ಅಲ್ಪಸಂಖ್ಯಾತರ ಓಲೈಕೆಗಾಗಿ ಕಾಂಗ್ರೆಸ್‌ ಕಸರತ್ತು

Advertisement

ಬೆಳಗಾವಿ: ಛತ್ರಪತಿ ಶಿವಾಜಿ ಮಹಾರಾಜ ಕಿತ್ತೂರು ರಾಣಿ ಚೆನ್ನಮ್ಮ ಸೇರಿದಂತೆ ನಮ್ಮ ದೇಶದ ರಾಜ ಮಹಾರಾಜರನ್ನು ಅವಹೇಳನಕಾರಿಯಾಗಿ ಬಿಂಬಿಸಿ ಅಪಮಾನಿಸುತ್ತಿರುವ ಕಾಂಗ್ರೆಸ್‌ಗೆ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಬೆಳಗಾವಿಯ ಮಾಲಿನಿ ಸಿಟಿಯಲ್ಲಿ ಭಾನುವಾರ ಆಯೋಜಿಸಿದ್ದ ಬಿಜೆಪಿ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, ನಮ್ಮ ದೇಶದ ಸಂಸ್ಕೃತಿ ಉಳಿಸುವಲ್ಲಿ ಅಪಾರ ಕೊಡುಗೆ ನೀಡಿದ್ದ ರಾಜ ಮನೆತನಗಳಿಗೆ ಅಗೌರವ ಕೊಡುತ್ತಿರುವ ಕಾಂಗ್ರೆಸ್‌ನ ಯುವರಾಜ, ದೇಶವನ್ನು ಲೂಟಿ ಮಾಡಿದ ನವಾಬರು, ನಿಜಾಮರು ಮತ್ತು ಸುಲ್ತಾನರ ಬಗ್ಗೆ ತುಟಿಪಿಟಿಕೆನ್ನದೆ ಅಲ್ಪಸಂಖ್ಯಾತರ ತುಷ್ಟೀಕರಣದಲ್ಲಿ ತೊಡಗಿದೆ. ಲೂಟಿಕೋರರ ಬಗ್ಗೆ ಮಾತನಾಡಲು ಇವರ ಬಾಯಿಗೆ ಬೀಗ ಬಿದ್ದಿದೆ ಎಂದು ಕುಟುಕಿದರು.
ಶಿವಾಜಿ ಮಹಾರಾಜರು, ರಾಣಿ ಚೆನ್ನಮ್ಮ, ಮೈಸೂರು ಮಹಾರಾಜರು, ಬನಾರಸಿ ರಾಜರು ಸೇರಿದಂತೆ ಈ ನಾಡನ್ನು ಆಳಿದ ರಾಜಮಹಾರಾಜರ ಗತ ವೈಭವವನ್ನು ಅವರ ಕೊಡುಗೆಯನ್ನು ಕಾಂಗ್ರೆಸ್ ಮರೆತಿದೆ. ದೇಶ ವಿಭಜನೆಗೆ ಕುಮ್ಮಕ್ಕು ನೀಡಿದ್ದು ನವಾಬರೇ ಎಂಬುದು ಅವರಿಗೆ ಗೊತ್ತಿಲ್ಲವೇ? ಸದ್ಯ ದೇಶದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರುವ ಎಲ್ಲಾ ರಾಜ್ಯಗಳಲ್ಲಿ ಕಾನೂನು ಸುವ್ಯವಸ್ಥೆ ತೀರಾ ಹದಗೆಟ್ಟಿದ್ದು, ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದೆ. ಕರ್ನಾಟಕದಲ್ಲಿಯೂ ಇಂತಹದ್ದೇ ಪರಿಸ್ಥಿತಿ ಇದ್ದು, ಈ ಹಿಂದೆ ಅಭಿವೃದ್ಧಿಯಲ್ಲಿ ಮುನ್ನುಗ್ಗುತ್ತಿದ್ದ ರಾಜ್ಯದ ಹುಬ್ಬಳ್ಳಿಯಲ್ಲಿ ಈಗ ಹಾಡುಹಗಲೇ ಕಾಲೇಜ್ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿನಿಯ ಕೊಲೆ, ಚಿಕ್ಕೋಡಿಯಲ್ಲಿ ಜೈನ ಮುನಿ ಹತ್ಯೆ, ಆದಿವಾಸಿ ಮಹಿಳೆಯ ಅತ್ಯಾಚಾರ, ಕಫೆಯೊಂದರಲ್ಲಿ ಬಾಂಬ್ ಸ್ಫೋಟದಂತಹ ಪ್ರಕರಣಗಳು ರಾಜಾರೋಷವಾಗಿ ನಡೆಯುತ್ತಿದ್ದರೂ, ಆರೋಪಿಗಳಿಗೆ ಶಿಕ್ಷೆ ನೀಡಲು ಸರ್ಕಾರ ಹಿಂದೇಟು ಹಾಕುತ್ತಿದೆ ಎಂದು ಅವರು ಆರೋಪಿಸಿದರು.
ದೇಶದಲ್ಲಿ ಅಧಿಕಾರಕ್ಕೆ ಬರುವ ಹಗಲುಗನಸು ಕಾಣುತ್ತಿರುವ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಅಲ್ಪಸಂಖ್ಯಾತರ ಓಲೈಕೆಗಾಗಿ ಕಸರತ್ತು ನಡೆಸಿದೆ. ಅಧಿಕಾರಕ್ಕೆ ಬಂದ ನಂತರ ಎಲ್ಲರ ಆಸ್ತಿ, ನಗ-ನಗದು ಹಣ, ಅಂತಸ್ಥನ್ನು ಲೆಕ್ಕ ಹಾಕಿ ಕಬಳಿಸಿಕೊಳ್ಳುವ ಹೊಸ ಯೋಜನೆಯೊಂದನ್ನು ಜಾರಿಗೆ ತರುವ ಬಗ್ಗೆ ಹೇಳಿಕೊಂಡಿದೆ. ಪಿತ್ರಾರ್ಜಿತ ಆಸ್ತಿಯಲ್ಲಿ ಶೇ. ೫೫ರಷ್ಟು ತೆರಿಗೆ ರೂಪದಲ್ಲಿ ಕಾಂಗ್ರೆಸ್ ಸರ್ಕಾರ ವಶಪಡಿಸಿಕೊಳ್ಳುವ ಹುನ್ನಾರ ಹೊಂದಿದ್ದು, ತಮ್ಮ ಮಕ್ಕಳಿಗಾಗಿ ಅರೆಹೊಟ್ಟೆ ತಿಂದು ತಾವು ಉಳಿಸಿರುವ ಆಸ್ತಿಯನ್ನು ಅಲ್ಪಸಂಖ್ಯಾತರಿಗೆ ಹಂಚುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಆದರೆ ಮೋದಿ ಜೀವಂತ ಇರುವ ತನಕವೂ ತಮ್ಮ ಮಂಗಲಸೂತ್ರ ಹಾಗೂ ಆಸ್ತಿಯನ್ನು ಕಬಳಿಸುವುದಕ್ಕೆ ಯಾರಿಗೂ ಬಿಡುವುದಿಲ್ಲ. ಅಂತಹ ಯೋಚನೆಗಳಿಂದ ವಿಚಲಿತರಾಗಬೇಡಿ. ನಾನು ೨೪*೭ ಸದಾ ನಿಮ್ಮೊಂದಿಗಿದ್ದೇನೆ ಎಂದರು.