ಎಕ್ಸಾಂನಲ್ಲಿ ಫೇಲ್‌: ಪೋಷಕರಿಗೆ ತಿಳಿಯುತ್ತೆಂದು ಹೆದರಿ ವಿದ್ಯಾರ್ಥಿ ಆತ್ಮಹತ್ಯೆ

ಸಾವು
Advertisement

ಆನೇಕಲ್: ಫೇಲ್ ಆದ ವಿಚಾರ ಪೋಷಕರಿಗೆ ತಿಳಿಯುತ್ತೆಂದು ಹೆದರಿ ಕೆರೆಗೆ ಹಾರಿ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಜಿಗಣಿಯಲ್ಲಿ ಈ ಘಟನೆ ನಡೆದಿದ್ದು. ಅಮೃತೇಶ್ ಪಾಂಡೆ (21) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಆರ್.ವಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಅಮೃತೇಶ್, ಹಾಸ್ಟೆಲ್‌ನಲ್ಲಿ ಇದ್ದುಕೊಂಡು ಕಾಲೇಜಿಗೆ ಹೋಗಿ ಬರುತ್ತಿದ್ದ. ಮೂರನೇ ವರ್ಷದ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಅಮೃತೇಶ್, ಎರಡು ವಿಷಯದಲ್ಲಿ ಫೇಲ್ ಆಗಿದ್ದ. ಲೋಕಸಭೆ ಚುನಾವಣಾಗೆ ಮತ ಹಾಕಲು ಜಿಗಣಿಗೆ ಬಂದಿದ್ದ ಅಮೃತೇಶ್, ಫೇಲ್ ಆಗಿರುವ ವಿಚಾರ ತಂದೆಗೆ ತಿಳಿಯುತ್ತೆ ಎಂದು ಹೆದರಿಬಿಟ್ಟಿದ್ದ. ಕಾಲೇಜಿನವರು ಫೋನ್ ಮಾಡುತ್ತಾರೆ ಎಂದು ತಂದೆ ಫೋನ್‌ನಲ್ಲಿ ನಂಬರ್‌ಗಳನ್ನು ಬ್ಲಾಕ್ ಮಾಡಿದ್ದ. ಆದರೆ ಇತ್ತ ಅಮೃತೇಶ್‌ ತಂದೆ ವಿಜಯ್‌ ಶಂಕರ್‌ ಆರನೇ ಸೆಮಿಸ್ಟರ್‌ಗೆ ಆಡ್ಮಿಷನ್ ಮಾಡಿ ಕಾಲೇಜಿಗೆ ಬಿಟ್ಟು ಬರುತ್ತೇನೆ ಎಂದು ಹೇಳಿದ್ದಾರೆ. ತಂದೆಯ ಜತೆ ಕಾಲೇಜಿಗೆ ಹೋದರೆ ಫೇಲ್ ಆದ ವಿಚಾರ ತಿಳಿಯುತ್ತೆ. ಸರಿಯಾಗಿ ಕಾಲೇಜಿಗೂ ಹೋಗದೇ ಇರುವುದು ತಿಳಿದು ಬಿಡುತ್ತೆ ಎಂದು ಅಮೃತೇಶ್ ಭಯಗೊಂಡಿದ್ದ. ಹೀಗಾಗಿ ಮೇ 10ರಂದು ಮನೆಯಿಂದ ಹೊರಟ ಅಮೃತೇಶ್ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ. ಇತ್ತ ಆತನಿಗಾಗಿ ಅಮೃತೇಶ್‌ ಪೋಷಕರು ಎಲ್ಲೆಡೆ ಹುಡುಕಾಟ ನಡೆಸಿದ್ದಾರೆ. ಆದರೆ ನಿನ್ನೆ ಜಿಗಣಿ ಕೆರೆಯಲ್ಲಿ ಅಮೃತೇಶ್‌ ಮೃತದೇಹವು ತೇಲಿಕೊಂಡು ಬಂದಿದೆ. ಇದನ್ನು ಕಂಡ ಸ್ಥಳೀಯರು ಕೂಡಲೇ ಜಿಗಣಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದಾಗ ಮೃತದೇಹವು ಅಮೃತೇಶ್‌ದ್ದು ಎಂದು ತಿಳಿದು ಬಂದಿದೆ. ಸದ್ಯ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.