗೆ ಸೇರಿದಲ್ಲಿ ಅದು ಪ್ರಗತಿ ಕಾಣುತ್ತದೆ ಎನ್ನುವ ವಿಶ್ವಾಸ ಅವರಿಗೆ ಬಂದಿದೆ. `ಸಂವಿಧಾನದ ೩೭೦ನೇ ವಿಧಿಯನ್ನು ರದ್ದುಗೊಳಿಸುತ್ತೇವೆ ಎಂದು ನಾವು ಮೊದಲಿನಿಂದಲೂ ಹೇಳುತ್ತಾ ಬಂದಿದ್ದೆವು. ಅದನ್ನು ಮಾಡಿ ತೋರಿಸಿದ್ದೇವೆ. ಇಂದು ಎಲ್ಲ ರಾಜ್ಯಗಳಂತೆಯೇ ಕಾಶ್ಮೀರವೂ ಒಂದು ರಾಜ್ಯವಾಗಿದೆ’ ಎಂದರು.
೨೦೧೪ರಲ್ಲಿ ಭಾರತ ವಿಶ್ವದ ೧೧ನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ದೇಶವಾಗಿತ್ತು. ಇದೀಗ ಅದು ೫ನೇ ಸ್ಥಾನಕ್ಕೆ ಬಂದಿದೆ. ೨೦೭೦ರ ಹೊತ್ತಿಗೆ ಈ ದೇಶ ನಂಬರ್ ಒನ್ ದೇಶವಾಗಿ ಹೊರಹೊಮ್ಮಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು. ಭಾರತ ರಾಮರಾಜ್ಯವಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಎಲ್ಲರನ್ನೂ ಜೊತೆಗೆ ಕರೆದೊಯ್ಯಲು ನಾವು ಬಯಸುತ್ತೇವೆ. ಯಾವುದೇ ಧರ್ಮದ ಅನುಯಾಯಿಯಾದರೂ ಒಟ್ಟಿಗೆ ಸಾಗುತ್ತೇವೆ. ತ್ರಿವಳಿ ತಲಾಖ್ ಅನಿಷ್ಟ ಪದ್ಧತಿಯನ್ನು ರದ್ದುಗೊಳಿಸಿದ್ದೇವೆ ಎಂದರು.
ಗಡಿಯಲ್ಲಿ ಭಾರತ ತೆಗೆದುಕೊಂಡಿರುವ ಮೂಲಸೌಕರ್ಯ ಅಭಿವೃದ್ಧಿ ಕೆಲಸಗಳನ್ನು ಪ್ರಸ್ತಾಪಿಸಿ, ಭಾರತದ ಬಳಿ ರಸ್ತೆಗಳನ್ನು ನಿರ್ಮಿಸಬೇಡಿ ಎಂದು ಕಾಂಗ್ರೆಸ್‌ನ ರಕ್ಷಣಾ ಸಚಿವರು ಹೇಳುತ್ತಿದ್ದರು. ಅಭಿವೃದ್ಧಿಪಡಿಸಿದಲ್ಲಿ ಚೀನಾ ಪ್ರವೇಶಿಸುತ್ತದೆ ಎಂದು ಭಯ ವ್ಯಕ್ತಪಡಿಸುತ್ತಿದ್ದರು. ಮೋದಿ ಪ್ರಧಾನಿಯಾದ ನಂತರ ಗಡಿಯಲ್ಲಿನ ಎಲ್ಲಾ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗಿದೆ. ಗಡಿಯ ಹಳ್ಳಿಗಳನ್ನು ನಾವು ಮೊದಲ ಗ್ರಾಮವೆಂದು ಪರಿಗಣಿಸಿದ್ದೇವೆ ಇದು ಧೋರಣೆಯಲ್ಲಿ ಆಗಿರುವ ಬದಲಾವಣೆ ಎಂದು ವಿವರಿಸಿದರು.