ಕಾಂಗ್ರೆಸ್ ಸೇರುವಂತೆ ಆರೆಸ್ಸೆಸ್‌ನವರು ಕಳುಹಿಸಿದ್ದರು ಎಂದ ಬಿಜೆಪಿ ನಾಯಕ

Advertisement

ಭೋಪಾಲ್: ಮಧ್ಯಪ್ರದೇಶದ ಮ್ಹೌ ಕ್ಷೇತ್ರದಲ್ಲಿ ಕಳೆದ ವರ್ಷ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿ­­ ಸಿದ್ದ ರಾಮಕಿಶೋರ್ ಶುಕ್ಲಾ ಈಗ ಬಿಜೆಪಿಗೆ ವಾಪಸ್ಸಾಗಿದ್ದಾರೆ. ಅಂದ ಹಾಗೆ, ಇವರು ಮೂಲತಃ ಬಿಜೆಪಿಯವರೇ. ಕಳೆದ ವರ್ಷದ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ಗೆ ಜಿಗಿದಿದ್ದರು. ಈಗ ವಾಪಸ್ಸಾಗಿದ್ದಾರೆ. ಕಮಲ ಪಾಳಯಕ್ಕೆ ವಾಪಸ್ಸಾದ ನಂತರ ಶುಕ್ಲಾ ನೀಡಿರುವ ಹೇಳಿಕೆ, ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ‘ಕಾಂಗ್ರೆಸ್ ಸೇರುವಂತೆ ನನ್ನನ್ನು ಕಳುಹಿಸಿದ್ದವರೇ ಆರೆಸ್ಸೆಸ್‌ನವರು’ ಎಂದು ಶುಕ್ಲಾ ಹೇಳಿಕೊಂಡಿದ್ದಾರೆ. ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಶುಕ್ಲಾ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. ಕೇವಲ ೨೯,೧೪೪ ಮತಗಳನ್ನು ಪಡೆದು, ಮೂರನೆಯವರಾಗಿ ಬಂದು ಠೇವಣಿ ಕಳೆದುಕೊಂಡಿದ್ದರು. ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕಾಂಗ್ರೆಸ್‌ನ ಮಾಜಿ ಶಾಸಕ ಅಂತರ್‌ಸಿಂಗ್ ದರ್ಬಾರ್ ಎರಡನೇ ಸ್ಥಾನದಲ್ಲಿದ್ದರು. ಅವರನ್ನು ೩೪ ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಬಿಜೆಪಿ ಹಿರಿಯ ನಾಯಕಿ ಉಷಾ ಠಾಕೂರ್ ಸೋಲಿಸಿದ್ದರು. ಈ ಕ್ಷೇತ್ರದಲ್ಲಿ ಬಿಜೆಪಿ ಸ್ವಲ್ಪ ದುರ್ಬಲವಾಗಿದ್ದರಿಂದ ಈ ಪ್ಲಾನ್ ಮಾಡಬೇಕಾಯಿತು ಎಂದಿದ್ದಾರೆ. ಶುಕ್ಲಾ ಪ್ರಕಾರ ಅಂತರ್ ಸಿಂಗ್ ದರ್ಬಾರ್ ಅವರನ್ನೂ ಬಿಜೆಪಿಯವರೇ ನಿಲ್ಲಿಸಿದ್ದರಂತೆ. ಕಾಂಗ್ರೆಸ್‌ಗೆ ಹೋಗುವಂತೆ ಕಳುಹಿಸಿದ್ದು ಯಾರು ಎಂದು ಕೇಳಿದ ಪ್ರಶ್ನೆಗೆ, ವಿಶ್ವ ಹಿಂದೂ ಪರಿಷತ್‌ನ ವಿಭಾಗ ಸಂಘಟನಾ ಕಾರ್ಯದರ್ಶಿ ಅಭಿಷೇಕ್ ಉಡೇನಿಯ ಎನ್ನುವವರ ಹೆಸರನ್ನು ಶುಕ್ಲಾ ಹೇಳಿದ್ದಾರೆ.
ಶುಕ್ಲಾ ಹೇಳಿಕೆಯನ್ನು ದರ್ಬಾರ್ ಅಲ್ಲಗಳೆದಿದ್ದಾರೆ. ಈ ಕುರಿತು ಸ್ಪಷ್ಟನೆ ನೀಡದಿದ್ದಲ್ಲಿ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಉಡೇನಿಯ ಕೂಡ, ಶುಕ್ಲಾ ಹೇಳಿಕೆ ಆಧಾರರಹಿತ ಎಂದು ಹೇಳಿದ್ದಾರೆ. ಆದರೂ ಬೆಂಕಿಯಿಲ್ಲದೆ ಹೊಗೆ ಬರುವುದಿಲ್ಲ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.