ಕಾಂಗ್ರೆಸ್‌ನಿಂದ ದಲಿತರಿಗೆ ಅನ್ಯಾಯ: ಜೋಶಿ

Advertisement

ಹುಬ್ಬಳ್ಳಿ: ಅಹಿಂದ, ದಲಿತ ಪರ ಎನ್ನುವ ಕಾಂಗ್ರೆಸ್ ಸರ್ಕಾರ, ದಲಿತರಿಗಿದ್ದ ಮೀಸಲಾತಿಯನ್ನು ಕಿತ್ತುಕೊಂಡು ಮುಸ್ಲಿಮರಿಗೆ ಕೊಡಲು ಹುನ್ನಾರ ನಡೆಸಿದೆ ಎಂದು ಕೇಂದ್ರ ಸಚಿವ ಪ್ರಲ್ಲಾದ ಜೋಶಿ ಆರೋಪಿಸಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮುಸ್ಲಿಮರ ಓಲೈಕೆಗಾಗಿ ಕಾಂಗ್ರೆಸ್, ದಲಿತರಿಗೆ ಅನ್ಯಾಯ ಮಾಡುತ್ತಿದೆ. ಡಾ.ಬಿ.ಆರ್. ಅಂಬೇಡ್ಕರ್, ಬಾಬು ಜಗಜೀವನ ರಾಮ್ ಅವರಿಗೆ ಅವಮಾನ ಮಾಡಿದ್ದು, ಅವಕಾಶವಾದಿ ರಾಜಕಾರಣ ಮಾಡುತ್ತಿದೆ ಎಂದು ಕುಟುಕಿದರು.
ವಸೂಲಿಗಾಗಿಯೇ ಕರ್ನಾಟಕಕ್ಕೆ ಬರುವ ಕಾಂಗ್ರೆಸ್ ನಾಯಕರಿಗೆ ಪ್ರಧಾನಿ ಮೋದಿ ಅವರ ಬಗ್ಗೆ ಹಾಗೂ ಬಿಜೆಪಿಯ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ. ಕರ್ನಾಟಕ, ತೆಲಂಗಾಣದಲ್ಲಿ ಮಾತ್ರ ಕಾಂಗ್ರೆಸ್ ಅಧಿಕಾರದಲ್ಲಿದ್ದು, ಹಿಮಾಚಲ ಪ್ರದೇಶದಲ್ಲಿ ಅವರ ಸರ್ಕಾರ ತೇಲಾಡುತ್ತಿದೆ. ದೇಶದ ಜನ ಕಾಂಗ್ರೆಸ್ಸಿಗರ ಡಬಲ್ ಸ್ಟ್ಯಾಂಡ್ ಅನ್ನು ಅರಿತಿದ್ದಾರೆ. ಹಾಗಾಗಿ ಕಾಂಗ್ರೆಸ್ ಡೋಲಾಯಮಾನ ಸ್ಥಿತಿ ತಲುಪಿದೆ ಎಂದರು.
ಕೇವಲ ೨೩೦ ಕ್ಷೇತ್ರಗಳಿಗೆ ಸ್ಪರ್ಧಿಸಿರುವ ಕಾಂಗ್ರೆಸ್, ಅಧಿಕಾರದ ಕನಸು ಕಾಣುತ್ತಿದೆ. ಅಧಿಕಾರಕ್ಕೆ ಬರುವಷ್ಟು ಸ್ಥಾನಗಳಿಗೂ ಸ್ಪರ್ಧಿಸದ ಇವರು ಬಿಜೆಪಿ, ಮೋದಿ ಬಗ್ಗೆ ಮಾತಾಡುತ್ತಾರೆ. ಇದು ಅವರ ಹತಾಶೆಯನ್ನು ತೋರಿಸುತ್ತದೆ. ದೇಶದಲ್ಲಿನ ಎಲ್ಲ ಸರ್ವೆಗಳಲ್ಲಿ ಬಿಜೆಪಿ ೩೭೦-೩೮೦ ಸ್ಥಾನ ಗೆಲ್ಲುತ್ತದೆ ಎಂಬ ವರದಿ ಇದೆ. ಆದರೆ, ನಾವು ೪೦೦ ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ಹೊಂದಿದ್ದೇವೆ ಎಂದು ಕೇಂದ್ರ ಸಚಿವ ಪ್ರಲಾದ ಜೋಶಿ ಹೇಳಿದರು.