ನಟಿ ಹೇಮಾಗೆ ೧೪ ದಿನ ನ್ಯಾಯಾಂಗ ಬಂಧನ

Advertisement

ಬೆಂಗಳೂರು: ನಗರದ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಜಿ.ಆರ್.ಫಾರ್ಮ್ಹೌಸ್‌ನಲ್ಲಿ ನಡೆದಿದ್ದ ರೇವ್‌ಪಾರ್ಟಿಯಲ್ಲಿ ಡ್ರಗ್ಸ್ ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗು ನಟಿ ಹೇಮಾ ಅವರನ್ನು ಮತ್ತೆ ೧೪ ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆನೇಕಲ್ ನ್ಯಾಯಾಲಯ ಆದೇಶ ಹೊರಡಿಸಿದೆ.
ಮೇ ೨೦ ರಂದು ನಡೆದಿದ್ದ ರೇವ್‌ಪಾರ್ಟಿಯಲ್ಲಿ ನಟಿ ಹೇಮಾ ಸೇರಿದಂತೆ ೮೬ ಜನರು ಡ್ರಗ್ಸ್ ಸೇವನೆ ಮಾಡಿರುವುದು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಮೂರು ನೋಟಿಸ್ ನೀಡಿದ ಬಳಿಕ ಹೇಮಾ ಜೂನ್ ೩ ರಂದು ವಿಚಾರಣೆಗೆ ಬೆಂಗಳೂರಿಗೆ ಹಾಜರಾಗಿದ್ದ ವೇಳೆ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದರು. ಜೂ. ೫ರಂದು ಜಾಮೀನು ಕೋರಿ ನಟಿ ಹೇಮಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು. ೨೪ ಗಂಟೆಗಳ ಕಾಲ ವಿಚಾರಣೆಗೆ ಸಿಸಿಬಿ ಕಸ್ಟಡಿಗೆ ಹೇಮಾ ಅವರನ್ನು ನೀಡಲಾಗಿತ್ತು. ಗುರುವಾರ ಸಂಜೆ ೫ ಗಂಟೆಗೆ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಸಿಸಿಬಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರು ಜೂ. ೧೩ ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.
ನ್ಯಾಯಾಲಯದಲ್ಲಿ ಕಣ್ಣೀರು:
ನಟಿ ಹೇಮಾ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುತ್ತಿದ್ದಂತೆ ನ್ಯಾಯಾಲಯ ಆವರಣದಲ್ಲಿ ಕಣ್ಣೀರು ಹಾಕಿದರು. ನಾನು ಯಾವುದೇ ತಪ್ಪು ಮಾಡಿಲ್ಲ. ವಿನಾಕಾರಣ ನನಗೆ ಶಿಕ್ಷೆ ನೀಡಲಾಗುತ್ತಿದೆ. ಪೊಲೀಸರು ಮಧ್ಯರಾತ್ರಿ ಕರೆದುಕೊಂಡು ಹೋಗಿ ಸಹಿ ಹಾಕಿಸಿಕೊಂಡಿದ್ದಾರೆ. ಪಾರ್ಟಿಯಲ್ಲಿ ಪಾಲ್ಗೊಂಡಿದ್ದೇನೆ. ಆದರೆ, ಯಾವುದೇ ಡ್ರಗ್ಸ್ ತೆಗೆದುಕೊಂಡಿಲ್ಲ ಎಂದು ಅಳಲು ತೋಡಿಕೊಂಡರು.