ಎಕ್ಸಿಟ್‌ಪೋಲ್‌ನತ್ತ ಚಿತ್ತ

Advertisement

ಬಿ.ಅರವಿಂದ
ದೇಶದ ಲೋಕಸಭಾ ಚುನಾವಣೆಗಳು ಜೂನ್ ೧ರಂದು ಮುಗಿದು ಜೂನ್ ೪ರ ಫಲಿತಾಂಶದ ಕಡೆಗೆ ಜನತೆ ಗಮನ ನೆಟ್ಟಿದ್ದಾರೆ. ಇದರ ನಡುವೆ, ಶನಿವಾರ ಸಂಜೆ ಹೊರಬೀಳಲಿರುವ ಎಕ್ಸಿಟ್ ಪೋಲ್ (ಮತದಾನೋತ್ತರ ಫಲಿತಾಂಶ) ಎಲ್ಲರನ್ನೂ ತುದಿಗಾಲ ಮೇಲೆ ನಿಲ್ಲಿಸಿದೆ.
ಇತ್ತೀಚಿನ ವರ್ಷಗಳಲ್ಲಿ ಎಕ್ಸಿಟ್ ಪೋಲ್ ಕುರಿತ ಕುತೂಹಲ ಹೆಚ್ಚಿದೆ ನಿಜ. ಆದರೆ ಈ ಲೋಕಸಭಾ ಚುನಾವಣೆಯಲ್ಲಿ ಇದು ಸ್ವಲ್ಪ ಹೆಚ್ಚೇ ಎನಿಸುವಷ್ಟು ಜನ ಕಾಯುವಂತೆ ಮಾಡಿದೆ ಎಂಬುದು ಉತ್ಪ್ರೆಕ್ಷೆಯಲ್ಲ. ಅತೀ ಸುದೀರ್ಘ ದಿನಗಳ ಪ್ರಕ್ರಿಯೆಗೆ ಸಾಕ್ಷಿಯಾದ ಚುನಾವಣೆ ಇದಾಗಿತ್ತು. ಜೊತೆಗೆ, ಕೊನೇ ಹಂತದ ಚುನಾವಣೆ ಜೂನ್ ೧ಕ್ಕೆ ಮುಗಿದು ಒಂದು ತಾಸಿನವರೆಗೆ ಯಾವ ರಾಜ್ಯವೂ ಎಕ್ಸಿಟ್ ಪೋಲ್ ಪ್ರಕಟಿಸಕೂಡದು ಎಂಬ ನಿಯಮ ಈ ಬಾರಿ ಜಾರಿಗೊಂಡಿತ್ತು. ಹೀಗಾಗಿ ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಕೇರಳ ರಾಜ್ಯಗಳು ಮೊದಲಿನ ಮೂರು ಹಂತಗಳಲ್ಲೇ ಚುನಾವಣೆ ಮುಗಿಸಿದ್ದರೂ ಎಕ್ಸಿಟ್ ಪೋಲ್‌ಗೆ ಇರುವ ನಿರ್ಬಂಧದಿಂದಾಗಿ ಕಾಯಬೇಕಾಗಿತ್ತು. ಇದು ಸಹಜವಾಗಿ ಕುತೂಹಲವನ್ನು ಇಮ್ಮಡಿಗೊಳಿಸಿದೆ.
ಎಕ್ಸಿಟ್ ಪೋಲ್‌ಗಳಲ್ಲಿ ಕೆಲವು ವೈಜ್ಞಾನಿಕವಾಗಿದ್ದರೆ, ಉಳಿದ ಕೆಲವು ರಾಜಕೀಯ ಪಕ್ಷಗಳ ಪ್ರಾಯೋಜನೆಯಂತಿರುತ್ತವೆ ಎಂಬುದು ವಾಸ್ತವ. ಆದಾಗ್ಯೂ ದೇಶದ ಜನತೆ ಇತ್ತೀಚಿನ ವರ್ಷಗಳಲ್ಲಿ ಇವುಗಳನ್ನು ಗಮನಿಸುತ್ತಿದ್ದಾರೆ. ಹೀಗಾಗಿ ಶನಿವಾರ ಸಂಜೆಯ ಎಕ್ಸಿಟ್ ಪೋಲ್ ಕುರಿತಾಗಿಯೂ ಚರ್ವಿತ ಚರ್ವಣ ಚರ್ಚೆಗಳು ಆರಂಭವಾಗಿವೆ.
ಸೂಕ್ಷ್ಮವಾಗಿ ಗಮನಿಸಿದರೆ ಆರು ಹಂತಗಳ ಚುನಾವಣೆ ಮುಗಿಯುವ ಹೊತ್ತಿಗೆ, ಪೊಲಿಟಿಕಲ್ ಅನಾಲಿಸಿಸ್(ರಾಜಕೀಯ ವಿಶ್ಲೇಷಣೆ) ಮತ್ತು ಸೆಫಾಲಜಿ (ಮತದಾನವನ್ನು ವೈಜ್ಞಾನಿಕವಾಗಿ ವಿಶ್ಲೇಷಿಸುವ ರಾಜಕೀಯ ಶಾಸ್ತ್ರದ ಅಂಗ) ಹೆಸರಿನಲ್ಲಿ ಎಕ್ಸಿಟ್ ಪೋಲ್ ನಡೆದು ಹೋಗಿದೆ.
ಕರ್ನಾಟಕ ಸೇರಿದಂತೆ ಮೇ ೨೫ನೇ ತಾರೀಕಿನವರೆಗೆ ನಡೆದಿರುವ ವಿವಿಧ ರಾಜ್ಯಗಳ ಚುನಾವಣೆಗಳಲ್ಲಿ ಎಲ್ಲಿ, ಯಾವ ಪಕ್ಷ ಮುನ್ನಡೆಯಲ್ಲಿದೆ ಎಂಬುದಷ್ಟೇ ಅಲ್ಲ, ಯಾರು ಗೆಲ್ಲಲಿದ್ದಾರೆ ಎಂಬುದನ್ನೂ ಕೂಡ ಈಗಾಗಲೇ ಅನೇಕ ಸೆಫಾಲಜಿಸ್ಟರು ಹೇಳಿಬಿಟ್ಟಿದ್ದಾರೆ.
ಬಲ ಮತ್ತು ಎಡ ಎರಡೂ ಕಡೆಯ ಈ ಸೆಫಾಲಜಿ ಸರ್ಕಸ್ ಅನ್ನು ಲಕ್ಷಾಂತರ ವೀಕ್ಷಕರು ಗಮನಿಸಿದ್ದಾರೇನೋ ಹೌದು. ಆದರೆ ಅಧಿಕೃತವಾಗಿ ಆಯೋಗ ಮಾನ್ಯತೆ ನೀಡಿರುವ ಎಕ್ಸಿಟ್ ಪೋಲ್ ಮಾತ್ರ ನಂಬಲರ್ಹ ಎನ್ನುವ ಭಾವನೆ ಎಲ್ಲರಲ್ಲೂ ಇದೆ. ಆದ್ದರಿಂದಲೇ ಶನಿವಾರ ಸಂಜೆಯ ಲೈವ್‌ಗಾಗಿ ಕಣ್ಣರಳಿಸಿ ಕಾಯುತ್ತಿದ್ದಾರೆ.