ಇಷ್ಟೆಲ್ಲ ಕೊಡಿ… ಇಲ್ಲಾದರೆ ನಡಿ

Advertisement

ಮೊದಲಿನಿಂದಲೂ ಅವರಿಬ್ಬರನ್ನೂ ಪಲ್ಟಿರಾಮಣ್ಣಗಳು ಎಂದು ಕರೆಯುತ್ತಿದ್ದ ತಿಗಡೇಸಿ ಈ ಚುನಾವಣೆಯಲ್ಲಿ ಅವರಿಬ್ಬರ ಆಟ ನೋಡಿದ ಕೂಡಲೇ ನಾನೂ ಅವರ ವಿರುದ್ಧ ಆಟವಾಡಬೇಕು. ಹಿಂದಕ್ಕೆ ನನಗೆ ಅವರಿಬ್ಬರೂ ಸೇರಿ ಭಯಂಕರ ಆಟವಾಡಿಸಿದ್ದಾರೆ. ಇದು ಸರಿಯಾದ ಸಮಯ ಎಂದು ಸಂಕಲ್ಪ ಮಾಡಿಕೊಂಡಿದ್ದ. ಡೆಲ್ಲಿಯಲ್ಲಿ ಸೋದಿಮಾಮಾ ಎಲ್ಲರನ್ನೂ ಮನೆಗೆ ಕರೆಯಿಸಿ ಬೆಲ್ಲದ ಚಹ ಕುಡಿಸಿ ನೋಡ್ರಿ ಜಿಗರಿದೋಸ್ತ್‌ಗಳೇ ನೀವೆಲ್ಲ ನನ್ನ ಜತೆ ಇರಿ, ನಿಮಗೆ ಏನು ಬೇಕಾದ್ದು ಕೊಡುತ್ತೇನೆ ಎಂದು ಹೇಳಿದಾಗ ಆಂಧ್ರದ ಸಿಂಗಲ್‌ಪಲ್ಟಿ ಮೂನ್‌ಬಾಬಣ್ಣ, ಬಿಹಾರದ ಕೋತೀಸ್ ಅಲಿಯಾಸ್ ಡಬಲ್‌ಪಲ್ಟಿ ರಾಮಣ್ಣ ಓಹೋ..ಓಹೋ ಎಂದು ಗೋಣುಹಾಕಿ ಖುಷಿ ಹಂಚಿಕೊಂಡಿದ್ದರು. ನಿಮ್ಮ ಜತೆ ಬಂದರೆ ನಮಗೇನು ಕೊಡಬೇಕು ಎಂದು ಎಲ್ಲರ ಎದುರು ಹೇಳಲು ಸಂಕೋಚ ಮಾಡಿಕೊಂಡಿದ್ದರು. ಇದೇ ಸಮಯ ಎಂದು ತಿಗಡೇಸಿ ಸೀದಾ ಮೂನ್‌ಬಾಬಣ್ಣನ ಮನೆಗೆ ಹೋದ. ಏನಪಾ ಇದು ಹಿಂಗಾತು ಎಂದು ಅದು ಇದು ಮಾತಾಡುತ್ತ… ನಿನ್ನೆ ನೀನು ಮಾಮೋರ ಮನೆಯಿಂದ ಬಂದಮೇಲೆ.. ಹಿತ್ತಿಲ ಬಾಗಿಲಿನಿಂದ ಬಂದ ದೊಡ್‌ಪಲ್ಟಿ ಕೊತೀಸ್ಯನು ಸೋದಿ ಮಾಮನ ಮುಂದೆ ಕುಳಿತು.. ನೋಡಿ ಮಾಮೋರೆ… ಆ ಮೂನ್‌ಬಾಬು ಎಲ್ಲ ರೀತಿಯಿಂದ ಅನುಕೂಲಸ್ಥನಿದ್ದಾನೆ. ಆತನಿಗೇನು ಮುಂದೆ ಕೊಡಬಹುದು. ಸದ್ಯ ನಮಗೆ ಡೆಪ್ಯುಟಿ ಬೇಕು… ನಮ್ಮೂರಿನ ಕರಿಬಸ್ಸಯ್ಯನಿಗೊಂದು ಅಂಗಡಿ ಹಾಕಿಕೊಡಬೇಕು. ಶೇಷಮ್ಮನ ಹೋಟಲನ್ನು ಮೇಲ್ದರ್ಜೆಗೆ ಏರಿಸಬೇಕು. ನಮ್ಮ ಊರಿನ ಸಜ್ಜಿ ಹೊಲದ ದುರುಗಮ್ಮನ ಗುಡಿಗೆ ಗೋಪುರ ಕಟ್ಟಿಸಿಕೊಡಬೇಕು. ಬಲಯನುಮಪ್ಪನ ಗುಡಿಯ ಸುತ್ತಲೂ ಕಂಪೌಂಡ್ ಕಟ್ಟಿಸಿಕೊಡಬೇಕು. ಮತ್ತು ಲೊಂಡೆನುಮನನ್ನು ಸರಪಂಚರ ಹೆಡ್‌ನನ್ನಾಗಿ ನೇಮಕ ಮಾಡಬೇಕು ಹಾಗಾದರೆ ಮಾತ್ರ ನಾವು ನಿಮ್ಮ ಜತೆ ಬರುತ್ತೇವೆ ಎಂದು ಸೋದಿಮಾಮನ ಕಿವಿಯಲ್ಲಿ ಹೇಳಿದ್ದು ನಾನು ಕೇಳಿಸಿಕೊಂಡೆ. ಮೊದಲೇ ನೀನು ಒಂಥರಾ ಮನಿಷಾ… ಎರಡೆರಡು ಸಲ ವಿಚಾರಮಾಡು… ನಾನೇನು ನಿನಗೆ ಅವರತ್ರ ಬಂದುಬಿಡು ಎಂದು ಕರೆಯಲಾರೆ… ನಿನ್ನ ಒಳ್ಳೆಯದಕ್ಕೆ ಹೇಳುತ್ತೇನೆ ಇಷ್ಟರ ಮೇಲೆ ನಿಮ್ಮ ಮರ್ಜಿ ಎಂದು ಅಲ್ಲಿಂದ ಹೊರಟ ತಿಗಡೇಸಿ ಸೀದಾ ಕೊತೀಸ್ ಕುಮಾರ ಮನೆಗೆ ಬಂದು ಏನಣ್ಣಾ ಹೊಡೆದೆಲ್ಲ ಹನ್ನೆರಡು… ಇರಲಿ ಈಗ ನನ್ನ ಹತ್ತಿರ ಸಮಯವಿಲ್ಲ. ಅಲ್ಲಿ ಮೂನ್‌ಬಾಬು ಸೋದಿಮಾಮನ ಮುಂದೆ ಏನೇನು ಹೇಳಿದ್ದಾನೆ ಗೊತ್ತ? ಅನ್ನುತ್ತ ಎಲ್ಲವನ್ನೂ ಉಲ್ಟಾಪಲ್ಟಾ ಹೇಳಿದ. ಒಕೆ ಎಂದು ಹೇಳಿದ ಕೋತಿಸ್ ಆತನನ್ನು ಹೊರಹಾಕಿ ಮೊಬೈಲ್ ತಿರುಗಿಸಿ ಮೂನ್‌ಬಾಬು ಇಂವ ಬಂದಿದ್ದ ಇಂಗಿಂಗೆ ಹೇಳಿದ ಅಂತ ಹೇಳಿದ. ಹೌದಣ್ಣ ಇಲ್ಲೂ ಬಂದಿದ್ದ ಹಂಗಂಗೆ ಹೇಳಿದ ಎಂದು ಮೂನ್‌ಬಾಬು ಹೇಳಿದ. ತಿಗಡೇಸಿ ಮಾತ್ರ.. ನೋಡುತಿರಿ ಇನ್ನೂ ಸ್ವಲ್ಪದಿನ ಅಂದು ಅದ್ಯಾರಿಗೋ ಹೇಳುತ್ತಿದ್ದ.