ಸರಣಿ ಕೊಲೆಗಳ ಮೂಲ ಎಲ್ಲಿ?

Advertisement

ಪ್ರೀತಿಯ ನೆಪಕ್ಕಾಗಿ ಇಬ್ಬರು ಅಮಾಯಕ ಹೆಣ್ಣುಮಕ್ಕಳನ್ನು ಚುಚ್ಚಿ ಚುಚ್ಚಿ ಇರಿದು ಕೊಲ್ಲಲಾಯಿತು. ಮತ್ತೊಂದೆಡೆ ಒಂದು ಮೊಬೈಲನ್ನು ಮೇಲಿಂದ ಮೇಲೆ ತಮ್ಮನೇ ಆಟವಾಡಲು ತೆಗೆದುಕೊಳ್ಳುತ್ತಿದ್ದ. ನನಗೆ ಸಿಗುತ್ತಿಲ್ಲವೆಂದ ಅಣ್ಣ, ತಮ್ಮನನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ, ಸುತ್ತಿಗೆಯಿಂದ ಹೊಡೆದು ಕೊಂದಿರುವುದು, ಇವೆಲ್ಲ ಸರಣಿ ಕೊಲೆಗಳು ನಮ್ಮ ಮಧ್ಯೆ ನಡೆದು ಸಮಾಜ ತಲ್ಲಣಗೊಂಡಿರುವುದು ಸರಿ ಅಷ್ಟೇ.
ಆ ಕುರಿತು ಸರಕಾರವಾಗಲಿ, ಬುದ್ಧಿಜೀವಿಗಳಾಗಲಿ, ಸಂಘ ಸಂಸ್ಥೆಗಳಾಗಲಿ ಈ ತರಹದ ಘಟನೆಗಳನ್ನು ಪರಾಂಬರಿಸುವ ಗೊಡವೆಗೆ ಹೋಗಲಿಲ್ಲ. ಇದು ವಿಷಾದನೀಯ. ಈ ಘಟನೆಗಳು ಸಮಾಜದಲ್ಲಿ, ಶಿಕ್ಷಣ ಸಂಸ್ಥೆಗಳಲ್ಲಿ ಎಲ್ಲೋ ಲೋಪವಿರುವುದು ಖಂಡಿತ.
ನಮ್ಮ ವಠಾರಗಳಲ್ಲಾಗಲಿ, ಶಾಲಾ ತರಗತಿಗಳಲ್ಲಾಗಲಿ ಮಕ್ಕಳಿರುವುದು ಸಹಜ. ನಾವು ಅವರನ್ನು ಸೂಕ್ಷ್ಮವಾಗಿ ಗಮನಿಸಿದಾಗ ೧೦ ಜನ ಮಕ್ಕಳಿದ್ದರೆ ೮ ಮಕ್ಕಳು ಜೊತೆಗಾರರೊಂದಿಗೆ ಗುಂಪಿನಲ್ಲಿ ಅಥವಾ ಜೊತೆಗಾರರೊಂದಿಗೆ ಆಟವಾಡುತ್ತಿರುತ್ತಾರೆ. ಆದರೆ ಉಳಿದ ೨ ಮಕ್ಕಳು ಯಾರೊಂದಿಗೂ ಬೆರೆಯದೇ ಸುಮ್ಮನೇ ಕುಳಿತಿರುತ್ತಾರೆ. ಈ ಇಬ್ಬರೂ ಮಕ್ಕಳೇ ನಮ್ಮ ಮೂಲ ಸಮಸ್ಯೆಗೆ ಕಾರಣವಾಗುತ್ತಾರೆ. ಇವರೇ ಒಂಟಿತನ ಅನುಭವಿಸುವ ಮಕ್ಕಳು.
ಏಕಾಂಗಿತನ, ಒಂಟಿತನ ಅನುಭವಿಸುತ್ತಿರುವ ಜನ ಸಾಮಾನ್ಯವಾಗಿ ಹೇಗಿರುತ್ತಾರೆ ಅಂದರೆ
ಸದಾ ಏಕಾಂಗಿಯಾಗಿ ಸುಮ್ಮನೆ ಕುಳಿತಿರುತ್ತಾರೆ.
ಸಂಗಾತಿ ಮಕ್ಕಳೊಂದಿಗೆ ಸೇರುವುದಿಲ್ಲ.
ಪ್ರಪಂಚ ಜ್ಞಾನ ಕಡಿಮೆ.
ಜಗಳಗಂಟಿತನವಿರುತ್ತದೆ.
ಹೊಂದಾಣಿಕೆ ಇರುವುದಿಲ್ಲ. ಇತ್ಯಾದಿ
ಒಂಟಿತನ ಎನ್ನುವುದು ಸಾಮಾಜಿಕ ಸಂಪರ್ಕದ ಅಗತ್ಯ ಪೂರೈಸದಿದ್ದಾಗ ಏರ್ಪಡುವ ಸ್ಥಿತಿ. ಇದರಿಂದ ಆತಂಕ ಮತ್ತು ಖಿನ್ನತೆಗೆ ಒಳಗಾಗುವರು. ಇದು ಎಲ್ಲ ವಯಸ್ಸಿನವರಲ್ಲೂ ಕಂಡುಬರುತ್ತದೆ. ವಯಸ್ಸಿನ ಯುವಕರಲ್ಲಿ ಸ್ವಯಂಪ್ರೇರಣೆಯಿಂದ ಇದು ಹೆಚ್ಚು ಧನಾತ್ಮಕವಾಗಿ ಪರಿಣಾಮ ಬೀರಬಹುದು. ಆದರೆ ಇದು ಮಕ್ಕಳಲ್ಲಿರುವುದು ಅಪಾಯಕಾರಿ.
ಹೊಂದಾಣಿಕೆ, ಅರ್ಥಪೂರ್ಣ ಸಂಬಂಧಗಳ ಕೊರತೆಯ ಸಮಸ್ಯೆ ಅನುಭವಿಸುವವರದು ಇದೊಂದು ಮಾನಸಿಕ ಸ್ಥಿತಿ. ಇದು ಅವರ ಮಾನಸಿಕ ಆರೋಗ್ಯದ ಮತ್ತು ದೈಹಿಕ ಆರೋಗ್ಯದ ಮೇಲೆ ಖಂಡಿತ ಪರಿಣಾಮ ಬೀರುತ್ತದೆ. ಇಂತಹ ಒಂಟಿತನ ಅನುಭವಿಸುವ ಮಕ್ಕಳಿಗೆ ಅರ್ಥಪೂರ್ಣ ಸಂಬಂಧಗಳು, ವಾತ್ಸಲ್ಯಗಳು ಬೇಕು. ಇಂತಹ ಮಕ್ಕಳನ್ನು ಪಾಲಕರು, ಶಿಕ್ಷಕರು ಗುರುತಿಸಬೇಕು. ಇವರನ್ನು ಸಮಯಕ್ಕೆ ಸರಿಯಾಗಿ ಸಾಮಾಜೀಕರಣಗೊಳಿಸದಿದ್ದರೆ, ಅನೇಕ ಗಂಭೀರ ಸಮಸ್ಯೆಗೆ ಕಾರಣವಾಗುತ್ತದೆ.
ಪ್ರಾರಂಭದಲ್ಲಿ ಪಕ್ಕದವರನ್ನು ಚಿವುಟುವ ಮಗು ಜಗಳಗಂಟಿತನ ಬೆಳೆಸಿಕೊಂಡು ಸಮಾಜವಿಮುಖನಾಗಿ ಬೆಳೆಯುತ್ತಾ ಸಮಾಜ ವಿರೋಧಿ ವ್ಯಕ್ತಿಯಾಗಿ ಅತ್ಯಾಚಾರ, ಅನಾಚಾರ, ಕೊಲೆ, ಸುಲಿಗೆಗಳಂತಹ ಕೃತ್ಯಗಳತ್ತ ಸಾಗುತ್ತಾನೆ. ಇದನ್ನೇ ಇಂದು ನಾವು ನೋಡುತ್ತಿದ್ದೇವೆ.
ವ್ಯಕ್ತಿಯಿಂದ ವ್ಯಕ್ತಿಗೆ ಹೋದಂತೆ ಅವರ ಗುರಿಗಳಲ್ಲಿ ಅವರ ನೈತಿಕ ಸಮಸ್ಯೆಗಳಲ್ಲಿ ಹೋರಾಟಗಳಿರುತ್ತವೆ. ಇಂತಹ ಸಂದರ್ಭಗಳಲ್ಲಿ ತಮ್ಮ ನಿಲುವಿಗೆ ಅಂಟಿಕೊಂಡು ಪ್ರೀತಿ, ದ್ವೇಷ, ರೋಷಗಳು ಭುಗಿಲೇಳುತ್ತವೆ.
ಇದು ಸರಿಪಡಿಸುವುದು ಚಿಕ್ಕವರಿರುವಾಗಲೇ. ಮೂರು ವರ್ಷದ ಬುದ್ಧಿ ನೂರು ವರ್ಷದವರೆಗೆ ಎಂದು ಹೇಳುತ್ತಾರಲ್ಲ ಹಾಗೆ. ಮಕ್ಕಳು ಚಿಕ್ಕವರಿರುವಾಗ, ಶಾಲಾಪೂರ್ವ ವರ್ಷಗಳಲ್ಲಿ ಸಾಮಾನ್ಯವಾಗಿ ಸಾಮಾಜಿಕ ಅದಿಪತ್ಯ ತೋರುವುದು. ಅಕ್ರಮಣಕಾರಿ ಮನೋಭಾವ, ಪ್ರತಿಷ್ಠೆಯಿಂದ ಕೂಡಿರುವುದು ಆಗಿರುತ್ತದೆ.
ಮಕ್ಕಳು ಚಿಕ್ಕವರಿರುವಾಗ ಒದೆಯುವುದು, ಕೈಚಾಚುವುದು, ತನ್ನ ಹತ್ತಿರ ಬರುವ ಕುಟುಂಬ ಸದಸ್ಯರ ಬಳಿಗೆ ಚಲಿಸುವುದು, ಪ್ರತಿಕ್ರಿಯೆ ತೋರಿಸುವುದು, ಗುರುತಿಸುವುದು, ನಗುವುದು ಮಾಡುತ್ತಿರುತ್ತದೆ. ಮುಂದೆ ಮಕ್ಕಳು ಶಾಲೆಗೆ ಮೊದಲ ಬಾರಿಗೆ ಬಂದಾಗ ಸಾಮಾಜಿಕ ಚಟುವಟಿಕೆಗಳ ವಾತಾವರಣಕ್ಕೆ ಪ್ರವೇಶವಾಗಿ ಅಲ್ಲಿ ಆಟ, ಪಾಠಗಳಲ್ಲಿ ಅನೇಕ ಲಕ್ಷಣಗಳನ್ನು ತೋರುತ್ತಾರೆ. ಆವಾಗಲೇ ಸಮಾಜ ವಿರೋಧದ ಮತ್ತು ಅತೀವ ಸ್ವಕೀಯತೆಯ ವರ್ತನೆಗಳು ಕೆಲವರಲ್ಲಿ ಕಂಡುಬರುತ್ತವೆ. ಆಗ ಪಾಲಕರು, ಶಿಕ್ಷಕರು ಮಕ್ಕಳಿಗೆ ಜೀವನ ಪಾಠಗಳಿಗೆ ಪ್ರವೇಶಿಸಲು ಅನುವು ಮಾಡಿಕೊಡಬೇಕು. ತನ್ಮೂಲಕ ಬಾಂಧವ್ಯ ಬೆಸೆಯುವ ಗುಂಪು ಆಟಗಳು, ವಿದ್ಯಾರ್ಥಿ ಮಂಡಳಿಗಳು, ನಾಟಕ, ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದಾಗ ಅವರೆಲ್ಲ ಸಾಮಾಜೀಕರಣಗೊಂಡು ಬೇಗನೇ ಅದರ ಭಾಗವಾಗಿಬಿಡುತ್ತಾರೆ. ಇವರೇ ಮುಂದೆ ಸಮಾಜ ಉಪಯೋಗಿ ವ್ಯಕ್ತಿಗಳಾಗಿ ಹೊರಹೊಮ್ಮುತ್ತಾರೆ. ಆಗ ಸಮಾಜದಲ್ಲಿ ನೆಮ್ಮದಿಯ ಸುಳಿಗಾಳಿ ಬೀಸಲು ಸಾಧ್ಯ.