ಇಂದು ಕೊನೇ ಹಂತದ ಮತದಾನ

Advertisement

ನವದೆಹಲಿ: ಹದಿನೆಂಟನೇ ಲೋಕಸಭೆಯ ಏಳನೇ ಮತ್ತು ಅಂತಿಮ ಹಂತದ ಮತದಾನವು ಶನಿವಾರ ನಡೆಯಲಿದೆ. ಇದರೊಂದಿಗೆ ಚುನಾವಣೆ ಅಂತಿಮ ಘಟ್ಟ ತಲುಪಿದ್ದು, ಜೂನ್ ೪ರಂದು ಮತ ಎಣಿಕೆ ನಡೆಯಲಿದೆ.
ಏಳನೇ ಹಂತದಲ್ಲಿ ಎಂಟು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ೫೭ ಲೋಕಸಭಾ ಕ್ಷೇತ್ರಗಳಲ್ಲಿ ಜನ ತಮ್ಮ ಹಕ್ಕು ಚಲಾಯಿಲಿದ್ದಾರೆ. ಮತಯಂತ್ರಗಳೊಂದಿಗೆ ಚುನಾವಣಾ ಸಿಬ್ಬಂದಿ ಈಗಾಗಲೇ ಮತಗಟ್ಟೆ ತಲುಪಿಕೊಂಡಿದ್ದಾರೆ. ೧೩ ವಿಶೇಷ ರೈಲು ಮತ್ತು ೮ ಹೆಲಿಕಾಪ್ಟರ್‌ಗಳ ಮೂಲಕ ಚುನಾವಣಾ ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿಯನ್ನು ಕಳುಹಿಸಲಾಗಿದೆ.
ಪಂಜಾಬ್‌ನ ಎಲ್ಲಾ ೧೩ ಮತ್ತು ಹಿಮಾಚಲ ಪ್ರದೇಶದ ನಾಲ್ಕು ಸ್ಥಾನಗಳು, ಉತ್ತರ ಪ್ರದೇಶದ ೧೩ ಕ್ಷೇತ್ರಗಳು, ಪಶ್ಚಿಮ ಬಂಗಾಳದ ೯, ಬಿಹಾರದ ೮, ಒಡಿಶಾದ ೬, ಜಾರ್ಖಂಡ್‌ನ ೩ ಮತ್ತು ಚಂಡೀಗಢ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ.
ಈ ಹಂತದಲ್ಲಿ ಪ್ರಧಾನಿ ನರೇಂದ್ರ ಮೋದಿ, ರವಿಶಂಕರ್ ಪ್ರಸಾದ್, ಕಂಗನಾ ರಣಾವತ್, ಮನೀಶ್ ತಿವಾರಿ, ಅನುಪ್ರಿಯಾ ಪಟೇಲ್, ಆನಂದ್ ಶರ್ಮಾ, ಮೀಸಾ ಭಾರ್ತಿ, ಅಭಿಷೇಕ್ ಬ್ಯಾನರ್ಜಿ, ಚರಣಜಿತ್ ಚನ್ನಿ, ಅನುರಾಗ ಠಾಕೂರ್ ಸೇರಿದಂತೆ ಹಲವು ಗಣ್ಯರ ಭವಿಷ್ಯ ನಿರ್ಧಾರವಾಗಲಿದೆ.
ಮೊದಲ ಆರು ಹಂತಗಳಲ್ಲಿ ಕ್ರಮವಾಗಿ ಶೇಕಡ ೬೬.೧೪, ಶೇಕಡ ೬೬.೭೧, ಶೇಕಡ ೬೫.೬೮, ಶೇಕಡ ೬೯.೧೬, ಶೇಕಡ ೬೨.೨ ಮತ್ತು ಶೇಕಡ ೬೩.೩೬ರಷ್ಟು ಮತದಾನವಾಗಿದೆ.