ಮೂವತ್ತು ದಿನಗಳಲ್ಲಿ ಹಿಂದಿ ಕಲಿಯಿರಿ

Advertisement

ನಮ್ಮಲ್ಲಿ ಯಾರಿಗೆ ಹಿಂದಿ ಬರುವುದಿಲ್ಲವೋ ಅವರು ಮೂವತ್ತು ದಿನಗಳಲ್ಲಿ ಹಿಂದಿ ಕಲಿಯಿರಿ ಎಂಬ ಸೋದಿಮಾಮಾನ ಖಡಕ್ ಫರ್ಮಾನು ನೋಡಿ ಧಡಕ್ ಎನಿಸಿಕೊಂಡ ಮಾಬಾ ರಕಂದ್ಲಾಜೆ, ವಿ.ಕೋಮಣ್ಣ ಸೇರಿದಂತೆ ಹಲವಾರು ಕೇಂದ್ರ ಸಚಿವರು, ಸಂಸದರು ಹಿಂದಿ ತರಬೇತಿ ಕ್ಲಾಸುಗಳಿಗಾಗಿ ಹುಡುಕಾಡಿದರು. ಓಣಿ, ಓಣಿಗಳಲ್ಲಿ ಬೋರ್ಡುಗಳನ್ನು ಚೆಕ್ ಮಾಡಿದರು. ವಾಟ್ಸಾಪ್ ಗ್ರೂಪ್‌ಗಳಲ್ಲಿ ಯಾರಾದರೂ ಹಿಂದಿ ಕಲಿಸುವವರು ಇದ್ದಾರಾ? ಇದ್ದರೆ ಈ ವಿಳಾಸಕ್ಕೆ ತಿಳಿಸಿ ಎಂದು ಸ್ಟೇಟಸ್ ಹಾಕಿದರು. ಫೇಸ್ಬುಕ್‌ನಲ್ಲಿಯೂ ಸಹ ಪೋಸ್ಟ್ ಮಾಡಿ ರಿಕ್ವೆಸ್ಟ್ ಮಾಡಿದರು. ಇವೆಲ್ಲ ಆದ ಮೇಲೆ ಹಲ್ಲುಬೀರ ಹನ್ಮಂತ ಎಂಬಾತ ಹಿಂದಿ ಕಲಿಸುತ್ತೇನೆ ಎಂದು ಬಂದ. ಮೋಬಾ ರಕಂದ್ಲಾಜೆ ತೀರ ಖುಷಿಯಾಗಿ ಮಾಮಾಜಿ..ಹಿಂದಿ ಕಲಿಸುವ ಮೇಸ್ಟ್ರು ಆಯಾ….ಆಯಾಮ್ ತೀರ ಖುಷಿ ಹೈ ಅಂದಾಗ ಸೋದಿ ಮಾಮಾ ಓಹೋ…ಆಗಲಿ ಆಗಲಿ ಅಂದರು. ಒಂದು ಶುಭಮಹೂರ್ತದಲ್ಲಿ ಹನ್ಮಂತ ಮಾಬಕ್ಕನಿಗೆ ಹಿಂದಿ ಕಲಿಸಲು ಆರಂಭಿಸಿದ. ಪೂಜೆ ಗೀಜೆ ಮಾಡಿದ ಮೇಲೆ…ಮಾಬಕ್ಕನಿಗೆ ಆವೋ…ಆವೋ ಬೈಟೋ…ಬೈಟೋ ಅಂದಾಗ ಆಕೆ ಪಿಳಿಪಿಳಿ ಕಣ್ಣು ಬಿಟ್ಟು ನೋಡುತ್ತಿದ್ದಳು. ಹಾಂ…ನಿಮಗೆ ತಿಳಿದುಕೊಳ್ಳುವ ಆಸಕ್ತಿ ಇದೆ. ಶೀಘ್ರವೇ ಕಲಿಯುತ್ತೀರಿ ಅಂದಾಗ ಮಾಬಕ್ಕ ತೀರ ಖುಷಿಯಾದಳು. ದೇಖಿಯೇ ಯಾರಾದರೂ ಬಂದಾಗ…ಆಪ್ ಕೈಸೇ ಹೈ ಎಂದು ಕೇಳಬೇಕು. ಮನೆಗೆ ಬಂದವರು ಎದ್ದು ನಿಂತರೆ ಓಕೆ ಜಾವೋ ಅನ್ನಬೇಕು…ಯಾರಾದರೂ ಜಬರಿಸಿದ ಹಾಗೆ ಮಾತನಾಡಿದರೆ…ಕ್ಯೂಂ ಹಾಲ್ ಕೈಸೆ ಹೈ ಅನ್ನಬೇಕು ಅನ್ನುವುದೂ ಸೇರಿದಂತೆ ಅನೇಕ ಪಟ್ಟುಗಳನ್ನು ಹನ್ಮಂತ ಕಲಿಸಿದ. ಮೂವತ್ತು ದಿನಗಳಾದ ಮೇಲೆ ಸೀದಾ ಸೋದಿ ಮಾಮಾ ಅವರ ಹತ್ತಿರ ಹೋಗಿ…ಮಾಮಾಜಿ..ಮಾಮಾಜಿ ಮೈ ಹಿಂದಿ ಫುಲ್ ಕಲ್ತ್ಬುಟ್ಟಿದ್ದೀನಿ…ಕೈಸಾ ಜಾವೋ ಆಪ್ ಅಂದಾಗ ಅಲ್ಲಮ್ಮ ನೀ ಏನ್ ಮಾತನಾಡುತ್ತಿದ್ದೀಯ ಅಂದಾಗ ಹಿಂದಿ ಮಾಮೂ ಹಿಂದಿ ಎಂದು ಹೆಮ್ಮೆಯಿಂದ ಹೇಳಿದಳು. ಹಯ್ಯೋ. ಎಂದು ಅವರು ಹಣೆಮೇಲೆ ಕೈ ಇಟ್ಟುಕೊಂಡಾಕ್ಷಣ…ಹಾಲ್ ಕೈಸೆ ಹೈ…ಜಾವೋ ಆಪ್ ಜಾವೋ ಅಂದಳು. ಆಯ್ತು ಬುಡವ ನಿಂಗೆ ಹೆಂಗೆ ಬೇಕೋ ಹಾಗೆ ಮಾತಾಡು ಎಂದು ಅಲ್ಲಿಂದ ನಿರ್ಗಮಿಸಿದರು ಮಾಮಾ.