ಟಿಸಿ ಕೊಟ್ಟಿಲ್ಲವೆಂದು ಡೆತ್​ನೋಟ್ ಬರೆದಿಟ್ಟು ವಿದ್ಯಾರ್ಥಿ ಆತ್ಮಹತ್ಯೆ

Advertisement

ಉಡುಪಿ: ಕಾಲೇಜಿಗೆ ಸೇರಲು ಶಾಲೆಯ ಪ್ರಾಂಶುಪಾಲರು ಟಿಸಿ ನೀಡಿಲ್ಲವೆಂಬ ಕಾರಣಕ್ಕೆ ಎಸ್ ಎಸ್ ಎಲ್ ಸಿ ಉತ್ತೀರ್ಣನಾಗಿದ್ದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ದುರಂತ ಘಟನೆ ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ನಡೆದಿದೆ.
ಮೃತ ದುರ್ದೈವಿಯನ್ನು ಉಡುಪಿ ಜಿಲ್ಲೆಯ ಬೈಂದೂರು ಸರ್ಕಾರಿ ಪ್ರೌಢಶಾಲೆಯ ಹೈಸ್ಕೂಲ್ ವಿದ್ಯಾರ್ಥಿ ನಿತಿನ್ ಆಚಾರಿ ಎಂದು ಗುರುತಿಸಲಾಗಿದೆ.
ಸಾಯುವ ಮುನ್ನ ನಿತಿನ್ ಆತ್ಮಹತ್ಯಾ ಪತ್ರವನ್ನು ಬರೆದಿದ್ದು, ಅದರಲ್ಲಿ ತನಗೆ ಟಿಸಿ ಕೊಡದೆ ಮುಖ್ಯೋಪಾಧ್ಯಾಯರು ಕೆಟ್ಟದಾಗಿ ಬೈದಿದ್ದಾರೆ ಎಂದು ಬರೆದಿಟ್ಟು ಮನೆಯ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ನಿತಿನ್ ಬೈಂದೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಹೈಸ್ಕೂಲ್ ವ್ಯಾಸಂಗ ಮುಗಿಸಿದ್ದು, ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬೇರೆ ಕಾಲೇಜಿಗೆ ಸೇರಬೇಕಾದ ಕಾರಣ ಶಾಲೆಯಲ್ಲಿ ಟಿಸಿ ಕೇಳಲು ಹೋದಾಗ ಶಾಲೆಯ ಪ್ರಾಂಶುಪಾಲ ಸುರೇಶ್ ಭಟ್, ಟಿಸಿ ಕೊಡಲು ನಕಾರ ಮಾಡಿದ್ದು, ಮಾತ್ರವಲ್ಲದೆ ನಿತಿನ್ ನನ್ನು ಬೈದು ಕಳಿಸಿದ್ದಾರೆ. ಇದರಿಂದ ತೀವ್ರವಾಗಿ ಮನನೊಂದ ನಿತಿನ್ ಕೊನೆಗೆ ಹಗ್ಗಕ್ಕೆ ಕೊರಳೊಡ್ಡಿದ್ದಾನೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.