ಬರ್ತಾನಂತ? ಬರಲ್ವಂತ?

Advertisement

ತಿಗಡೇಸಿ ಭಯಂಕರ ಮನಸ್ಸಿಗೆ ಹಚ್ಚಿಕೊಂಡಿದ್ದಾನೆ. ಯಾರೇ ಎದುರಿಗೆ ಬಂದರೆ ಅವರನ್ನು ನಿಲ್ಲಿಸಿ ಬರ್ತಾನಂತ? ಬರಲ್ವಂತ? ಎಂದು ಕೇಳುತ್ತಾನೆ. ಅವತ್ತು
ಶೇಷಮ್ಮನ ಹೋಟೆಲ್‌ಗೆ ಹೋಗಿದ್ದ ತಿಗಡೇಸಿ, ಯಾಕೆ ಶೇಷಮ್ಮ ಬರ್ತಾನಂತ? ಬರಲ್ವಂತ ಎಂದು ಕೇಳಿದ. ಅದಕ್ಕೆ ಶೇಷಮ್ಮ ಇದೂವರೆಗೆ ಒಂದು ಸುದ್ದಿ ಇಲ್ಲ ನೊಡು. ಎಷ್ಟೋ ಮೆಸೇಜ್ ಮಾಡಿದ್ದೇವೆ. ಒಂದಕ್ಕೂ ರಿಪ್ಲೈ ಇಲ್ಲ ಎಂದು ಹೇಳಿದಳು. ಅಯ್ಯೋ ಅಂದ ತಿಗಡೇಸಿ ಸೀದಾ ಕರಿಭೀಮವ್ವನ ಮನೆಗೆ ಹೋಗಿ ಹೆಂಗದಿ ಎಂದು ಕೇಳಿ ಏನವಾ ಬರ್ತಾನಂತಾ ಬರಲ್ವಂತಾ ಎಂದು ರಾಗ ಎಳೆದು ಕೇಳಿದ. ಅದಕ್ಕೆ ದೊಡ್ಡೋರ್ ಸುದ್ದಿ ನಮಗ್ಯಾಕೆ ಬಿಡು ತಿಗಡ್ಯಾ…ಅಂದಾಗ ಅದೂ ನಿಜ..ಆದರೂ ಎಂದು ಅಲ್ಲಿಂದ ಹೋದ. ಸರ್ಕಲ್ ಹನ್ಮಂತನಿಗೆ ಭೇಟಿಯಾಗಿ ಓಯ್ ಹನ್ಮಂತ..ಬರ್ತಾನಂತಲ್ಲ ಅಂದಾಗ..ಊಂ ಅಂಗಂತ ಅಂತಾರೆ ಬಂದಾಗಲೇ ನಿಜ ಎಂದು ಮಾರ್ಮಿಕವಾಗಿ ಅಂದು ಮುಂದೆ ನಡೆದ. ತಿಗಡೇಸಿ ಗೆಳೆಯರಂತೂ ಈತನ ಈ ಎರಡು ಮಾತುಗಳಿಂದ ಬೇಜಾರು ಮಾಡಿಕೊಂಡಿದ್ದರು. ಎಷ್ಟರ ಮಟ್ಟಿಗೆ ಅಂದರೆ…ಅಕಸ್ಮಾತ್ ತಿಗಡೇಸಿ ಎದುರಿಗೆ ಭೇಟಿಯಾದರೆ….ಬರ್ತಾನೋ ಇಲ್ಲವೋ ಕೇಳಿ ಹೇಳಬೇಕೆಂದರೆ ಅವನು ಫೋನೇ ಎತ್ತುವುದಿಲ್ಲ ಎಂದು ಆತ ಕೇಳುವ ಮೊದಲೇ ಹೇಳುತ್ತಿದ್ದರು. ತಿಗಡೇಸಿಯು ಮೇಕಪ್ ಮರೆಮ್ಮನನ್ನು ಕೇಳಿದಾಗ…ಆಕೆ ಗಾಬರಿಯಾಗಿ…ಹೌದೂ ಆತ ಹೋಗಿದ್ದಾದರೂ ಎಲ್ಲಿ? ನಿನಗೆ ಯಾವಾಗ ಭೇಟಿಯಾಗಿದ್ದ? ನಿನಗೆ ಕೊನೆಯದಾಗಿ ಯಾವಾಗ ಕರೆ ಮಾಡಿದ್ದ? ಫೋನಿನಲ್ಲಿ ನಿನಗೆ ಏನು ಹೇಳಿದ. ಇಂಥಲ್ಲಿಂದ ಇಂಥಲ್ಲಿಗೆ ಹೋಗುತ್ತೇನೆ ಎಂದು ಏನಾದರೂ ಹೇಳಿದನಾ? ತಮ್ಮ ಅಪ್ಪ-ಅವ್ವನಿಗೆ ಹೇಳಿ ಹೋಗಿದಾನೋ ಏನು ಹಾಗೇ ಹೋಗಿದಾನೋ? ಹೇಗೋ ಎಂದು ಎಸ್‌ಐಟಿಯವರು ಕೇಳಿದ ಹಾಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳಿದಾಗ ಸುಸ್ತಾದ ತಿಗಡೇಸಿ…ಅಂದಿನಿಂದ ಮರೆಮ್ಮನನ್ನು ಕೇಳುವುದನ್ನು ಬಿಟ್ಟ. ಅವನು ಏನೋ ಗದ್ದಲ ಮಾಡಿ ಫಾರೆನ್‌ಗೆ ಓಡಿ ಹೋಗಿದ್ದು ನಮಗೇನು ಗೊತ್ತು? ಈತನಿಗಾದರೂ ಅದೆಲ್ಲ ಯಾಕೆ ಬೇಕು? ಪಾಠ ಕಲಿಸಬೇಕು ಎಂದು ಪಣತೊಟ್ಟ ಕಲ್ಡೇರ್ ಸಂಜೆ ಹೊತ್ತಿನಲ್ಲಿ ತಿಗಡೇಸಿಗೆ ಕರೆ ಮಾಡಿ ಬಂದಿದ್ದಾನೆ ಹೊಲದಲ್ಲಿ ಇದ್ದಾನೆ ಬಾ…ಬಂದಿದ್ದಾನೆ ಬಾ ಎಂದು ಹೇಳಿದ. ಸೀದಾ ಹೊಲಕ್ಕೆ ಓಡಿಹೋದ. ಅಲ್ಲಿದ್ದ ಕಲ್ಡೇರ್ ಎಲ್ಲಿದ್ದಾನೆ ಎಂದು ಕೇಳಿದಾಗ ಅಲ್ಲಿ ಎಂದು ಕೈ ಮಾಡಿ ತೋರಿಸಿದ. ಅಲ್ಲಿ ನಡುಹೊಲದಲ್ಲಿ ಹಾಕಿದ್ದ ಬೆದರುಬೊಂಬೆ ಮಾತ್ರ ತಿಗಡೇಸಿಗೆ ಕಾಣಿಸಿತು. ಅಂತೂ ಬಂದನಲ್ಲ ಎಂದು ನಿಟ್ಟುಸಿರು ಬಿಟ್ಟು ಮನೆ ಕಡೆಗೆ ನಡೆದ.