ಆಲಮಟ್ಟಿಗೆ ಒಳಹರಿವು ಆರಂಭ

Advertisement

ಆಲಮಟ್ಟಿ: ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಆರಂಭಗೊಂಡಿದ್ದು, ಈ ವರ್ಷದ ಮೊದಲ ಒಳಹರಿವು ಶುಕ್ರವಾರ ದಾಖಲಾಗಿದೆ. ೧,೭೬೮ ಕ್ಯೂಸೆಕ್ ನೀರು ಹರಿದು ಬಂದಿದೆ.
ಕಳೆದ ವರ್ಷ ಜೂನ್ ಕಳೆದರೂ ಒಳಹರಿವು ಇರಲಿಲ್ಲ. ಆದರೆ ಈ ವರ್ಷ ಜೂನ್ ಮೊದಲ ವಾರವೇ ಒಳಹರಿವು ಆರಂಭವಾಗಿರುವುದು ಕಾರಣ ಕೃಷ್ಣಾ ನದಿ ಪಾತ್ರದ ಜನರಿಗೆ ಸಂತಸ ತಂದಿದೆ. ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಸುರಿದ ಮಳೆಯಿಂದ ಈ ಒಳಹರಿವು ಬಂದಿದ್ದು, ಇನ್ನೂ ಮಹಾರಾಷ್ಟ್ರದಿಂದ ಬಿಟ್ಟ ನೀರು ಬಂದಿಲ್ಲ.
ಕಳೆದ ವರ್ಷ ಮಳೆಯ ಅಭಾವ, ನೀರಿನ ಬರ ಅನುಭವಿಸದ ರೈತರಿಗೆ ಈ ಬಾರಿ ಅಣೆಕಟ್ಟಿಗೆ ನೀರು ಬಂದ ಕಾರಣ ನೆಮ್ಮದಿಯ ನಿಟ್ಟುಸಿರು ಬಿಟ್ಟಂತಾಗಿದೆ. ಜಲಾಶಯ ಶೀಘ್ರ ಭರ್ತಿಯತ್ತ ಸಾಗಲಿ ಎಂಬುದು ರೈತರ ಅಪೇಕ್ಷೆಯಾಗಿದೆ.
ನೀರಿನ ಮಟ್ಟ: ೫೧೯.೬೦ ಮೀ ಗರಿಷ್ಠ ಎತ್ತರದ ಆಲಮಟ್ಟಿ ಜಲಾಶಯದಲ್ಲಿ ಶುಕ್ರವಾರ ೫೦೭.೭೯ ಮೀ.ವರೆಗೆ ನೀರು ಇತ್ತು. ೧೨೩.೦೮೧ ಟಿಎಂಸಿ ಅಡಿ ಗರಿಷ್ಠ ಸಂಗ್ರಹದ ಜಲಾಶಯದಲ್ಲಿ ೨೦.೬ ಟಿಎಂಸಿ ನೀರಿದೆ. ಅದರಲ್ಲಿ ಬಳಕೆ ಯೋಗ್ಯ ೩ ಟಿಎಂಸಿ ಅಡಿ ನೀರಿದೆ.