ಬಳ್ಳಾರಿ: ಎಐಸಿಸಿ ಅಧ್ಯಕ್ಷ ಗಾದಿಗೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಇಂದು ಭಾರತ್ ಜೋಡೋ ಯಾತ್ರೆಗೆ ವಿರಾಮ ಘೋಷಿಸಿದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಇಂದು ದಿಢೀರ್ ಕೌಲ್ ಬಜಾರ್ ವ್ಯಾಪ್ತಿಯ ವಿವಿಧ ಜೀನ್ಸ್ ಪ್ಯಾಂಟ್ ತಯಾರಿಕಾ ಘಟಕಗಳಿಗೆ ಭೇಟಿ ನೀಡಿ, ಕಾರ್ಮಿಕರ ಜೊತೆ ಮಾತುಕತೆ ನಡೆಸಿದರು.
ಬೆಳಗ್ಗೆ ಮತದಾನ ಮಾಡಿದ ಬಳಿಕ ಕೌಲ್ ಬಜಾರ್‌ನ ದಾರ್ವೆಶ್ ಕರಿಮುಲ್ಲಾಹ ಶಾ ಸಾಹೇಬ್ ಖಾದ್ರಿಯ ದರ್ಗಾ ಬಳಿಯ ವಿನೋದ್ ಎಂಬುವವರ ಜೀನ್ಸ್ ಉತ್ಪನ್ನ ತಯಾರಿಕಾ ಘಟಕಕ್ಕೆ ಯಾವುದೇ ಮಾಹಿತಿ ಇಲ್ಲದೆ ಭೇಟಿ ನೀಡಿದರು.
ವಿನೋದ್, ಸುಜಾತ, ಸುಹಾಸಿನಿ ಎಂದಿನಂತೆ ತಮ್ಮ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಈ ವೇಳೆ ಇದ್ದಕ್ಕಿದ್ದಂತೆ ಒಳ ಹೊಕ್ಕ ರಾಹುಲ್ ಗಾಂಧಿ ಸುಜಾತ-ವಿನೋದ್ ನಡುವೆ ಇದ್ದ ಖಾಲಿ ಸ್ಟೂಲ್ ಮೇಲೆ ಕುಳಿತುಕೊಂಡು ಮಾತನಾಡಿಸಿದರು. ಇದನ್ನು ನಿರೀಕ್ಷೆ ಮಾಡದ ವಿನೋದ್ ಮತ್ತು ಉಳಿದವರು ಬೆವರಿ ಹೋದರು. ಹಿಂದಿಯಲ್ಲಿ ನಿಮ್ಮ ಉದ್ಯಮ ಹೇಗಿದೆ? ಏನು ಸಂಕಷ್ಟ? ಎಂದು ಕೇಳಿದಾಗ ವಿನೋದ ತಬ್ಬಿಬ್ಬಾಗಿದ್ದನ್ನು ಕಂಡು ತಬ್ಬಿಕೊಂಡು ಬೆನ್ನು ಸವರಿದರು. ಆಗ ಕೊಂಚ ಸಾವರಿಸಿಕೊಂಡ ವಿನೋದ್ ಅರೆಬರೆ ಹಿಂದಿಯಲ್ಲಿ ಅವರ ಪ್ರಶ್ನೆಗೆ ಉತ್ತರಿಸುವ ಯತ್ನಮಾಡಿದ. ಇನ್ನು ಸುಜಾತ, ಸುಹಾಸಿನಿ ಕತೆಯನ್ನಂತೂ ಹೇಳಲು ಸಾಧ್ಯವೇ ಇಲ್ಲ. ರಾಹುಲ್ ಗಾಂಧಿ ಹೋಗಿ 10 ನಿಮಿಷ ಆದ ಬಳಿಕವೂ ಇಬ್ಬರು ಅವಕ್ಕಾಗಿಯೇ ಇದ್ದರು.
ಇನ್ನು ಅಲ್ಲಿಂದ 300 ಮೀಟರ್ ದೂರ ಸಾಗುತ್ತಲೇ ಜನಜಂಗುಳಿ ಸೇರಿತ್ತು. ಇದರ ಮಧ್ಯೆಯೂ ರಾಹುಲ್ ಗಾಂಧಿ ದಿಢೀರ್ ಕಾರ್ ಇಳಿದು ಮತ್ತೊಂದು ಘಟಕದ ಕಡೆ ಸಾಗಿದರು. ಹೀಗೆ ಅವರ ಓಡಾಟ ನಾಲ್ಕಾರು ಕಡೆ ನಡೆಯಿತು. ಹೋದಲೆಲ್ಲಾ ಜನಜಂಗುಳಿ ಸೇರಿದ್ದರಿಂದ ಎಸ್‌ಪಿಜಿ ಜನರನ್ನು ನಿಯಂತ್ರಿಸಲು ಹರ ಸಾಹಸ ಪಟ್ಟರು.