ನಶೆ ಏರಿದೆ, ಮಿತಿ ಮೀರಿದೆ.. ಜೋಪಾನ…

Advertisement

ಶಿವಕುಮಾರ್ ಮೆಣಸಿನಕಾಯಿ
ಬೆಂಗಳೂರು: ನೆರೆಯ ಆಂಧ್ರಪ್ರದೇಶದ ಗುಂಟೂರು ಹಾಗೂ ಒಡಿಶಾ ರಾಜ್ಯದಿಂದ ರೈಲಿನ ಮೂಲಕವೇ ಪ್ರತಿ ತಿಂಗಳು ಸಾವಿರಾರು ಟನ್ ಗಾಂಜಾ ಸರಬರಾಜು ನಡೆಯುತ್ತಿದೆ ಎಂಬ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ. ಗುಂಟಕಲ್‌ನಿಂದ ರಾಜ್ಯದ ಹುಬ್ಬಳ್ಳಿಗೆ ಹಾಗೂ ಒಡಿಶಾದಿಂದ ಮಹಾರಾಷ್ಟçದ ಸಾಂಗ್ಲಿ ಮೂಲಕ ಬೆಳಗಾವಿಗೆ ರೈಲಿನ ಮೂಲಕವೇ ಸರಬರಾಜು ಆಗುತ್ತಿದ್ದರೂ ರೈಲ್ವೆ ಮತ್ತು ರಾಜ್ಯ ಪೊಲೀಸ್ ಅಧಿಕಾರಿಗಳು ಈ ಅಕ್ರಮ ಜಾಲವನ್ನು ನಿಗ್ರಹಿಸಲು ವಿಫಲರಾಗಿದ್ದಾರೆ.
ರಾಜಧಾನಿ ಬೆಂಗಳೂರು ನಗರದಲ್ಲಿ ರೇವ್ ಪಾರ್ಟಿಯಲ್ಲಿ ತೆಲುಗು ಚಿತ್ರರಂಗದ ನಟಿಯರು ಸಿಕ್ಕಿಬಿದ್ದ ಬೆನ್ನಲ್ಲೇ ರಾಜ್ಯದಲ್ಲಿ ಮಾದಕ ಸೇವನೆ ಅವ್ಯಾಹತವಾಗಿದೆ ಎಂಬ ಸತ್ಯವನ್ನು ಗೃಹ ಸಚಿವರೇ ಒಪ್ಪಿಕೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ `ಸಂಯುಕ್ತ ಕರ್ನಾಟಕ’ ನಡೆಸಿದ ತನಿಖಾ ವರದಿಯಲ್ಲಿ ರಾಜ್ಯಕ್ಕೆ ನೆರೆ ರಾಜ್ಯದಿಂದ ಸರಬರಾಜು ಆಗುವ ಗಾಂಜಾ ವಹಿವಾಟಿನ ಸಂಪೂರ್ಣ ಮಾಹಿತಿ ಲಭ್ಯವಾಗಿದೆ.
ಗಾಂಜಾ ಎಲ್ಲಿಂದ ಹೇಗೆ ಸಂಗ್ರಹಿಸಿ, ಯಾರು ರವಾನಿಸುತ್ತಾರೆ ಎಂಬ ಅಂಶವನ್ನು ಪತ್ತೆ ಮಾಡಲಾಗಿದೆ. ಭದ್ರತೆ ದೃಷ್ಟಿಯಿಂದ ಪೊಲೀಸ್ ಅಧಿಕಾರಿಗಳ ಹೆಸರುಗಳನ್ನು ಗೌಪ್ಯವಾಗಿ ಇಡಲಾಗಿದೆ. ಅಲ್ಲದೇ ಈ ಜಾಲದ ಭಾಗವಾಗಿರುವ ಕೆಲವು ವ್ಯಕ್ತಿಗಳಿಂದಲೇ ಕೆಲವು ಮಾಹಿತಿ ಸಂಗ್ರಹಿಸಲಾಗಿದ್ದು, ಅನಾಮಿಕ ವ್ಯಕ್ತಿಗಳು ಹೆಸರು ಗೌಪ್ಯವಾಗಿಡುವಂತೆ ಕೋರಿದ್ದರಿಂದ ಕೆಲವು ಏಜೆಂಟರ ಹೆಸರುಗಳನ್ನು ಬಳಸಲಾಗಿಲ್ಲ.
ಗಾಂಜಾ ಕಾರಿಡಾರ್: ಆಂಧ್ರಪ್ರದೇಶದ ಗುಂಟೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೇರಳವಾಗಿ ಗಾಂಜಾ ಬೆಳೆಯುತ್ತಾರೆ. ಬಳಿಕ ಸಂಗ್ರಹಿಸಿ ಗುಂಟಕಲ್‌ಗೆ ರವಾನೆಯಾಗುತ್ತದೆ. ಅಲ್ಲಿಂದ ಹುಬ್ಬಳ್ಳಿಗೆ ಸರಬರಾಜು ಮಾಡುವ ಏಜೆಂಟ್ ರೈಲಿನಲ್ಲಿ ತರುತ್ತಾನೆ. ಹುಬ್ಬಳ್ಳಿ ಸಮೀಪದ ಕುಸುಗಲ್ ಗ್ರಾಮದ ನಿಲ್ದಾಣದ ನಂತರ ಎರಡು ಕಿಮೀ ಬಳಿಕ ರೈಲಿನಿಂದ ಎಸೆದು ಬಿಡುತ್ತಾರೆ. ರೈಲಿನಿಂದಲೇ ಚೀಲಗಳನ್ನು ಎಸೆದರೆ ಏಜೆಂಟರ ಕೆಲಸ ಮುಗಿಯಿತು. ಅಲ್ಲಿಂದ ಟಾಟಾ ಏಸ್ ನಂತರ ಗೂಡ್ಸ್ ವಾಹನಗಳು ಕಾಯುತ್ತ ನಿಂತಿರುತ್ತವೆ. ಹುಬ್ಬಳ್ಳಿ ರೈಲು ನಿಲ್ದಾಣಕ್ಕಿಂತ ಮುಂಚೆ ಸುಮಾರು ೧೦ ಕಿಮೀ ದೂರದಲ್ಲಿ ಚೀಲಗಳನ್ನು ಎಸೆಯಲಾಗುತ್ತದೆ.

ಒಡಿಶಾದಿಂದ ಬೆಳಗಾವಿ- ವಯಾ ಸಾಂಗ್ಲಿ
ಬೆಳಗಾವಿ ನಗರ ಅತಿದೊಡ್ಡ ಶೈಕ್ಷಣಿಕ ಕೇಂದ್ರ. ಸಾವಿರಾರು ಹೊರರಾಜ್ಯದ ವಿದ್ಯಾರ್ಥಿಗಳು ಇಲ್ಲಿಗೆ ಪ್ರತಿವರ್ಷ ಬರುತ್ತಾರೆ. ಹೀಗಾಗಿ ಹಾಸ್ಟೆಲ್, ಪಿಜಿಗಳು, ಸಿಂಗಲ್ ರೂಮ್‌ಗಳಲ್ಲಿ ವಿದ್ಯಾರ್ಥಿಗಳು ವಾಸಿಸುವುದು ಹೆಚ್ಚು. ಇವರನ್ನೇ ಕೇಂದ್ರವಾಗಿಟ್ಟುಕೊಂಡು ಕೋಟ್ಯಂತರ ರೂಪಾಯಿ ಗಾಂಜಾ ಮಾರಾಟ ಮಾಡುವ ಜಾಲ ಬೆಳಗಾವಿಯಲ್ಲಿ ಸಕ್ರಿಯವಾಗಿದೆ. ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ನೀಡಿರುವ ಮಾಹಿತಿ ಪ್ರಕಾರ, ಸವದತ್ತಿ, ರಾಯಬಾಗ, ಕುಡಚಿ ಸುತ್ತಲಿನ ಪ್ರದೇಶಗಳಲ್ಲಿ ಗಾಂಜಾ ಬೆಳೆದು ಬೆಳಗಾವಿಗೆ ಟಾಟಾ ಏಸ್‌ನಂತರ ಲಘು ಗೂಡ್ಸ್ ವಾಹನಗಳಲ್ಲಿ ಸರಬರಾಜು ಮಾಡಲಾಗುತ್ತದೆ. ಆದರೆ ಈ ಪ್ರಮಾಣದ ಗಾಂಜಾ ಬೆಳಗಾವಿಗೆ ಸಾಕಾಗುವುದಿಲ್ಲ. ಹೀಗಾಗಿ ಒಡಿಶಾ ರಾಜ್ಯದಿಂದ ಮಹಾರಾಷ್ಟ್ರದ ಸಾಂಗ್ಲಿ ಮತ್ತು ಗೋವಾ ಗಡಿಯಲ್ಲಿರುವ ಮಿರಜ್‌ಗೆ ಗಾಂಜಾ ಬರುತ್ತದೆ. ಅಲ್ಲಿಂದ ಬೆಳಗಾವಿಗೆ ಪ್ರತಿ ವಾರ ಗಾಂಜಾ ಬರುತ್ತದೆ. ಸ್ಥಳೀಯ ಪೊಲೀಸರು ಆಗಾಗ ದಾಳಿ ಮಾಡಿ, ಸಣ್ಣ-ಪುಟ್ಟ ಪ್ರಮಾಣದ ಗಾಂಜಾ ಜಪ್ತಿ ಮಾಡುತ್ತಾರಾದರೂ ದೊಡ್ಡ ಪ್ರಮಾಣದಲ್ಲಿ ಗಾಂಜಾ ಮಾರಾಟ ನಡೆಯುತ್ತಿದೆ. ಆದರೆ ಇಲ್ಲಿಯೂ ಕೂಡ ಪೊಲೀಸರ ಜಾಣಕುರುಡು ಎದ್ದು ಕಾಣುತ್ತದೆ.

ಕೇರಳ-ಕೂರ್ಗ್ ಫಾರೆಸ್ಟ್ ಕಾರಿಡಾರ್
ಉತ್ತರ ಕರ್ನಾಟಕ ಮಾತ್ರವಲ್ಲದೇ ಕರಾವಳಿ ಮತ್ತು ಹಳೇ ಮೈಸೂರು ಭಾಗದ ಅನೇಕ ಪ್ರವಾಸಿ ತಾಣಗಳಲ್ಲಿ ಹೈಟೆಕ್ ಡ್ರಗ್ಸ್ ಮಾತ್ರವಲ್ಲದೇ ಗಾಂಜಾ ಮಾರಾಟ ಮತ್ತು ಸೇವನೆ ವಿಪರೀತ ಪ್ರಮಾಣದಲ್ಲಿದೆ. ಮಂಗಳೂರಿಗೆ ನೆರೆಯ ಕೇರಳದಿಂದ ದೊಡ್ಡ ಪ್ರಮಾಣದಲ್ಲಿ ಗಾಂಜಾ ಸೇರಿದಂತೆ ಎಲ್ಲ ಬಗೆಯ ಮಾದಕ ವಸ್ತುಗಳ ಸಾಗಾಟ ಹಲವು ವರ್ಷಗಳಿಂದ ಅವ್ಯಾಹತವಾಗಿ ನಡೆಯುತ್ತಿದೆ.
ಕೇರಳದಿಂದ ಕೊಡಗು ಮೂಲಕ ಮೈಸೂರಿಗೂ ಮಾದಕ ವಸ್ತುಗಳ ಸರಬರಾಜು ನಡೆಯುತ್ತದೆ ಎಂಬ ವಿಷಯ ಪೊಲೀಸ್ ಇಲಾಖೆಗೆ ಗೊತ್ತಿಲ್ಲವೆಂದಲ್ಲ. ಇಡೀ ರಾಜ್ಯದಲ್ಲಿ ಸರಬರಾಜು ಆಗುವ ಡ್ರಗ್ಸ್ ಒಂದು ತೂಕದ್ದಾದರೆ, ಬೆಂಗಳೂರು ನಗರದ ನಶೆಯ ಜಗತ್ತೇ ಮತ್ತೊಂದು ತೂಕದ್ದು. ಬೆಂಗಳೂರಿನ ಪಬ್‌ಗಳು, ನೈಟ್ ಕ್ಲಬ್‌ಗಳು, ಶಾಲಾ-ಕಾಲೇಜುಗಳು, ಹಾಸ್ಟೆಲ್‌ಗಳು, ಪಿಜಿಗಳಲ್ಲಿ ಲಕ್ಷಾಂತರ ಮೌಲ್ಯದ ದುಬಾರಿ ಡ್ರಗ್ಸ್ ಹೇರಳವಾಗಿ ದೊರೆಯುತ್ತದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೇ ಡ್ರಗ್ಸ್ ಆಮದು ಮಾಡಿಕೊಳ್ಳುವ ಬಹುದೊಡ್ಡ ರಹದಾರಿ. ವಾರ್ಷಿಕ ಸರಾಸರಿ ೧೦೦ ಕೋಟಿ ರೂ. ಮೌಲ್ಯದ ಡ್ರಗ್ಸ್ ಅನ್ನು ಪೊಲೀಸರು ವಶಪಡಿಸಿಕೊಳ್ಳುತ್ತಾರೆ. ಇನ್ನು ಪೊಲೀಸರ ಕೈಗೆ ಸಿಗದೇ ಇರುವ ಡ್ರಗ್ಸ್ನ ಪ್ರಮಾಣ ಎಷ್ಟಿರಬಹುದು ಎಂಬುದನ್ನು ಊಹಿಸಲೂ ಅಸಾಧ್ಯ.