ನೇಹಾ ಪೋಷಕರಿಗೆ ಧೈರ್ಯ ತುಂಬಿದ ಸಿಎಂ

Advertisement

ಹುಬ್ಬಳ್ಳಿ: 120 ದಿನಗಳಲ್ಲಿ ನ್ಯಾಯ ನೀಡಿಸುತ್ತೇವೆ ಎಂದು ನೇಹಾ ತಂದೆ ನಿರಂಜನಯ್ಯ ಹಿರೇಮಠ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಬಿವಿಬಿ ಕ್ಯಾಂಪಸ್‌ನಲ್ಲಿ ನಡೆದ ನೇಹಾ ಹಿರೇಮಠ ಹತ್ಯೆ ಹಿನ್ನೆಲೆಯಲ್ಲಿ ಮೃತಳ ಮನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ನೀಡಿ ನೇಹಾ ಅವರ ತಂದೆ, ಮಹಾನಗರ ಪಾಲಿಕೆ ಸದಸ್ಯ ನಿರಂಜನಯ್ಯ ಹಿರೇಮಠ ಹಾಗೂ ತಾಯಿ ಗೀತಾ ಹಿರೇಮಠ ಅವರಿಗೆ ಸಾಂತ್ವನ ನೀಡಿ, ಸರಕಾರ ಅವರೊಂದಿಗೆ ಇರುವುದಾಗಿ ಭರವಸೆ ನೀಡಿ ಧೈರ್ಯ ತುಂಬಿದರು.
ನಿಮ್ಮ ಕುಟುಂಬದೊಂದಿಗೆ ನಮ್ಮ ಸರ್ಕಾರವಿದೆ. ಆರೋಪಿಗೆ ಕಠಿಣ ಶಿಕ್ಷೆಯಾಗುವಂತೆ ಸರ್ಕಾರ ನೋಡಿಕೊಳ್ಳಲಿದೆ. ಪ್ರಕರಣ ತನಿಖೆ ಬಗ್ಗೆ ಯಾವುದೇ ರೀತಿ ಅನುಮಾನ ಬೇಡ. ಧೈರ್ಯವಾಗಿರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆತ್ಮಸ್ಥೈರ್ಯದ ಮಾತು ಹೇಳಿ ನೇಹಾ ತಂದೆ ನಿರಂಜನ ಅವರನ್ನು ಸಂತೈಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ಘಟನೆಯನ್ನು ತೀವ್ರವಾಗಿ ಖಂಡನೆ ಮಾಡುವೆ. ಹೀಗಾಗಿ ಸಿಐಡಿ ತನಿಖೆಗೆ ವಹಿಸಲಾಗಿದೆ. ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಯಾವುದು ಅತ್ಯಂತ ಕಠಿಣ ಶಿಕ್ಷೆ ಇದೆ ಅದನ್ನು ಕೊಡಿಸುವ ಪ್ರಯತ್ನ ಮಾಡುತ್ತೇವೆ. ಆದರೆ, ಈ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ನಾನು ಸಾಂತ್ವನ ಹೇಳಲು ಬಂದಿದ್ದೇನೆ ರಾಜಕೀಯ ಮಾತನಾಡಲ್ಲ. ಅವರ ಕುಟುಂಬಕ್ಕೆ ರಕ್ಷಣೆ ನೀಡಲು ಸಿದ್ಧ ಎಂದರು.