ಸಂಕಲ್ಪ ಮಾಡು; ಅದಕ್ಕೇನು ಟ್ಯಾಕ್ಸ್ ಕಟ್ಟಬೇಕಾ..?

tax
Advertisement

ಇದೇನಿದು ಸಂಕಲ್ಪ… ಎಂದು ತಲೆಕೆಡೆಸಿಕೊಂಡ ಕರಿಭಾಗೀರತಿ ಓಣಿ… ಓಣಿ ಅಡ್ಡಾಡಿ ಇನ್ನು ಮೇಲೆ ಸಂಕಲ್ಪ ಮಾಡಿಕೊಳ್ಳಿ ಎಂದು ಹೇಳಿಕೊಂಡು ಬರುತ್ತಿದ್ದಾಳೆ. ಏನಮ್ಮಾ ಇದೂ ಸಂಕಲ್ಪ ಅಂದರೆ ಅದಕ್ಕೆ…ಸೋದಿ ಮಾಮೋರು ಹೇಳಿದ್ದಾರಲ್ಲ ಅದೇ ಸಂಕಲ್ಪ. ಉದಾಹರಣೆಗೆ…ಸುಮಾರಣ್ಣೋರು ಹೆಣ್ಮಕ್ಳು ಅಡ್ಡದಾರಿ ಹಿಡಿದಾರೆ ಅಂದರು.ಎಲ್ಲರೂ ಏನಯ್ಯ ಇದೂ ಅಂದ ಕೂಡಲೇ ನಾ ಹಂಗಂದಿಲ್ಲ..ಹಂಗಂದಿಲ್ಲ ಅಂತ ಹೇಳಿದರು. ಅವರು ಮೊದಲೇ ಹೀಗೆ ಹೇಳಬೇಕು ಎಂದು ಸಂಕಲ್ಪ ಮಾಡಿಕೊಂಡಿದ್ದರೋ ಏನೋ. ಮದ್ರಾಮಣ್ಣ ಸೋದಿ ಮಾಮಾಗೆ ಏನೋ ಅಂದರು. ಯಾಕಂತೀರಿ? ಎಂದ ಕೂಡಲೇ ಅಂಗಲ್ಲಂಗಲ್ಲ ಅದು ಸಂಕಲ್ಪ. ಚುನಾವಣೆಗೆ ಮುನ್ನ ನೋಡ್ರಪಾ… ನಿಮಗ ಕುಂತಲ್ಲೇ ತಿಂಗಳಿಗೆ ಅರ್ಧ ಕ್ವಿಂಟಲ್ ಅಕ್ಕಿ…ತೊಗರಿಬ್ಯಾಳಿ…ಹತ್ತು ಲೀಟರ್ ಒಳ್ಳೆಣ್ಣಿ…ತಲೆಗೆ ಹಚ್ಚಿಕೊಳ್ಳು ಐದು ಲೀಟರ್ ಕೊಬ್ರಿಎಣ್ಣಿ….ಹೊಲಕ್ಕೆ ಹೋಗಿ ಬರಲು ಬುಲ್ಲೆಟ್ ಬೈಕು…ಅದಕ್ಕೆ ಫ್ರೀ ಪೆಟ್ರೋಲು…ಮತ್ತೆ ಕೈ ಖರ್ಚಿಗೆ ಅಂತ ಹತ್ತು ಸಾವಿರ ರೂ. ಇನ್ನ ಹೆಣ್ಣುಮಕ್ಕಳಿಗೆ ಸಿಲಿಂಡರ್…ವಾರಕ್ಕೊಂದು ತೋಪಸೆರಗಿನ ಸೀರೆ…ಮುಖಕ್ಕೆ ಹಚ್ಚಿ ಕೊಳ್ಳಲು ಪಾಂಡ್ಸ್ ಪೌಡರ್…ಮನೆ ಅಂಗಳದಲ್ಲಿ ಬೋರ್ ಹಾಕಿಸಿ ಅದಕ್ಕೆ ನಳದ ಸಂಪರ್ಕ. ಮತ್ತೆ ಅವರಿಗೂ ಗಂಡನ ಮುಂದೆ ಕೈ ಒಡ್ಡುವುದು ಬೇಡ ಅಂತ ಹದಿನೈದು ದಿನಕ್ಕೆ ಐದು ಸಾವಿರ ರೂ….ಮತ್ತೆ ವೀಕೆಂಡ್ ಟೂರು ಹೋಗಲು..ಬಸ್ಸು …ಟ್ರೇನು ಹಾಗೂ ವಿಮಾನದಲ್ಲೂ ಪುಗಸೆಟ್ಟೆ ಕರಕೊಂಡು ಹೋಗುವ ಸಂಕಲ್ಪ ಮಾಡಿದ್ದೇವೆ ಎಂದು ತಿಗಡಿ ಪಕ್ಷದವರು ಹೇಳುತ್ತಿದ್ದಾರೆ. ಇದು ಅವರು ಮಾಡಿಕೊಂಡ ಸಂಕಲ್ಪ. ಸಂಕಲ್ಪ ಎಂಬ ಹೆಸರೇ ಅದ್ಭುತವಾಗಿದೆ. ಇನ್ನು ನಂಗೆ ವಯಸ್ಸಾಯಿತು. ಮುಂದುನ ಬಾರಿ ನಿಲ್ಲುವುದಿಲ್ಲ ಅಂತ ಹೇಳುತ್ತಾರಲ್ಲ ಅದೂ ಕೂಡ ಸಂಕಲ್ಪ ಅಷ್ಟೆ. ನೀ ಏನಾದರೂ ಮಾಡು ಮೊದಲು ಸಂಕಲ್ಪ ಮಾಡು ಅನ್ನುವುದೇ ಇದರ ತಾತ್ಪರ್ಯ. ನಾಳೆಯಿಂದ ಸಿಕ್ಕ ಸಿಕ್ಕವರಿಗೆ ಅದು ಕೊಡ್ತೀನಿ…ಇದುಕೊಡ್ತೀನಿ ಅಂತ ಹೇಳಿ. ಅವರು ತಿರುಗಿ ಕೇಳಿದರೆ….ಹೆ ಹೆ ಹೆ ಇದು ಸಂಕಲ್ಪ ಅಂತ ಹೇಳಿ. ಹೇಳುವುದಕ್ಕೇನು ಟ್ಯಾಕ್ಸ್ ಕಟ್ಟಬೇಕಿಲ್ಲ ಏನಿಲ್ಲ ಅಲ್ಲವೇ ಎಂಬುದು ಕರಿಭಾಗೀರತಿ ವ್ಯಾಖ್ಯಾನ.