ಆದಿಲ್ ಮೃತಪಟ್ಟಿದ್ದು ಲೋ ಬಿಪಿಯಿಂದ: ಮೃತನ ತಂದೆ ಕಲೀಂವುಲ್ಲಾ ಹೇಳಿಕೆ

Advertisement

ದಾವಣಗೆರೆ: ನನ್ನ ಪುತ್ರ ಆದಿಲ್ ಲೋ ಬಿಪಿಯಿಂದ ಸಾವನ್ನಪ್ಪಿದ್ದು, ಪೊಲೀಸರ ಮೇಲೆ ನಮಗೆ ಯಾವ ಅನುಮಾನವೂ ಇಲ್ಲ. ಪೊಲೀಸರ ಮೇಲೆ ಹಲ್ಲೆ ನಡೆಸಿದವರು ಯಾರೆಂಬುದು ನಮಗೆ ಗೊತ್ತಿಲ್ಲ ಎಂದು ಮೃತನ ತಂದೆ ಕಲೀಂವುಲ್ಲಾ ಹೇಳಿಕೆ ನೀಡಿದ್ದಾರೆ.

ಶುಕ್ರವಾರ ಮಟ್ಕಾ ಜೂಜಾಟದ ಆರೋಪದಡಿ ಆದಿಲ್ ಎಂಬಾತನನ್ನು ಚನ್ನಗಿರಿ ಪೊಲೀಸರು ಠಾಣೆಗೆ ಕರೆತಂದು ವಿಚಾರಣೆ ನಡೆಸುವ ವೇಳೆ ಆದಿಲ್ ಲೋಬಿಪಿಯಾಗಿ ಮೃತಪಟ್ಟಿದ್ದ. ಲಾಕಪ್ ಡೆತ್ ಆರೋಪದಡಿ ಮೃತನ ಸಂಬAಧಿಕರು, ಕುಟುಂಬಸ್ಥರು ಠಾಣೆಗೆ ನುಗ್ಗಿ ಪೊಲೀಸರ ಮೇಲೆ ಹಲ್ಲೆ ನಡೆಸಿ, ೭ ವಾಹನಗಳನ್ನು ಧ್ವಂಸಗೊಳಿಸಿದ್ದರು. ಪಟ್ಟಣದಲ್ಲಿ ಬಿಗುವಿನ ವಾತಾವರಣ ತಲೆದೋರಿತ್ತು.

ಈ ಹಿನ್ನೆಲೆಯಲ್ಲಿ ಗಂಭೀರ ಪ್ರಕರಣ ಇದಾಗಿದ್ದರಿಂದ ನ್ಯಾಯಾಧೀಶರ ಸಮ್ಮುಖದಲ್ಲಿಯೇ ಶನಿವಾರ ಮರಣೋತ್ತರ ಪರೀಕ್ಷೆಗಾಗಿ ದಾವಣಗೆರೆ ಜಿಲ್ಲಾಸ್ಪತ್ರೆಗೆ ಶವ ತರಲಾಗಿತ್ತು. ಈ ವೇಳೆ ಮೃತ ಆದಿಲ್ ತಂದೆ ಸುದ್ದಿಗಾರರೊಂದಿಗೆ ಮಾತನಾಡಿ, ಆದಿಲ್ ಇತರೆ ಪ್ರಕರಣಗಳಲ್ಲಿ ಸಿಲುಕಿದ್ದ ಎಂಬುದು ಸುಳ್ಳು. ಆತ ಕಾರ್ಪೆಟರ್ ಆಗಿ ಕೆಲಸ ಮಾಡಿ ನಮ್ಮ ಕುಟುಂಬವನ್ನು ಸಾಕುತ್ತಿದ್ದ. ಈಗ ಆತ ಮೃತಪಟ್ಟಿದ್ದರಿಂದ ನಮಗೆ ಪರಿಹಾರ ನೀಡಿ ಎಂದಷ್ಟೇ ನಾವು ದೂರು ನೀಡಿದ್ದೇವೆ ಎಂದು ಹೇಳಿದರು.

ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪೊಲೀಸರ ಮೇಲೆ ಹಲ್ಲೆ ನಡೆಸಿರುವವರು ಯಾರೆಂಬುದು ನಮಗೆ ಮಾಹಿತಿ ಇಲ್ಲ. ನಾವು ಕುಟುಂಬಸ್ಥರು ಪೊಲೀಸ್ ಠಾಣೆಯ ಒಳಗೆ ಇದ್ದೆವು. ಅಂತಹ ದುಃಖದಲ್ಲಿ ನಾವು ಪೊಲೀಸರ ಮೇಲೆ ಹಲ್ಲೆ ನಡೆಸಿಲ್ಲ ಎಂದು ಹೇಳಿದರು.