ಕನ್ನಡಿಗರಿಗೆ ನ್ಯಾಯ ಒದಗಿಸುವರೇ ಎಚ್‌ಡಿಕೆ?

Advertisement

ರಾಜು ಮಳವಳ್ಳಿ
ಬೆಂಗಳೂರು: ಕೇಂದ್ರದ ಎನ್‌ಡಿಎ ಸರ್ಕಾರದಲ್ಲಿ ಸಂಪುಟ ದರ್ಜೆ ಸಚಿವರಾಗಿರುವ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ಮುಂದೆ ಹತ್ತಾರು ಸವಾಲುಗಳಿದ್ದು ಅವುಗಳ ನಿಭಾವಣೆ ಹೇಗೆಂಬುದು ಕುತೂಹಲ ಕೆರಳಿಸಿದೆ.
ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಖಾತೆಯ ಹೊಣೆಯನ್ನು ಅವರು ವಹಿಸಿಕೊಳ್ಳುತ್ತಿದ್ದಂತೆಯೇ ಕೈಗಾರಿಕಾ ವಲಯದಲ್ಲಿ ನಿರೀಕ್ಷೆಗಳು ಗರಿಗೆದರಿವೆ. ಬಹುಮುಖ್ಯವಾಗಿ ಭದ್ರಾವತಿಯ ಹೆಸರಾಂತ ವಿಶ್ವೇಶ್ವರಯ್ಯ ಉಕ್ಕು ಕಬ್ಬಿಣದ ಕಾರ್ಖಾನೆ ವಿಐಎಸ್‌ಎಲ್‌ನ ಪುನಶ್ಚೇತನದ ಆಸೆ ಚಿಗುರಿದೆ. ಸಚಿವರಾಗಿ ಮೊದಲ ದಿನ ಅಧಿಕಾರಿಗಳ ಜತೆ ನಡೆಸಿದ ಸಭೆಯಲ್ಲಿ ಎಚ್ಡಿಕೆ ಈ ವಿಷಯ ಪ್ರಸ್ತಾಪ ಮಾಡಿರುವುದು ವಿಐಎಸ್‌ಎಲ್ ಕಾರ್ಮಿಕರ ಕಣ್ಣಲ್ಲಿ ಮತ್ತೆ ಕನಸುಗಳು ಟಿಸಿಲೊಡೆಯಲಾರಂಭಿಸಿವೆ. ಇದೇ ವೇಳೆ ಕರ್ನಾಟಕಕ್ಕೆ ಇತ್ತೀಚಿನ ವರ್ಷಗಳಲ್ಲಿ ಬರಬೇಕಿದ್ದ ಟೆಸ್ಲಾ ಸೇರಿದಂತೆ ಹಲವು ಪ್ರತಿಷ್ಠಿತ ಕಂಪನಿಗಳ ಘಟಕಗಳ ಸ್ಥಾಪನೆಗೆ ಎಚ್ಡಿಕೆ ಮನಸ್ಸು ಮಾಡಬೇಕೆಂಬುದು ಕರ್ನಾಟಕದ ಕೈಗಾರಿಕ ವಲಯದ ಅಪೇಕ್ಷೆ. ಕನ್ನಡಿಗರಿಗೆ ಹೆಚ್ಚಿನ ಉದ್ಯೋಗ ಕಲ್ಪಿಸುವ ಬೃಹತ್ ಕೈಗಾರಿಕೆಗಳನ್ನು ರಾಜ್ಯಕ್ಕೆ ಕರೆತರುವ ಮತ್ತವುಗಳು ಇಲ್ಲೇ ನೆಲೆಯೂರಲು ಸಕಲ ನೆರವು ನೀಡಬೇಕಾದ ಜವಾಬ್ದಾರಿ ಎಚ್ಡಿಕೆ ಮೇಲಿದೆ.
ಸವಾಲುಗಳ ಸಾಲು..
ಇನ್ನು ರಾಜ್ಯದಲ್ಲಿ ಜಾತ್ಯತೀತ ಜನತಾದಳದ ಸಾರಥ್ಯ ವಹಿಸಿದಾಗಿನಿಂದಲೂ ಕುಮಾರಸ್ವಾಮಿ ಅವರು ಪ್ರಾದೇಶಿಕ ಅಸ್ಮಿತೆಯ ವಿಚಾರಗಳನ್ನೇ ಹೆಚ್ಚೆಚ್ಚು ಪ್ರಸ್ತಾಪ ಮಾಡುತ್ತಾ ಬಂದಿದ್ದರು. ಕನ್ನಡ ನಾಡು-ನುಡಿ-ನೆಲ-ಜಲ-ಗಡಿಯ ವಿಚಾರದಲ್ಲಿ ಎನ್‌ಡಿಎ ಸರ್ಕಾರದ ವಿರುದ್ಧ ಎಚ್ಡಿಕೆ ಗುಡುಗಿದ್ದರು. ಬಿಜೆಪಿ ಸರ್ಕಾರ ದಕ್ಷಿಣ ಭಾರತದ ರಾಜ್ಯಗಳಲ್ಲಿ ಹಿಂದಿ ಭಾಷೆಯನ್ನು ಬಲವಂತವಾಗಿ ಹೇರುವ ಮೂಲಕ ಪ್ರಾದೇಶಿಕ ಭಾಷೆ ಅದರಲ್ಲೂ ಕನ್ನಡದ ಅಸ್ಮಿತೆಗೆ ಧಕ್ಕೆ ತರುತ್ತಿದೆ ಎಂಬುದು ಎಚ್ಡಿಕೆ ಪ್ರಬಲ ವಾದವಾಗಿತ್ತು. ದೇಶಾದ್ಯಂತ ಪ್ರತಿ ವರ್ಷ ಕೇಂದ್ರದ ಸುಪರ್ದಿಯಲ್ಲಿ ನಡೆಸಲ್ಪಡುವ ಸಿಬ್ಬಂದಿ ಆಯ್ಕೆ ಪರೀಕ್ಷೆ (ಸ್ಟಾಫ್ ಸೆಲೆಕ್ಷನ್ ಎಕ್ಸಾಂ)ಗಳಲ್ಲಿ ಹಿಂದಿ ಮತ್ತು ಇಂಗ್ಲೀಷ್ ಭಾಷೆಯ ಜತೆಗೆ ಪ್ರಾದೇಶಿಕ ಭಾಷೆಗಳಲ್ಲಿ ಬರೆಯಲು ಅವಕಾಶ ನೀಡಬೇಕೆಂಬ ದೊಡ್ಡ ಆಗ್ರಹ ಎಚ್ಡಿಕೆಯವರದ್ದಾಗಿತ್ತು. ಬ್ಯಾಂಕಿಂಗ್ ಪರೀಕ್ಷೆಗಳನ್ನೂ ಕನ್ನಡದಲ್ಲಿ ಬರೆಯುವ ಅವಕಾಶ ನೀಡಬೇಕೆಂದು ಒತ್ತಾಯಿಸಿದ್ದರು.
ಎನ್‌ಡಿಎ ಸರ್ಕಾರ ರಾಜ್ಯದ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡದೇ ಕಡೆಗಣಿಸಿದೆ ಎಂಬುದು ಎಚ್ಡಿಕೆ ಸಾಮಾನ್ಯ ಆರೋಪವಾಗಿತ್ತು. ಕೃಷ್ಣಾ ಮೇಲ್ದಂಡೆ ಯೋಜನೆಗೆ ಹಣ ನೀಡಿಲ್ಲ, ಮಹದಾಯಿ ಯೋಜನೆಗೆ ಪರಿಸರ ಸಚಿವಾಲಯದ ಅನುಮೋದನೆ ದೊರೆಯದಂತೆ ಮಾಡಿ ತಡೆ ಹಿಡಿಯಲಾಗಿದೆ, ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿಸಿದಂತೆ ೩೦೦೦ ಕೋಟಿ ರೂಪಾಯಿ ನೀಡಿಲ್ಲ, ಕಾವೇರಿ ಜಲ ವಿವಾದದಲ್ಲಿ ನ್ಯಾಯ ಸಿಗುತ್ತಿಲ್ಲ, ಗಡಿವಿವಾದವನ್ನು ಮತ್ತೆ ಮತ್ತೆ ಮಹಾರಾಷ್ಟ್ರ ಕೆದಕುತ್ತಿರುವುದರ ಹಿಂದೆ ಕೇಂದ್ರದ ಕುಮ್ಮಕ್ಕಿದೆ ಮುಂತಾದ ಹಲವು ನಾಡು-ನುಡಿ ಪರ ವಿಚಾರಗಳನ್ನು ಮುಂದಿಟ್ಟುಕೊಂಡು ಕುಮಾರಸ್ವಾಮಿ ಮೋದಿ ಸರ್ಕಾರದ ವಿರುದ್ಧ ಗುಡುಗುತ್ತಿದ್ದರು.
ಬದಲಾದ ಚಿತ್ರಣ
ಈಗ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಅವರು ಅದೇ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಭಾಗವಾಗಿದ್ದಾರೆ. ಉಕ್ಕು ಮತ್ತು ಬೃಹತ್ ಕೈಗಾರಿಕೆಯಂತಹ ದೊಡ್ಡ ಖಾತೆಯ ಹೊಣೆ ಹೊತ್ತಿದ್ದಾರೆ. ಕೇಂದ್ರ ಪ್ರಭುತ್ವದ ಅಂಗವಾಗಿರುವ ಅವರು ರಾಜ್ಯದ ನೆಲ-ಜಲ-ಕನ್ನಡ ಭಾಷೆ ಮತ್ತು ಕನ್ನಡಿಗರ ಉದ್ಯೋಗಕ್ಕೆ ಸಂಬಂಧಿಸಿದ ಬಹುವರ್ಷಗಳ ಹಕ್ಕೊತ್ತಾಯಗಳನ್ನು ಈಡೇರಿಸುವ ಸಂಬಂಧ ಮೋದಿ ಮನವೊಲಿಸುವರೇ? ಬಹುದಶಕಗಳಿಂದಲೂ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯವನ್ನು ಹೋಗಲಾಡಿಸಿ ನ್ಯಾಯ ದೊರಕಿಸಿಕೊಡುವರೇ? ಎಂಬುದು ಈಗಿನ ಯಕ್ಷಪ್ರಶ್ನೆ.
ಎಚ್ಡಿಕೆ ಹಲ ವರ್ಷಗಳಿಂದ ತಾವೇ ಎತ್ತಿದ ದನಿಯನ್ನು ಅಡಗಿಸಿಕೊಳ್ಳದೆ, ಕೇಂದ್ರದ ನಡೆ ಕನ್ನಡಪರವಾಗಿರುವಂತೆ ಎಚ್ಡಿಕೆ ನೋಡಿಕೊಂಡರೆ, ನುಡಿದಂತೆ ನಡೆದರೆ ಅದು ನಿಜಕ್ಕೂ ರಾಜ್ಯಕ್ಕಾಗುವ ಬಹುದೊಡ್ಡ ಉಪಕಾರ, ಇಲ್ಲವಾದಲ್ಲಿ ಕನ್ನಡಿಗರು ಮತ್ತು ಕನ್ನಡಕ್ಕೆ ಕೇಂದ್ರದಿಂದ ಮತ್ತದೇ ಅನ್ಯಾಯದ ಮುಂದುವರಿಕೆ ಖಚಿತ. ಹಾಗಾಗಿ ಎಚ್ಡಿಕೆ ಮುಂದಿನ ನಡೆ-ಕಾರ್ಯವೆಲ್ಲವೂ ಕುತೂಹಲ ಗರಿಗೆದರಿಸಿರುವುದು ಸತ್ಯ.