ಡಿಸಿಪಿ ಎಂ.ರಾಜೀವ್ ಸಸ್ಪೆಂಡ್ ಮಾಡಿ ಸರ್ಕಾರ ಆದೇಶ

Advertisement

ಹುಬ್ಬಳ್ಳಿ: ಅಂಜಲಿ ಅಂಬಿಗೇರ ಹತ್ಯೆ ಪ್ರಕರಣದ ಚರ್ಚೆ ತೀವ್ರಗೊಳ್ಳುತ್ತಿದ್ದಂತೆಯೇ ಹಾಗೂ ಕರ್ತವ್ಯ ನಿರ್ವಹಿಸುವಲ್ಲಿ ಎಡವಿದ ಹುಬ್ಬಳ್ಳಿ ಧಾರವಾಡ ಕಮೀಷನರೇಟ್ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಬಿಸಿ ಮುಟ್ಟಿಸಿದೆ.
ಈ ಹಿನ್ನೆಲೆಯಲ್ಲಿ ಹು-ಧಾ ಪೊಲೀಸ್ ಆಯುಕ್ತಾಲಯದ ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಎಂ.ರಾಜೀವ್ ಅವರನ್ನು ಅಮಾನತುಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಘಟನೆ ಹಿನ್ನೆಲೆಯಲ್ಲಿ ಅಂಜಲಿ ಕುಟುಂಬದವರನ್ನು ಭೇಟಿಯಾಗಲು ಸೋಮವಾರ ಸ್ವತಃ ಗೃಹ ಸಚಿವರು ಬರುತ್ತಿರುವ ಹಿನ್ನೆಲೆಯಲ್ಲಿ ಈ‌ ಬೆಳವಣಿಗೆ ನಡೆದಿದೆ.
ಅಂಜಲಿ ಅಂಬಿಗೇರ ಪ್ರಕಣದಲ್ಲಿ ಬೆಂಡಿಗೇರಿ ಠಾಣೆ ಪೊಲೀಸರ ಕರ್ತವ್ಯ ಲೋಪ ಎದ್ದು ಕಾಣುತ್ತಿತ್ತು. ಠಾಣೆಗೆ ಹೋಗಿ ದೂರು ನೀಡಿದ್ದರೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಪಿಐ ಸಿ.ಬಿ. ಚಿಕ್ಕೋಡಿ ಹಾಗೂ ಮುಖ್ಯಪೇದೆ ರೇಖಾ ಹಾವರಡ್ಡಿ ಅವರನ್ನು ಪೊಲೀಸ್ ಆಯುಕ್ತರು ಅಮಾನತುಗೊಳಿಸಿದ್ದರು.
ಪೊಲೀಸರ ವೈಫಲ್ಯವೇ ಆಧರಿಸಿ ರಾಜ್ಯ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದ್ದು, ಡಿಸಿಪಿ ಎಂ.ರಾಜೀವ ಅವರನ್ನು ಅಮಾನತುಗೊಳಿಸಿ ಆದೇಶಿಸಿದೆ. ಅಲ್ಲದೇ ಇನ್ನೂ ಕೆಲವು ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವ ಕುರಿತು ಸರಕಾರದ ಮಟ್ಟದಲ್ಲಿ ಚರ್ಚೆಯಾಗಿದೆ ಎಂದು ತಿಳಿದು ಬಂದಿದೆ.