ಖರ್ಗೆ ಗೆಲುವು : ಕುಷ್ಟಗಿಯಲ್ಲಿ ಸಂಭ್ರಮಾಚರಣೆ

ಕುಷ್ಟಗಿ
Advertisement

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ಗೆ ನೂತನ ಅಧ್ಯಕ್ಷರಾಗಿ ಕರ್ನಾಟಕದ ಮುಲ್ಲಿಕಾರ್ಜುನ ಖರ್ಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪಟ್ಟಣದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿ ವಿಜಯೋತ್ಸವ ಆಚರಿಸಿದರು.
ಪುರಸಭೆ ಸದಸ್ಯ ಮೈನುದ್ದಿನ್ ಮುಲ್ಲಾ ಮಾತನಾಡಿ,ಕಾಂಗ್ರೆಸ್ ಅಧ್ಯಕ್ಷೀಯ ಸ್ಥಾನಕ್ಕೆ ಅ.17ರಂದು ಚುನಾವಣೆ ನಡೆದಿತ್ತು. ಶೇ.96 ಪ್ರದೇಶ ಕಾಂಗ್ರೆಸ್ ಮುಖಂಡರು ಮತದಾನ ಮಾಡಿದ್ದರು. ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್ ನಡುವೆ ನಡೆದ ಹಣಾಹಣಿಯಲ್ಲಿ 6825 ಮತಗಳ ಅಂತರದಲ್ಲಿ ಖರ್ಗೆ ಗೆಲುವಿನ ನಗೆ ಬೀರಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು 7,897 ಮತಗಳನ್ನು ಪಡೆಯುವ ಮೂಲಕ ಎಐಸಿಸಿ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.ಎಐಸಿಸಿ ಅಧ್ಯಕ್ಷರಾಗಿ ಕರ್ನಾಟಕದಿಂದ ಆಯ್ಕೆಯಾದವರಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು 2ನೇಯವರು. 1968 ರಲ್ಲಿ ಮಾಜಿ ಸಿಎಂ ಎಸ್.ನಿಜಲಿಂಗಪ್ಪ ಅವರು ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು ಎಂದರು.
1959 ರಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರಾಗಿ ಐದು ದಶಕಗಳ ಕಾಲ ಕಾಂಗ್ರೆಸ್ ಪಕ್ಷಕ್ಕೆ ನಿಷ್ಟರಾಗಿ ಸೇವೆಸಲ್ಲಿಸಿದ್ದಾರೆ. ಅದರಲ್ಲೂ ವಿಶೇಷವಾಗಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರಿಗೆ ನೆಚ್ಚಿನ ನಾಯಕರಾಗಿ ಮಲ್ಲಿಕಾರ್ಜುನ ಖರ್ಗೆಯವರು ಹೊರಹೊಮ್ಮಿದ್ದಾರೆ. ಅವರ ರಾಜಕೀಯ ಚಾಣಾಕ್ಷತನದಿಂದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ನಿಜಕ್ಕೂ ನಮ್ಮ ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಸಂತೋಷವಾಗಿದೆ ಎಂದರು.
ಕಾಂಗ್ರೆಸ್ ಪಕ್ಷದ ಮುಖಂಡ ಮಹೇಶ್ ಕೋಳೂರು, ಶೌಕತ್ ಕಾಯಿಗಡ್ಡಿ, ಪುರಸಭೆ ಸದಸ್ಯ ರಾಮಣ್ಣ ಬಿನ್ನಾಳ, ಶಿವಕುಮಾರ್ ಕಟ್ಟಿಮನಿ, ಫಾರೂಕ್ ಡಲಾಯತ್, ಮರಿಯಪ್ಪ ಮಾದರ, ಹುಸೇನ,ಕಳಕಪ್ಪ, ಶಂಕ್ರಪ್ಪ, ರಾಜೇಸಾಬ್, ವಿರೇಶ ಚಳಗೇರಿ, ವೆಂಕಟೇಶ, ಸದ್ದಾಮ್ ಸೇರಿದಂತೆ ಅನೇಕರು ಇದ್ದರು.