ಮಳೆಗಾಲದ ಪೂರ್ವಸಿದ್ಧತೆ ಮಾಡಿದ್ದೀರಾ..?

Advertisement

ದೇಶದ ವ್ಯವಸ್ಥೆಯೇ ಹಾಗೆ, ಕಾಲಕಾಲಕ್ಕೆ ಬರುವ ಸಮಸ್ಯೆಗಳನ್ನು ಎದುರಿಸಲು ಮುಂಜಾಗ್ರತೆ ವಹಿಸಿ ಪೂರ್ವಸಿದ್ಧತೆ ಮಾಡಿಕೊಳ್ಳುವ ಜವಾಬ್ಧಾರಿ ಜನಪ್ರತಿನಿಧಿಗಳಿಗೂ ಇಲ್ಲ, ಅಧಿಕಾರಿಗಳಿಗಂತೂ ಮೊದಲೇ ಇಲ್ಲ. ಮಳೆಗಾಲ ಆರಂಭವಾಗುತ್ತದೆ, ರೈತರು ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳುತ್ತಾರೆ, ಕೃಷಿ ಚಟುವಟಿಕೆಗಳಿಗೆ ಅಗತ್ಯ ಇರುವ ಪೂರ್ವಸಿದ್ಧತೆ ಮಾಡಿಕೊಳ್ಳಬೇಕೆಂಬ ಕನಿಷ್ಠ ಪ್ರಜ್ಞೆ ಸರ್ಕಾರಕ್ಕೆ, ಅಧಿಕಾರಿಗಳಿಗೆ ಇರುವುದಿಲ್ಲ. ಅಗತ್ಯಕ್ಕೆ ತಕ್ಕಂತೆ ಬಿತ್ತನೆ ಬೀಜ, ರಸಗೊಬ್ಬರ ಶೇಖರಣೆ, ಕಳಪೆ ಬಿತ್ತನೆ ಬೀಜ, ಕಳಪೆ ಗೊಬ್ಬರ ಮಾರಾಟ ಮಾಡುವವರ ಮೇಲೆ ನಿಗಾ ಇಡುವುದು, ಸಹಕಾರ ಸಂಘಗಳ ಮೂಲಕ ರೈತರಿಗೆ ಅಗತ್ಯ ಇರುವ ಕೃಷಿ ಉಪಕರಣಗಳನ್ನು ಮಾರಾಟ ಮಾಡುವುದು ಮತ್ತಿತರ ವ್ಯವಸ್ಥೆ ಮಾಡಿಕೊಳ್ಳಬೇಕಾದುದು ಕೃಷಿ, ತೋಟಗಾರಿಕೆ ಇಲಾಖೆಯ ಜವಾಬ್ಧಾರಿಯಾಗಿದೆ. ಜೊತೆಗೆ ಎಲ್ಲೆಲ್ಲಿ ಏತ ನೀರಾವರಿ ಯೋಜನೆಗಳಿವೆಯೋ ಅಲ್ಲಿ ನದಿಯಿಂದ ನೀರೆತ್ತುವ ಸಮಸ್ಯೆಗಳೇನಿದ್ದರೂ ಅವುಗಳನ್ನು ನಿವಾರಿಸಿಕೊಂಡು ಸಿದ್ಧತೆ ಮಾಡಿಕೊಳ್ಳುವುದು ಸಣ್ಣ ನೀರಾವರಿ ಇಲಾಖೆಯ ಹೊಣೆಗಾರಿಕೆಯಲ್ಲವೆ? ಮಳೆಗಾಲ ಆರಂಭವಾಯಿತು, ಮಳೆನೀರು ಸರಾಗವಾಗಿ ಹರಿದುಹೋಗುವಂತೆ ನಗರ ಪಟ್ಟಣಗಳಲ್ಲಿರುವ ರಾಜಕಾಲುವೆ, ತೆರೆದ ಚರಂಡಿಗಳನ್ನು ಸ್ವಚ್ಚಗೊಳಿಸುವುದು, ಸಾಂಕ್ರಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ವಹಿಸುವುದು ನಗರಸಭೆ, ಪುರಸಭೆ, ಮಹಾನಗರ ಪಾಲಿಕೆಯ ಕೆಲಸವಲ್ಲವೆ? ಆದರೆ ಮುಚ್ಚಿಹೋಗಿರುವ ಚರಂಡಿಗಳು, ಅತಿಕ್ರಮಣ ಮಾಡಿಕೊಂಡಿರುವ ರಾಜಕಾಲುವೆಗಳಿಂದಾಗಿ ಮಳೆ ನೀರೆಲ್ಲ ರಸ್ತೆಯಲ್ಲೇ ಹರಿಯಬೇಕಾದ ಸ್ಥಿತಿ ಎಲ್ಲ ನಗರ-ಪಟ್ಟಣಗಳಲ್ಲಿ ಕಂಡುಬರುತ್ತದೆ. ಸ್ಥಳೀಯ ಜನಪ್ರತಿನಿಧಿಗಳು ಕೂಡ ಈ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ, ಮಳೆಯಿಂದ ಏನಾದರೂ ಅನಾಹುತ ಆದಾಗಲೇ ಎಲ್ಲರೂ ಎಚ್ಚೆತ್ತುಕೊಳ್ಳುತ್ತಾರೆ.
ನಿರ್ಲಕ್ಷ್ಯದಿಂದ ತುಂಗಾ ನೀರು ಪೋಲು
ಕಳೆದೊಂದು ವಾರದಿಂದ ತುಂಗಾ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆ ಆಗುತ್ತಿರುವುದರಿಂದ ಹಾಗೂ ತುಂಗಾ ಜಲಾಶಯದ ನೀರಿನ ಸಂಗ್ರಹ ಸಾಮರ್ಥ್ಯ ಕಡಿಮೆ ಇರುವುದರಿಂದ ೫೮೮.೨೪ ಮೀಟರ್ ಗರಿಷ್ಠ ಮಟ್ಟವನ್ನು ಈಗಾಗಲೇ ತಲುಪಿದೆ. ಡ್ಯಾಂನಿಂದ ಯಾವ ಸಂದರ್ಭದಲ್ಲಾದರೂ ನದಿಗೆ ನೀರು ಬಿಡುಗಡೆ ಮಾಡಬಹುದು. ಈಗಾಗಲೇ ಶಿವಮೊಗ್ಗ ಜಿಲ್ಲಾಡಳಿತ ಕೂಡ ಈ ಬಗ್ಗೆ ನದಿತೀರದ ಗ್ರಾಮಗಳಿಗೆ ಎಚ್ಚರಿಕೆಯನ್ನೂ ನೀಡಿದೆ. ತುಂಗಾ ನದಿ ಮತ್ತು ತುಂಗಭದ್ರಾ ನದಿ ದಂಡೆಗುಂಟ ಹಲವು ಏತ ನೀರಾವರಿ ಯೋಜನೆಗಳು ಕಾರ್ಯಗತವಾಗಿವೆ. ಶಿವಮೊಗ್ಗ ತಾಲೂಕಿನಲ್ಲಿರುವ ತುಂಗಾ ಏತ ನೀರಾವರಿ ಯೋಜನೆ, ಕಾಮಗಾರಿ ಪ್ರಗತಿಯಲ್ಲಿರುವ ಹೊನ್ನಾಳಿ ತಾಲೂಕಿನಲ್ಲಿ ತುಂಗಭದ್ರಾ ನದಿಯ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆ, ದಾವಣಗೆರೆ ಜಿಲ್ಲೆಯ ೨೨ ಕೆರೆ ಏತ ನೀರಾವರಿ ಯೋಜನೆ, ಚಿತ್ರದುರ್ಗ ತಾಲೂಕಿನ ಭರಮಸಾಗರ ಕೆರೆ ಹಾಗೂ ಇತರ ಕೆರೆ ತುಂಬಿಸುವ ಏತ ನೀರಾವರಿ ಯೋಜನೆ, ಹರಪನಹಳ್ಳಿ, ಹಡಗಲಿ ತಾಲೂಕಿನಲ್ಲಿರುವ ಏತ ನೀರಾವರಿ ಯೋಜನೆಗಳ ಕಾರ್ಯನಿರ್ವಹಣೆ ಯಾವುದೇ ಸಮಸ್ಯೆ ಇಲ್ಲದಂತೆ ಸಮರ್ಪಕವಾಗಿ ಇದ್ದಲ್ಲಿ ಮಾತ್ರ ನದಿಗೆ ಹರಿಯುವ ನೀರನ್ನು ಕೆರೆಗಳಿಗೆ ಭರ್ತಿ ಮಾಡುವ ಕೆಲಸ ಸುಲಭವಾಗುತ್ತದೆ. ನದಿ ತುಂಬಿ ದೊಡ್ಡ ಪ್ರಮಾಣದಲ್ಲಿ ನೀರು ಹರಿದು ಸಮುದ್ರ ಸೇರುವ ಮುನ್ನವೇ ಏತ ನೀರಾವರಿ ಪಂಪ್‌ಸೆಟ್‌ಗಳನ್ನು ಸುಸ್ಥಿತಿಯಲ್ಲಿಟ್ಟುಕೊಂಡು ನೀರು ಪಂಪ್ ಮಾಡಿದರೆ ಮಾತ್ರ ಕೆರೆಗಳಿಗೆ ನೀರು ಹರಿಸಲು ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ತಕ್ಷಣ ಆಯಾ ಭಾಗದ ಜನಪ್ರತಿನಿಧಿಗಳು, ರೈತ ಮುಖಂಡರು, ಗ್ರಾಮಸ್ಥರು ನಿದ್ದೆಯಲ್ಲಿರುವ ನೀರಾವರಿ ಇಲಾಖೆ ಅಧಿಕಾರಿಗಳನ್ನು ಎಚ್ಚರಿಸಿ ತಮ್ಮ ತಮ್ಮ ಹಳ್ಳಿಗಳ ಕೆರೆಗಳನ್ನು ತುಂಬಿಸಿಕೊಳ್ಳುವಲ್ಲಿ ಮುತವರ್ಜಿ ವಹಿಸಬೇಕು. ಈಗ ಮಳೆ ಬರುತ್ತದೆ ನೀರಿನ ಅಗತ್ಯ ಇಲ್ಲ ಎಂದು ಕೈಚೆಲ್ಲಿ ಕುಳಿತರೆ ಬೇಸಿಗೆಯಲ್ಲಿ ಅನುಭವಿಸುವ ನೀರಿನ ಸಮಸ್ಯೆ ಹೇಗಿರುತ್ತದೆ ಎಂಬುದು ಪ್ರಸಕ್ತ ವರ್ಷದಲ್ಲಿ ಅನುಭವಕ್ಕೆ ಬಂದಿದೆ. ಹೀಗಾಗಿ ರೈತರು ಮುಖಂಡರೂ ಕೂಡ ಈ ವಿಷಯದಲ್ಲಿ ಸರ್ಕಾರವನ್ನು ಬಡಿದೆಬ್ಬಿಸಬೇಕಿದೆ.
ಭದ್ರಾ ಮೇಲ್ದಂಡೆ’ಗೇಕೆ ತಾತ್ಸಾರ ಮಧ್ಯ ಕರ್ನಾಟಕದ ಚಿತ್ರದುರ್ಗ, ಚಿಕ್ಕಮಗಳೂರು, ದಾವಣಗೆರೆ ಹಾಗೂ ತುಮಕೂರು ಜಿಲ್ಲೆಗಳ ಬರಪೀಡಿತ ಪ್ರದೇಶಗಳಿಗೆ ನೀರಾವರಿ ಮತ್ತು ಕುಡಿಯುವ ನೀರಿನ ಯೋಜನೆಯಾಗಿರುವ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಯಂತೂ ಕೇಳುವವರೇ ಇಲ್ಲವಾಗಿದೆ. ರಾಜ್ಯ ಸರ್ಕಾರ ಕಾವೇರಿ ಜಲಾನಯನ ಯೋಜನೆಗಳಿಗೆ ನೀಡುವ ಆದ್ಯತೆಯನ್ನು ಮಧ್ಯ ಕರ್ನಾಟಕದ ಭದ್ರಾ ಯೋಜನೆಗಾಗಲಿ, ಉತ್ತರ ಕರ್ನಾಟಕದ ಕೃಷ್ಣಾ ಯೋಜನೆಗಾಗಲಿ ನೀಡುತ್ತಿಲ್ಲ ಎಂಬುದು ಜಗಜ್ಜಾಹೀರಾದ ಮಾತು. ಈ ಭಾಗದ ಶಾಸಕರು, ಸಂಸದರೂ ಕೂಡ ಇದಕ್ಕೆ ಜವಾಬ್ಧಾರರು. ಸದನದ ಒಳಗಾಗಲಿ, ಹೊರಗಾಗಲಿ ತಮ್ಮ ಭಾಗಕ್ಕಾಗುವ ಅನ್ಯಾಯ, ಮಲತಾಯಿ ಧೋರಣೆ ಬಗ್ಗೆ ಮಾತೇ ಆಡದ ಜನಪ್ರತಿನಿಧಿಗಳಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? ಮಾಜಿ ಮುಖ್ಯಮಂತ್ರಿ ದಿ.ಎಸ್.ನಿಜಲಿಂಗಪ್ಪನವರ ಕಾಲದಿಂದಲೂ ತುಂಗ-ಭದ್ರಾ ನದಿ ನೀರಾವರಿ ಯೋಜನೆಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಭದ್ರಾ ಮೇಲ್ದಂಡೆ ಯೋಜನೆಗೆ ೨೯.೯೦ ಟಿಎಂಸಿ ನೀರನ್ನು ಹಂಚಿಕೆ ಮಾಡಲಾಗಿದೆ. ಈ ಯೋಜನೆಯ ಪ್ರಕಾರ ೧೭.೪೦ ಟಿಎಂಸಿ ನೀರನ್ನು ತುಂಗಾ ಜಲಾಶಯದಿಂದ ಭದ್ರಾ ಜಲಾಶಯಕ್ಕೆ ಲಿಫ್ಟ್ ಮಾಡಬೇಕು. ನಂತರ ೨೯.೯೦ ಟಿಎಂಸಿ ನೀರನ್ನು ಭದ್ರಾ ಜಲಾಶಯದಿಂದ ಎರಡು ಹಂತದಲ್ಲಿ ಮೇಲ್ದಂಡೆ ಯೋಜನೆ ಪ್ರದೇಶಗಳಿಗೆ ಹರಿಸಬೇಕು. ಆದರೆ ತುಂಗಾ ಜಲಾಶಯದಿಂದ ಭದ್ರಾಗೆ ೧೭.೪೦ ಟಿಎಂಸಿ ನೀರು ಲಿಫ್ಟ್ ಮಾಡುವ ಕಾಮಗಾರಿ ಇನ್ನೂ ಪೂರ್ಣಗೊಂಡಿರುವುದಿಲ್ಲ. ಮಳೆಗಾಲದ ಸಂದರ್ಭದಲ್ಲಿ ನೂರಾರು ಟಿಎಂಸಿ ತುಂಗಾ ನೀರು ವ್ಯರ್ಥವಾಗಿ ಸಮುದ್ರ ಸೇರುತ್ತದೆ. ಭದ್ರಾ ಮೇಲ್ದಂಡೆ ಯೋಜನೆಗೆ ಬೇಕಿರುವ ಎಲ್ಲ ೨೯.೯೦ ಟಿಎಂಸಿ ನೀರನ್ನೂ ತುಂಗಾ ಜಲಾಶಯದಿಂದಲೇ ಲಿಫ್ಟ್ ಮಾಡಿದರೂ ಜಲಾಶಯದ ನೀರು ಕಡಿಮೆಯಾಗುವುದಿಲ್ಲ. ಯೋಜನೆಯ ಮೊದಲ ಹಂತದ ಕಾಮಗಾರಿಯಾಗಿರುವ ತುಂಗಾ ಡ್ಯಾಂನಿಂದ ಭದ್ರಾ ಡ್ಯಾಂಗೆ ನೀರು ಲಿಫ್ಟ್ ಮಾಡುವ ಕೆಲಸವೇ ಇನ್ನೂ ಪೂರ್ಣಗೊಳ್ಳದಿರುವುದು ಭದ್ರಾ ಅಚ್ಚುಕಟ್ಟುದಾರರ ಹಕ್ಕಿನ ನೀರನ್ನೇ ಮೇಲ್ದಂಡೆ ಯೋಜನೆಯ ಫಲಾನುಭವಿಗಳಿಗೆ ಹರಿಸಬೇಕಾದ ಸ್ಥಿತಿ ಇದೆ. ಅಲ್ಲದೆ ಭದ್ರಾ ಅಚ್ಚುಕಟ್ಟುದಾರರ ನಡುವೆ ನೀರಿನ ಹಂಚಿಕೆ ಬಗ್ಗೆ ಮೊದಲಿನಿಂದಲೂ ದಾಯಾದಿ ಕಲಹ ಇದ್ದೇ ಇದೆ. ಮುಖ್ಯ ಕಾಲುವೆಗಳಗುಂಟ ಅಕ್ರಮ ಪಂಪ್‌ಸೆಟ್ ಹಾವಳಿಯೂ ಮಿತಿಮೀರಿದೆ. ಅವುಗಳನ್ನು ತೆರವುಗೊಳಿಸುವ ವಿಚಾರದಲ್ಲಿ ಮಾತ್ರ ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ. ಈ ಕಾರಣದಿಂದ ಅಚ್ಚುಕಟ್ಟು ಭಾಗದ ಕೊನೆಯ ರೈತರ ಜಮೀನುಗಳಿಗೆ ನೀರು ಹರಿಯುತ್ತಿಲ್ಲ. ಇದಕ್ಕಾಗಿ ರೈತರ ನಡುವೆ ಪರಸ್ಪರ ವಾಗ್ವಾದ ನಡೆಯುತ್ತಲೇ ಇದೆ. ಭದ್ರಾ ಜಲಾಶಯಮಧ್ಯ ಕರ್ನಾಟಕ’ದ ಜೀವನಾಡಿ. ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಗಳ ೧,೦೭,೩೦೪ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಒದಗಿಸುವುದಲ್ಲದೆ, ಐದಾರು ಜಿಲ್ಲೆಗಳ ಜನರಿಗೆ ಕುಡಿಯುವ ನೀರು ಪೂರೈಸುತ್ತಿದೆ. ಭದ್ರಾ ನದಿ ದಡದಲ್ಲಿರುವ ಕೈಗಾರಿಕೆಗಳಿಗೆ ನೀರು ಒದಗಿಸುವ ಜೊತೆಗೆ ೩೯.೨ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುತ್ತದೆ. ಹೀಗೆ ವಿವಿದೋದ್ದೇಶ ಹೊಂದಿ ನಿರ್ಮಾಣವಾಗಿರುವ ಈ ಜಲಾಶಯವನ್ನು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಮತ್ತು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕು ಗಡಿಯಲ್ಲಿ ನಿರ್ಮಿಸಲಾಗಿದೆ. ೧೮೬ ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಭದ್ರಾ ಜಲಾಶಯ ಭರ್ತಿ ಆಗಿ ಅತ್ಯಂತ ಲೆಕ್ಕಾಚಾರದಿಂದ ನೀರಿನ ಬಳಕೆ ಮಾಡಿದಲ್ಲಿ ಮಾತ್ರ ಅಚ್ಚುಕಟ್ಟು ಪ್ರದೇಶದ ಜಮೀನುಗಳಿಗೆ ವರ್ಷಕ್ಕೆ ಎರಡು ಬೆಳೆ ಬೆಳೆಯಲು ನೀರು ಪೂರೈಸಬಹುದು, ಜನರ ಕುಡಿಯುವ ನೀರಿನ ದಾಹ ಇಂಗಿಸಬಹುದು. ಆದರೆ ಲೆಕ್ಕಾಚಾರ ತಪ್ಪಿದರೆ ಎಲ್ಲವೂ ಅಲ್ಲೋಲ ಕಲ್ಲೋಲ, ರೈತರಿಗೆ ಆರ್ಥಿಕ ಸಂಕಷ್ಟ, ಕುಡಿಯುವ ನೀರಿಗೆ ತತ್ವಾರ ಗ್ಯಾರಂಟಿ.
ಸಂಸದರ ಪಾತ್ರ ಮುಖ್ಯ
ಭದ್ರಾ ಮೇಲ್ದಂಡೆ ಯೋಜನೆಯನ್ನು ಈ ಹಿಂದೆ ಕೇಂದ್ರ ಸರ್ಕಾರ `ರಾಷ್ಟ್ರೀಯ ಯೋಜನೆ’ ಎಂದು ಘೋಷಣೆ ಮಾಡುವುದಾಗಿ ೫೩೦೦ ಕೋಟಿ ರೂ. ಬಿಡುಗಡೆ ಮಾಡುವುದಾಗಿ ತಿಳಿಸಿತ್ತು. ಆದರೆ ಅದು ಘೋಷಣೆಯಾಗಿಯೇ ಉಳಿದಿದೆ ಹೊರತು ಈವರೆಗೂ ಅನುಷ್ಠಾನಕ್ಕೆ ಬಂದಿಲ್ಲ. ಈ ಬಾರಿ ರಾಜ್ಯದ ಮೂವರು ಮಾಜಿ ಮುಖ್ಯಮಂತ್ರಿಗಳು, ಯೋಜನೆಯ ಕ್ಷೇತ್ರವನ್ನು ಪ್ರತಿನಿಧಿಸುವ ಮಾಜಿ ಉಪಮುಖ್ಯಮಂತ್ರಿ ಗೋವಿಂದ್ ಕಾರಜೋಳ ಸಂಸತ್ ಪ್ರವೇಶಿಸಿದ್ದಾರೆ. ರಾಜ್ಯದ ಎಲ್ಲ ಸಂಸದರನ್ನು ಒಟ್ಟುಗೂಡಿಸಿಕೊಂಡು ಕೇಂದ್ರ ಸರ್ಕಾರದಿಂದ ಭದ್ರಾ ಮೇಲ್ದಂಡೆ ಯೋಜನೆಗೆ ೫೩೦೦ ಕೋಟಿ ರೂ. ಬಿಡುಗಡೆ ಮಾಡಿಸಿಕೊಂಡು ಪ್ರಥಮ ಆದ್ಯತೆಯಾಗಿ ತುಂಗಾ ಜಲಾಶಯದಿಂದ ಭದ್ರಾ ಜಲಾಶಯಕ್ಕೆ ನೀರು ಲಿಫ್ಟ್ ಮಾಡುವ ಕಾಮಗಾರಿ ಪೂರ್ಣಗೊಳಿಸಬೇಕು. ಇದರಿಂದ ಭದ್ರಾ ಮೇಲ್ದಂಡೆ ಯೋಜನೆ ವ್ಯಾಪ್ತಿಯ ಕೆರೆಗಳಿಗೆ ಮುಂದಿನ ಮಳೆಗಾಲದಲ್ಲಾದರೂ ನೀರು ಹರಿಯುವುದರಲ್ಲಿ ಅನುಮಾನವಿಲ್ಲ. ಒಂದು ವರ್ಷದ ಟೈಬಾಂಡ್ ಇಟ್ಟುಕೊಂಡು ಈ ಕಾಮಗಾರಿ ಮುಗಿಸುವ ಮೂಲಕ ಮಧ್ಯ ಕರ್ನಾಟಕದ ಜನತೆಗೆ ನೀಡಿರುವ ಭರವಸೆಯನ್ನು ನೂತನ ಸಂಸದ ಗೋವಿಂದ ಕಾರಜೋಳ ಈಡೇರಿಸಲು ಮುಂದಾಗಬೇಕು. ರಾಜ್ಯದ ಜಲಸಂಪನ್ಮೂಲ ಸಚಿವರಾಗಿ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮತ್ತು ಗೋವಿಂದ ಕಾರಜೋಳ ಇಬ್ಬರೂ ಕೆಲಸ ಮಾಡಿದ್ದು, ಅವರಿಗೆ ಭದ್ರಾ ಮೇಲ್ದಂಡೆ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ ಇರುವುದರಿಂದ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಅನುದಾನ ತಂದು ಕಾಮಗಾರಿ ಚುರುಕುಗೊಳಿಸುವ ಜವಾಬ್ಧಾರಿ ಅವರ ಮೇಲಿದೆ.