ಆರು ನಮಗೆ ಮೂರು ಅವರಿಗೆ ಕೊಡಿ

Advertisement

ಜುಲೈನಿಂದ ಹೆಣ್ಣುಮಕ್ಕಳ ಅಕೌಂಟ್‌ಗೆ ೮೫೦೦ ರೂ. ಹಾಕುತ್ತೇನೆ… ಎಣಿಸಿಕೊಳ್ಳಿರಿ ಎಂದು ಅಮ್ಮೋರ ಮಗಳು ಪ್ರಿಯಾಂಕಮ್ಮೋರು ಹೇಳಿದ್ದೇ ತಡ.. ಗಂಡಸರೆಲ್ಲ ಉರಿದುರಿದು ಬೀಳುತ್ತಿದ್ದಾರೆ. ಆಗಲೂ ಅವರಿಗೆ, ಈಗಲೂ ಅವರಿಗೆ, ಪುಗಸೆಟ್ಟೆಯೂ ಅವರಿಗೆ, ಅವರಿಗೇ ಎಲ್ಲ ಆದರೆ ನಮಗೇನು ಎಂಬುದು ಭಾರೀ ಗಂಡಸರ ಸಂಘದ ಅಧ್ಯಕ್ಷ ಕನ್ನಾಲ್ಮಲ್ಲ ಹೂಂ ಕರಿಸುತ್ತಿದ್ದಾನೆ. ಈ ಮಧ್ಯೆ ಕರಿಭಾಗೀರತಿ, ಜಿಲಿಬಿಲಿ ಎಲ್ಲವ್ವ, ಜ್ಞಾನಿ ಗ್ಯಾನಮ್ಮ, ಮೇಕಪ್ ಮರೆಮ್ಮ, ಕಂಬಾರದುರ್ಗವ್ವ ಮುಂತಾದವರೆಲ್ಲ ಸೇರಿ ಮದ್ರಾಮಣ್ಣನ ಎರಡು ಸಾವಿರ, ಆ ಹುಡುಗಿ ಎಂಟು ಸಾವಿರದ ಐದು ನೂರು, ಎಲ್ಲ ಸೇರಿ ಹತ್ತುಸಾವಿರದ ಐನೂರು ಆಗುತ್ತದೆ. ಇನ್ನು ಮುಂದೆ ನಮ್ಮನ್ನು ಹಿಡಿಯುವವರು ಯಾರು? ಆ ಹಣವನ್ನು ಇಟ್ಟುಕೊಂಡು ಪುಗಸೆಟ್ಟೆ ಬಸ್ಸಿನಲ್ಲಿ ಎಲ್ಲಿ ಬೇಕಾದರೂ ಹೋಗಬಹುದು ಎಂದು ಲೆಕ್ಕಹಾಕುತ್ತಿದ್ದಾರೆ. ಮದ್ರಾಮಣ್ಣ ಎರಡು ಸಾವಿರ ರೂ ಕೊಟ್ಟಮೇಲೆ ಗಂಡಂದಿರು ಕಿಮಕ್ ಅನ್ನುವುದನ್ನು ಸ್ವಲ್ಪ ಕಡಿಮೆ ಮಾಡಿದ್ದರೂ ಕೂಡ ಆಗೊಮ್ಮೆ, ಈಗೊಮ್ಮೆ ಕೊಂಯ್.. ಕೊಂಯ್ ಅನ್ನುತ್ತಿದ್ದರು. ಈಗ ಎಂಟು ಸಾವಿರ ಬರಲಾರಂಭಿಸಿದರೆ ಆ ಶಬ್ದ ತನ್ನಿಂತಾನೆ ನಿಂತು ಹೋಗುತ್ತದೆ ಎಂದು ಮೇಕಪ್ ಮರೆಮ್ಮಳು ನಸುನಗುತ್ತ ಹೇಳಿದಳು. ಅಲ್ಲಿಯೇ ಇದ್ದ ಕ್ವಾಟಿಗ್ವಾಡಿ ಸುಂದ್ರವ್ವ, ಮೊಬೈಲ್‌ನಲ್ಲಿ ಯಾರಿಗೋ ಕರೆ ಮಾಡಿಟ್ಟು ಮರೆಮ್ಮಳ ಮಾತುಗಳನ್ನು ಅವರಿಗೆ ಕೇಳಿಸುತ್ತಿದ್ದಳು. ಇದನ್ನು ಗಮನಿಸಿದ ಕಂಟ್ರಂಗಮ್ಮತ್ತಿ ಓಯ್ ಮೇಕಪ್ ಮರೆಮ್ಮ.. ಇಲ್ಲಿ ಗೋಡೆ ಅಲ್ಲ ಮೊಬೈಲ್‌ಗೂ ಕಿವಿಗಳಿವೆ. ನಾಳೆ ನಿನ್ನ ಗಂಡನಿಗೆ ಗೊತ್ತಾಯಿತು ಅಂದರೆ ಇಲ್ಲದ ಪಂಚಾಯ್ತಿ ಹುಷಾರ್ ಎಂದು ವಾರ್ನಿಂಗ್ ಮಾಡಿದಳು. ಅಷ್ಟರಲ್ಲಿ ಮೇಕಪ್ ಮರೆಮ್ಮಳ ಗಂಡ ಆಕೆಯ ಮಾತುಗಳನ್ನು ಕೇಳಿಸಿಕೊಂಡು ತಾನೂ ಎಲ್ಲ ಗಂಡಸರ ಸಭೆ ಕರೆದ. ನೋಡ್ರಪಾ ಇನ್ನು ನಮಗೆ ಉಳಿಗಾಲವಿದ್ದಂತಿಲ್ಲ. ಆ ಯಪ್ಪ ಎಲ್ಡು ಸಾವಿರ ರೂ, ಪುಗಸೆಟ್ಟೆ ಬಸ್ಸು ಬಿಟ್ಟಿದ್ದಕ್ಕೆ ಎಂತೆಂಥ ಅನಾಹುತಗಳು ಆದವು ನಿಮಗೆ ಗೊತ್ತೇ ಇದೆ. ಈಗ ಅಮ್ಮೋರ ಮಗಳು ಎಂಟೂವರೆ ಸಾವಿರ ಕೊಡುತ್ತೇನೆ ಅನ್ನುತ್ತಿದ್ದಾಳೆ. ಹಾಗೇನಾದರೂ ಕೊಟ್ಟರೆ ನಮ್ಮ ಹಣೆಬರಹ ಏನಾಗಬಹುದು ಎಂದು ಸ್ವಲ್ಪ ಯೋಚಿಸಿ ಎಂದು ಹೇಳಿದ. ಎಲ್ಲರೂ ಏನು ಮಾಡುವುದು ಅಂದಾಗ…. ಲಾದುಂಚಿ ರಾಜನು… ಏಯ್ ಚಿಂತೆ ಮಾಡಬೇಡಿ.. ನನಗೆ ಅವರು ಕ್ಲೋಸು ಅಂದವನೇ ಮೇಲಿನ ಕಿಸೆಯಿಂದ ಮೊಬೈಲ್ ತೆಗೆದು ನಂಬರ್ ಡಯಲ್ ಮಾಡಿದ… ಆ ಕಡೆಯಿಂದ ಹಲೋ ಅಂದಾಕ್ಷಣ… ಅಮ್ಮೋರೆ… ನಿಮಗೇನು ಬುದ್ಧಿ ಇದೆಯೆ? ಇವರು ಕೊಟ್ಟ ಎಲ್ಡು ಸಾವಿರ ನಮ್ಮ ಜೀವ ತಿಂತಿದೆ. ಪುಗಸೆಟ್ಟೆ ಬಸ್ಸು ಹತ್ತಿ ಹೋಗುವ ನಮ್ಮ ಅರ್ಧಾಂಗಿನಿಯಿಂದ ಮನೆಯಲ್ಲಿ ಊಟವಿಲ್ಲದೇ ಸೊರಗಿ ಹೋಗಿದ್ದೇವೆ. ನೀವು ಕೊಡುವುದಕ್ಕೆ ಬೇಡ ಅನ್ನಲ್ಲ… ಕೊಟ್ಟರೆ ನಮಗೆ ಆರು ಕೊಡಿ ಅವರಿಗೆ ಮೂರು ಕೊಡಿ.. ಇಲ್ಲದಿದ್ದರೆ ಅಷ್ಟೆ ಅಂದ… ಆ ಕಡೆಯಿಂದ ಹೂ ಈಸ್ ಧಿಸ್ ಅನ್ನುತ್ತಲೇ… ಫೋನ್ ಕಟ್ ಮಾಡಿ ನೋಡ್ರಪಾ ಹೂಂ ಅಂದಾರೆ ಅವರು ಎಂದು ಹೇಳಿ ಮೊಬೈಲ್ ಕಿಸೆಯಲ್ಲಿಟ್ಟುಕೊಂಡ.