ದೇವರು ವರ ಕೊಟ್ಟರೂ ಪೂಜಾರಿ ಕೊಡೋಲ್ಲ

Advertisement

ದೇವರು ವರ ಕೊಟ್ಟರೂ ಪೂಜಾರಿ ಕೊಡೋಲ್ಲ ಎಂಬ ಗಾದೆ ವಿದ್ಯುತ್ ಇಲಾಖೆಗೆ ಅಕ್ಷರಶಃ ಅನ್ವಯಿಸುತ್ತದೆ. ಸರ್ಕಾರ ಈಗ ಎಲ್ಲ ಕಡೆ ಉಚಿತ ಗ್ಯಾರಂಟಿಗಳನ್ನು ಪ್ರಕಟಿಸುತ್ತಿವೆ. ಇದಕ್ಕೆ ಜನ ಕೂಡ ಆಕರ್ಷಿತರಾಗಿ ಮತ ನೀಡುತ್ತಿದ್ದಾರೆ. ವಿದ್ಯುತ್ ರಂಗದಲ್ಲಿ ಕರ್ನಾಟಕ ಸರ್ಕಾರ ಪ್ರತಿ ತಿಂಗಳು ೨೦೦ ಯೂನಿಟ್ ವಿದ್ಯುತ್ ಉಚಿತ ಎಂದು ಪ್ರಕಟಿಸಿ ಅದರಂತೆ ಅನುದಾನವನ್ನು ಬಜೆಟ್‌ನಲ್ಲೇ ನೀಡಿದೆ. ಅದರಿಂದ ಗೃಹ ಜ್ಯೋತಿ ಸಮಸ್ಯೆ ಆಗಿಲ್ಲ. ಸರ್ಕಾರ ಬಜೆಟ್‌ನಲ್ಲಿ ಅನುದಾನ ನೀಡುವವರೆಗೆ ಮುಂದುವರಿಯುತ್ತದೆ. ವಿದ್ಯುತ್ ವಿತರಣ ಕಂಪನಿಗಳಿಗೆ ಇದರಿಂದ ಸಮಸ್ಯೆ ಏನೂ ಆಗೋಲ್ಲ.
ಆದರೆ ಈಗ ಸಮಸ್ಯೆ ಬಂದಿರೋದು ರೈತರ ಪಂಪ್‌ಸೆಟ್‌ಗಳಿಗೆ ನೀಡುವ ಉಚಿತ ವಿದ್ಯುತ್. ಇದಕ್ಕೆ ಸರ್ಕಾರ ಹಣ ನೀಡುವುದಾಗಿ ಹೇಳಿದ್ದರೂ. ಪೂರ್ಣ ಹಣ ನೀಡುತ್ತಿಲ್ಲ. ಈ ಬಾರಿ ಏಪ್ರಿಲ್‌ನಲ್ಲಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ವಿದ್ಯುತ್ ದರ ನಿಗದಿಪಡಿಸುವಾಗ ಸರ್ಕಾರಕ್ಕೆ ಶಾಕ್ ಕೊಟ್ಟಿತು. ಜನವರಿಯಲ್ಲಿ ಕೆಇಆರ್‌ಸಿ ವಿದ್ಯುತ್ ಇಲಾಖೆ ಪತ್ರ ಬರೆದು ೧೦೦೬ ರಿಂದ ಸರ್ಕಾರ ೧೦ ಅಶ್ವಶಕ್ತಿ ಒಳಗೆ ಇರುವ ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಒದಗಿಸುತ್ತಿದೆ. ಇದಕ್ಕೆ ತಗಲುವ ಪೂರ್ಣ ವೆಚ್ಚವನ್ನು ಸರ್ಕಾರ ಭರಿಸುತ್ತಿಲ್ಲ. ಸರ್ಕಾರ ನೀಡುತ್ತಿರುವ ಸಹಾಯಧನ ಸಾಕಾಗುವುದಿಲ್ಲ. ಕೇಂದ್ರ ವಿದ್ಯುತ್ ನೀತಿ ಮತ್ತು ಕಾಯ್ದೆಯಂತೆ ಯಾವುದೇ ರಾಜ್ಯ ಸರ್ಕಾರ ಉಚಿತ ವಿದ್ಯುತ್ ನೀಡಬೇಕಾದರೆ ಅದನ್ನು ಸರ್ಕಾರ ಬಜೆಟ್‌ನಲ್ಲೇ ಭರಿಸಬೇಕು ಎಂದಿದೆ. ಇದರ ಪಾಲನೆ ಆಗುತ್ತಿಲ್ಲ. ೨೦೨೪ರ ಬಜೆಟ್‌ನಲ್ಲಾದರೂ ಸರ್ಕಾರ ರೈತರ ಪಂಪ್‌ಸೆಟ್‌ಗೆ ಕೊಡುವ ವಿದ್ಯುತ್ ವೆಚ್ಚವನ್ನು ಭರಿಸಬೇಕು ಎಂದು ಕೆಇಆರ್‌ಸಿ ಪತ್ರ ಬರೆಯಿತು. ಈ ಪತ್ರ ರಾಜ್ಯ ಸರ್ಕಾರದ ಹಣಕಾಸು ಇಲಾಖೆಗೆ ರವಾನೆಯಾಯಿತು. ಆ ಇಲಾಖೆಯೂ ಕೆಇಆರ್‌ಸಿ ಪತ್ರಕ್ಕೆ ತಾತ್ವಿಕ ಒಪ್ಪಿಗೆ ಸೂಚಿಸಿತು. ಆದರೆ ರಾಜ್ಯ ಸರ್ಕಾರ ಇದಕ್ಕೆ ಒಪ್ಪಿಗೆ ಸೂಚಿಸಲಿಲ್ಲ. ಕಾನೂನು ವಿರುದ್ಧವಾಗಿ ರಾಜ್ಯ ಸರ್ಕಾರವೇ ರೈತರ ಪಂಪ್‌ಸೆಟ್‌ಗೆ ಉಚಿತ ವಿದ್ಯುತ್ ನೀಡಲು ಆಗುವ ಸಂಪೂರ್ಣ ವೆಚ್ಚವನ್ನು ಭರಿಸುತ್ತಿಲ್ಲ.
ಕ್ರಾಸ್ ಸಬ್ಸಿಡಿ ಎಂದರೇನು?
ಎಲ್ಲೆಲ್ಲಿ ಸರ್ಕಾರದ ಸಹಾಯಧನದ ಪ್ರಸ್ತಾಪ ಬರುತ್ತದೋ ಅಲ್ಲೆಲ್ಲ ಕ್ರಾಸ್ ಸಬ್ಸಿಡಿ ಮಾತು ಕೇಳಿ ಬರುತ್ತದೆ. ವಿದ್ಯುತ್ ರಂಗದಲ್ಲಿ ಇದು ಪ್ರಧಾನವಾಗಿ ಕೇಳಿ ಬರುತ್ತಿದೆ. ಸಬ್ಸಿಡಿ ಎಂದರೆ ಸರ್ಕಾರ ನೇರವಾಗಿ ಕೊಡುವ ಹಣ. ಇದಕ್ಕೆ ಬಜೆಟ್‌ನಲ್ಲಿ ಪ್ರಸ್ತಾಪ ಇರಲೇಬೇಕು. ಈ ಸಹಾಯಧನ ಸಾಕಾಗದೇ ಹೋದಾಗ ಕ್ರಾಸ್ ಸಬ್ಸಿಡಿಯನ್ನು ಬೇರೆ ಗ್ರಾಹಕರ ಮೇಲೆ ವಿಧಿಸಲಾಗುವುದು. ಇದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದಾಗ ರೈತರ ಪಂಪ್‌ಸೆಟ್‌ಗಳಿಗೆ ಹಾಕಿದ್ದ ವಿದ್ಯುತ್ ದರವನ್ನು ರದ್ದುಪಡಿಸಿ ಸರ್ಕಾರವೇ ಭರಿಸುವುದು ಎಂದಾಯಿತು. ಗುಂಡೂರಾವ್ ಮುಖ್ಯಮಂತ್ರಿಯಾಗಿದ್ದಾಗ ರೈತರ ಪಂಪ್‌ಸೆಟ್‌ಗಳಿಗೆ ಹಾಕಿದ್ದ ಮೀಟರ್ ಕಿತ್ತುಹಾಕಲಾಯಿತು. ಅಂದಿನಿಂದ ರೈತರ ಪಂಪ್‌ಸೆಟ್‌ಗಳಿಗೆ ಎಷ್ಟು ವಿದ್ಯುತ್ ಬಳಕೆಯಾಗುತ್ತಿದೆ ಎಂಬ ನಿಖರ ಮಾಹಿತಿ ಲಭ್ಯವಿಲ್ಲ. ಸರ್ಕಾರಕ್ಕೆ ಪ್ರತಿ ಎಸ್ಕಾಂಗಳು ತಮ್ಮ ಕಾರ್ಯವ್ಯಾಪ್ತಿಯಲ್ಲಿ ಪಂಪ್‌ಸೆಟ್‌ಗಳ ಒಟ್ಟು ಅಶ್ವಶಕ್ತಿ ಸಾಮರ್ಥ್ಯವನ್ನು ತಿಳಿಸುತ್ತದೆ. ಅದರ ಮೇಲೆ ಸರ್ಕಾರ ಸಹಾಯಧನ ನೀಡುತ್ತಿದೆ.
ಈ ಹಣ ಸಾಕಾಗುವುದಿಲ್ಲ. ಅದಕ್ಕಾಗಿ ಹೆಚ್ಚುವರಿಯಾಗಿ ಕೈಗಾರಿಕೆ ಮತ್ತು ವಾಣಿಜ್ಯ ಬಳಕೆದಾರರ ಮೇಲೆ ಸುಂಕ ವಿಧಿಸಲಾಗುತ್ತಿದೆ. ಇದನ್ನು ಕ್ರಾಸ್ ಸಬ್ಸಿಡಿ ಎಂದು ಕರೆಯಲಾಗುತ್ತಿದೆ. ಇದನ್ನು ತೆಗೆಯಬೇಕೆಂದು ೨೦೦೦ ರಿಂದ ಪ್ರತಿ ವರ್ಷ ಹೇಳುತ್ತ ಬರಲಾಗಿದೆ. ಈ ವರ್ಷ ಕೆಇಆರ್‌ಸಿ ಗಂಭೀರವಾಗಿ ಪರಿಗಣಿಸಿ ಇದನ್ನು ಕಡಿಮೆ ಮಾಡಲು ಸರ್ಕಾರ ತನ್ನ ಸಹಾಯಧನ ಪ್ರಮಾಣ ಹೆಚ್ಚಿಸಬೇಕೆಂದು ಕೇಳಿತು. ಆದರೆ ಸರ್ಕಾರ ವಿದ್ಯುತ್ ಅನುದಾನವನ್ನು ಬಜೆಟ್‌ನಲ್ಲಿ ಹೆಚ್ಚಿಸಲು ಸಿದ್ಧವಿಲ್ಲ.
ಅಡ್ಡ ಪರಿಣಾಮ
ಇದರಿಂದ ಕೈಗಾರಿಕೆ ಮತ್ತು ವಾಣಿಜ್ಯ ಬಳಕೆದಾರರ ಮೇಲೆ ಅನಗತ್ಯ ಹೊರೆ ಅಧಿಕಗೊಂಡಿದೆ ಕೆಇಆರ್‌ಸಿ ತನ್ನ ಪತ್ರದಲ್ಲಿ ಸ್ಪಷ್ಟವಾಗಿ ತಿಳಿಸಿದೆ. ಆರ್ಥಿಕ ಇಲಾಖೆ ಕೂಡ ಒಪ್ಪಿದೆ. ಸರ್ಕಾರ ಮಾತ್ರ ಚಕಾರ ಎತ್ತಿಲ್ಲ. ಕೈಗಾರಿಕೆ ಮತ್ತು ವಾಣಿಜ್ಯ ರಂಗದವರು ಆಡಳಿತ ಪಕ್ಷಕ್ಕೆ ಹೆದರಿಕೊಂಡು ಪ್ರತಿರೋಧ ವ್ಯಕ್ತಪಡಿಸುತ್ತಿಲ್ಲ. ಪ್ರತಿ ಬಾರಿ ಕೆಇಆರ್‌ಸಿ ಸಾರ್ವಜನಿಕವಾಗಿ ಅಹವಾಲು ಸ್ವೀಕರಿಸಿದಾಗ ಎಲ್ಲ ಕೈಗಾರಿಕೋದ್ಯಮಿಗಳು ಮತ್ತು ವಾಣಿಜ್ಯ ಉದ್ಯಮಿಗಳು ಕ್ರಾಸ್ ಸಬ್ಸಿಡಿ ಬಗ್ಗೆ ಪ್ರಸ್ತಾಪಿಸುತ್ತ ಬಂದಿದ್ದಾರೆ. ಈ ಬಾರಿ ಕೆಇಆರ್‌ಸಿ ಮುಂದಾಳತ್ವ ವಹಿಸಿ ಸರ್ಕಾರಕ್ಕೆ ನೇರವಾಗಿ ಪತ್ರ ಬರೆಯಿತು. ಇದರಿಂದ ಸರ್ಕಾರಕ್ಕೆ ಮುಜುಗರವಾಯಿತು. ಸರ್ಕಾರ ಕೆಇಆರ್‌ಸಿ ಪತ್ರಕ್ಕೆ ಸ್ಪಷ್ಟ ಉತ್ತರ ನೀಡಲು ಹೋಗಿಲ್ಲ. ಆದರೆ ಹಂತಹಂತವಾಗಿ ಈ ಕ್ರಾಸ್ ಸಬ್ಸಿಡಿ ಕಡಿಮೆ ಮಾಡಬೇಕು ಎಂಬ ಅಭಿಪ್ರಾಯ ಸರ್ಕಾರದ ಮಟ್ಟದಲ್ಲಿ ಮೂಡಿದೆ. ಅದು ಎಂದು ಕಾರ್ಯಗತವಾಗುತ್ತದೋ ತಿಳಿಯದು.
ಅಕ್ರಮ ಸಂಗ್ರಹ
ಕೆಇಆರ್‌ಸಿ ಪತ್ರದಿಂದ ಕ್ರಾಸ್ ಸಬ್ಸಿಡಿ ಸಂಗ್ರಹ ಅಕ್ರಮ ಎಂಬುದು ಸ್ಪಷ್ಟ. ಹಿಂದೆ ಸರ್ಕಾರಕ್ಕೆ ಸಹಾಯಧನದಲ್ಲೇ ಎಲ್ಲವನ್ನೂ ಭರಿಸುವುದು ಕಷ್ಟವಾಗಿದ್ದರಿಂದ ಇತರ ಆರ್ಥಿಕವಾಗಿ ಮುಂದುವರಿದ ವರ್ಗದವರು ಸ್ವಲ್ಪಭಾಗ ಭರಿಸಬೇಕೆಂಬುದನ್ನು ಒಪ್ಪಿದ್ದರು. ಈಗ ಇದು ಗ್ಯಾರಂಟಿ ಯೋಜನೆಯಲ್ಲಿ ಸೇರಿದ್ದು ರಾಜಕೀಯ ಸ್ವರೂಪ ಪಡೆದುಕೊಂಡಿದೆ. ರಾಜಕೀಯ ಪಕ್ಷಗಳು ಚುನಾವಣೆ ಭರವಸೆಗಳಲ್ಲಿ ಸೇರ್ಪಡೆ ಮಾಡಿರುವುದರಿಂದ ಅಧಿಕಾರಕ್ಕೆ ಬಂದ ಸರ್ಕಾರ ಪೂರ್ಣವಾಗಿ ಭರಿಸತಕ್ಕದ್ದು. ಬೇರೆಯವರ ಹಣದ ಮೂಲಕ ಮತಗಳಿಸುವುದು ಸರಿಯಾದ ಕ್ರಮವಲ್ಲ ಎಂಬ ವಾದ ತಲೆಎತ್ತಿದೆ. ಗ್ಯಾರಂಟಿಗಳಿಂದ ಸರ್ಕಾರದ ಮೇಲೆ ಆರ್ಥಿಕ ಹೊರೆ ಅಧಿಕಗೊಳ್ಳುವುದು ಸಹಜ. ಅದನ್ನು ಭರಿಸಲು ಆಡಳಿತ ಪಕ್ಷ ಮುಂದೆ ಬಂದಿದೆ. ಹೀಗಿರುವಾಗ ಸರ್ಕಾರ ಕ್ರಾಸ್ ಸಬ್ಸಿಡಿ ಕೈಬಿಡಲು ಒಪ್ಪಿಕೊಳ್ಳಬೇಕು. ಇಲ್ಲ ಎಂದರೆ ಗ್ಯಾರಂಟಿ ಯೋಜನೆಯಿಂದ ಉಚಿತ ವಿದ್ಯುತ್ ಪೂರೈಕೆಯನ್ನು ಕೈಬಿಡಬೇಕು.
ಉಚಿತಕ್ಕೂ ಸೂತ್ರ
ಒಂದು ವೇಳೆ ಸರ್ಕಾರಕ್ಕೆ ಸಂಪೂರ್ಣವಾಗಿ ಉಚಿತ ವಿದ್ಯುತ್ ನೀಡಲು ಆಗುವುದಿಲ್ಲ ಎಂದರೆ ಮೊದಲು ಪ್ರತಿ ವರ್ಗಕ್ಕೆ ನೀಡುವ ವಿದ್ಯುತ್ ಸರಬರಾಜು ವೆಚ್ಚವನ್ನು ಪ್ರತ್ಯೇಕ ನಿಗದಿಪಡಿಸಬೇಕು. ಇದಕ್ಕೆ ವಿದ್ಯುತ್ ಕಾಯ್ದೆಯೇ ಹೇಳಿದೆ. ಈಗ ವಿದ್ಯುತ್ ದರ ಸರಾಸರಿ ವಿದ್ಯುತ್ ದರದ ಮೇಲೆ ನಿಗದಿಪಡಿಸಲಾಗುತ್ತಿದೆ. ಸರಾಸರಿ ವಿದ್ಯುತ್ ದರ ಮತ್ತು ನಿರ್ದಿಷ್ಟ ವರ್ಗಕ್ಕೆ ವಿದ್ಯುತ್ ಸರಬರಾಜು ದರ ಬೇರೆ ಬೇರೆ. ಅಜಗಜಾಂತರ ವ್ಯತ್ಯಾಸವಿದೆ. ಇದನ್ನು ವಿದ್ಯುತ್ ಕಾಯ್ದೆ ೨೦೦೩ ಮತ್ತು ವಿದ್ಯುತ್ ನೀತಿ ೨೦೧೬ ಸ್ಪಷ್ಟವಾಗಿ ತಿಳಿಸಿದೆ. ಇದನ್ನು ರಾಜ್ಯ ಸರ್ಕಾರ ಅನುಸರಿಸುತ್ತಿಲ್ಲ.
ವಿದ್ಯುತ್ ಕಾಯ್ದೆ ರೀತಿಯ ಪ್ರತಿ ವರ್ಗದ ಗ್ರಾಹಕ ಕನಿಷ್ಠ ವಿದ್ಯುತ್ ಸರಬರಾಜು ದರದಲ್ಲಿ ಶೇ. ೫೦ರಷ್ಟು ಭರಿಸಲೇಬೇಕು. ಒಂದು ವೇಳೆ ಗ್ರಾಹಕ ಭರಿಸುವುದಿಲ್ಲ ಎಂದರೆ ಸರ್ಕಾರವೇ ಕೊಡಬೇಕು. ಒಂದು ಕ್ರಾಸ್ ಸಬ್ಸಿಡಿ ವಿಧಿಸಲೇಬೇಕು ಎಂದರೆ ಅದು ಶೇ. ೨೦ಕ್ಕಿಂತ ಹೆಚ್ಚು ಇರುವ ಹಾಗಿಲ್ಲ. ಅಂದರೆ ಸರ್ಕಾರ ಶೇಕಡ ೮೦ ರಷ್ಟು ದರವನ್ನು ಭರಸಲೇಬೇಕು.
ಈಗಿನ ಪರಿಸ್ಥಿತಿ ಏನು
ಈಗ ಕೃಷಿ ಪಂಪ್‌ಸೆಟ್‌ಗೆ ಸರ್ಕಾರ ನೀಡುತ್ತಿರುವ ಹಣ ಸಾಲದು. ರಾಜ್ಯದಲ್ಲಿ ಒಟ್ಟು ಎಷ್ಟು ಪಂಪ್‌ಸೆಟ್‌ಗಳಿವೆ. ಅದರಲ್ಲಿ ಕೆಟ್ಟಿರುವುದು ಎಷ್ಟು ಎಂಬ ಮಾಹಿತಿಯೇ ಇಲ್ಲ. ಸಣ್ಣ ನೀರಾವರಿ ಇಲಾಖೆ ಕೊಡುವ ಅಂಕಿಅಂಶವೇ ಬೇರೆ. ಹೀಗಾಗಿ ಬೀರ್‌ಬಲ್ ಕತೆಯಂತೆ ಪಂಪ್‌ಸೆಟ್‌ಗಳ ಸಂಖ್ಯೆ ಸ್ಪಷ್ಟವಾಗಿ ಲಭ್ಯವಿಲ್ಲ. ಇಂಥ ಸಂದರ್ಭದಲ್ಲಿ ಸರ್ಕಾರ ಪ್ರತಿ ವರ್ಷ ಸಹಾಯಧನ ನೀಡುತ್ತಿದೆ. ಅದರ ಮೇಲೆ ಕ್ರಾಸ್ ಸಬ್ಸಿಡಿ ವಿಧಿಸಲಾಗುತ್ತಿದೆ.
ಕೆಇಆರ್‌ಸಿ ಸರ್ಕಾರಕ್ಕೆ ಬರೆದಿರುವ ಪತ್ರದಂತೆ ೨೦೨೪ ರಲ್ಲಿ ಸರ್ಕಾರ ರೈತರ ಪಂಪ್‌ಸೆಟ್‌ಗೆ ನೀಡಿರುವ ಸಹಾಯಧ ೧೩೯೬೬ ಕೋಟಿ ರೂ. ಕೈಗಾರಿಕೆ ಮತ್ತು ವಾಣಿಜ್ಯ ಬಳಕೆದಾರರು ನೀಡುತ್ತಿರುವ ಕ್ರಾಸ್ ಸಬ್ಸಿಡಿ ೫೬೮೦ ಕೋಟಿ ರೂ. ಇದನ್ನೂ ಸರ್ಕಾರ ಭರಿಸಿದೆರೆ ಮಾತ್ರ ಕಾನೂನಿಗೆ ಬೆಲೆ ಬರುತ್ತದೆ.ಈಗ ಎಲ್‌ಟಿ ಮತ್ತು ಎಚ್‌ಟಿ ಬಳಕೆದಾರರು ಶೇ. ೬.೦೮ ರಿಂದ ಶೇ.೪೯.೫೧ ರಷ್ಟು ಕ್ರಾಸ್ ಸಬ್ಸಿಡಿ ನೀಡುತ್ತಿದ್ದಾರೆ.
ಸರ್ಕಾರ ನೀಡಬೇಕಾದ ಹಣವನ್ನು ಅವರು ಭರಿಸಬೇಕಾಗಿ ಬಂದಿರುವುದು ದುರ್ದೈವ. ಸರ್ಕಾರ ತನ್ನ ಪ್ರಚಾರದಲ್ಲಿ ಉಚಿತ ವಿದ್ಯುತ್ ಎಂದು ಹೇಳಿಕೊಳ್ಳುತ್ತದೆ. ಕೈಗಾರಿಕೆ ಮತ್ತು ವಾಣಿಜ್ಯ ಬಳಕೆದಾರರ ಕೊಡುಗೆಯನ್ನು ಪ್ರಸ್ತಾಪಿಸುವುದೇ ಇಲ್ಲ.