test
Advertisement
- ಕೆ.ವಿ.ಪರಮೇಶ್
- ಕರ್ನಾಟಕದಿಂದ ಲೋಕಸಭೆಗೆ ಆಯ್ಕೆಯಾಗಿರುವ ೨೮ ಸದಸ್ಯರ ಪೈಕಿ ಅತ್ಯಂತ ಕಿರಿಯ ಸಂಸದ ಬೀದರ್ ಕ್ಷೇತ್ರದ ಸಾಗರ್ ಖಂಡ್ರೆ. ರಾಜಕಾರಣದ ಹಿನ್ನೆಲೆಯ ಯುವ ವಕೀಲರು ಲೋಕಸಭೆಯಲ್ಲಿ ಬೀದರ್‌ಗೆ ಸೀಮಿತವಾಗದೆ ಸಮಸ್ತ ಕರ್ನಾಟಕದ ಧ್ವನಿಯಾಗುವ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ. ಸಂಯುಕ್ತ ಕರ್ನಾಟಕದ ವಿಶೇಷ ಸಂದರ್ಶನದಲ್ಲಿ ಹಂಚಿಕೊಂಡಿರುವ ಅನಿಸಿಕೆಗಳ ವಿವರ ಇಲ್ಲಿದೆ.
- ನಿಮ್ಮ ಕಲ್ಪನೆಯ ಬೀದರ್ ಹೇಗಿರಬೇಕು ಅನ್ನುವ ವಿಷನ್ ಇದೆಯಾ?
ನಿರುದ್ಯೋಗ ಸಮಸ್ಯೆಯೇ ಅತಿದೊಡ್ಡದು. ಡಿಗ್ರಿ ಮಾಡಿದ್ದರೂ ಕೆಲಸ ಇಲ್ಲ. ಕೌಶಲ್ಯವೃದ್ಧಿಗೆ ಹೆಚ್ಚಿನ ಒತ್ತು ಕೊಡುವ ಇಚ್ಚೆ ಇದೆ. ರೈತರು ಬೆಳೆವಿಮೆ ಸಂಕಷ್ಟ ಎದುರಿಸ್ತಿದಾರೆ. ಇದರತ್ತವೂ ಗಮನ ಹರಿಸಬೇಕಿದೆ. ಬಾಲ್ಕಿಯಲ್ಲಿ ಮೇಲ್ಸೇತುವೆ ಆಗಬೇಕಿದೆ. ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕಿದೆ. ಒಟ್ಟಾರೆ ಬೀದರ್ ಕ್ಷೇತ್ರದ ಸಮಗ್ರ ಅಭಿವೃದ್ಧಿಯೊಂದಿಗೆ ದೇಶದಲ್ಲೇ ಮಾದರಿ ಕ್ಷೇತ್ರವಾಗಿಸುವ ಸಂಕಲ್ಪ ಹೊಂದಿದ್ದೇನೆ.
- ರಾಜಕಾರಣಕ್ಕೆ ಬರುವ ಇಚ್ಚೆ ಅಥವಾ ನಿರೀಕ್ಷೆ ಇತ್ತಾ?
ಖಂಡಿತವಾಗಿ ಇಲ್ಲ. ಆದರೆ ೨೦೨೦ರಲ್ಲಿ ಕೊರೊನಾ ಸಂದರ್ಭ ಬಾಲ್ಕಿ ಸೇರಿದಂತೆ ಇಡೀ ಜಿಲ್ಲೆ ಸುತ್ತಾಡುವ ಅವಕಾಶ ಸಿಕ್ಕಿತು. ನಾನಾಗ ಫೈನಲ್ ಇಯರ್ ಲಾ ಓದುತ್ತಿದ್ದೆ. ಸಕಾಲಕ್ಕೆ ಬೆಡ್ ಸಿಗದೆ, ಆಕ್ಸಿಜನ್ ದೊರಕದೆ ಜನರು ಪರಿತಪಿಸುತ್ತಿದ್ದಾಗ ಕೈಲಾದ ಕೆಲಸ ಸಹಾಯ ಮಾಡುತ್ತಿದ್ದೆ. ಆಗಲೇ ನನಗೆ ಜನಸೇವೆಯ ಸ್ಪಷ್ಟ ಕಲ್ಪನೆ ಬಂದಿತ್ತು. ಅದೇ ನನ್ನನ್ನು ರಾಜಕಾರಣಕ್ಕೆ ಎಳೆದು ತಂದಿತು.
- ಚುನಾವಣೆ ಗೆಲ್ಲುವ ಭರವಸೆ ಇಟ್ಟುಕೊಂಡಿದ್ರಾ?
ಹೌದು. ಫಲಿತಾಂಶಕ್ಕೆ ಮುನ್ನವೇ ಹೋದಲ್ಲೆಲ್ಲಾ ಅಡ್ವಾನ್ಸ್ ಆಗಿಯೇ ಅಭಿನಂದನೆ ಹೇಳ್ತಿದ್ರು. ಇದು ನನಗೆ ದೊಡ್ಡ ಶಕ್ತಿ ಕೊಟ್ಟಿತು. ಹಾಗಾಗಿ ನನ್ನ ಗೆಲವು ಯಾವುದೇ ಅಚ್ಚರಿ ಮೂಡಿಸಲಿಲ್ಲ. ಬೀದರ್ ಜನರು ಆಶೀರ್ವದಿಸಿದ್ದಾರೆ. ಅವರ ನಂಬಿಕೆ, ವಿಶ್ವಾಸ ಉಳಿಸಿಕೊಳ್ಳುವ ದೊಡ್ಡ ಹೊಣೆಗಾರಿಕೆ ನನ್ನ ಮೇಲಿದೆ.
- ರಾಜಕೀಯದಲ್ಲಿ ನಿಮಗೆ ಆದರ್ಶ ಹಾಗೂ ಪ್ರೇರಣೆ ಯಾರು?
ಆದರ್ಶ ಅಂತ ಬಂದ್ರೆ ನನ್ನ ತಾತಾ(ಭೀಮಣ್ಣಖಂಡೆ) ಹಾಗೂ ತಂದೆ(ಈಶ್ವರಖಂಡ್ರೆ) ಆದರೆ ಹೋರಾಟದ ವಿಷಯದಲ್ಲಿ ನಮ್ಮ ನಾಯಕ ರಾಹುಲ್‌ಗಾಂಧಿ ಅವರೇ ನನಗೆ ಪ್ರೇರಣೆ. ಅವರ ವಿಷನ್ ಮತ್ತು ಹೋರಾಟ ಮನೋಭಾವ ನನಗಿಷ್ಟ. ಕೊಟ್ಟ ಹೇಳಿಕೆ ಬದಲಿಸುವ ವ್ಯಕ್ತಿಯಲ್ಲ. ಭಾರತ್ ಜೋಡೋ ಯಾತ್ರೆ ವೇಳೆ ಅವರಿಗೆ ಸಿಕ್ಕಿದ ಜನ ಬೆಂಬಲ, ಜನತೆ ಅವರಿಗೆ ತೋರಿಸಿದ ಪ್ರೀತಿ ಅದ್ಭುತ.
- ರಾಜ್ಯ ಸರ್ಕಾರದ ಬಗ್ಗೆ ಏನಂತೀರಿ?
ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸರ್ಕಾರ ಯಶಸ್ವಿಯಾಗಿ ಕೆಲಸ ಮಾಡುತ್ತಿದೆ. ಗ್ಯಾರಂಟಿಗಳು ಶೇ. ೯೫ರಷ್ಟು ಜನತೆಗೆ ತಲುಪಿವೆ. ಅಭಿವೃದ್ಧಿ ಕೆಲಸಗಳೂ ಸಮರೋಪಾದಿಯಲ್ಲಿ ನಡೆದಿದೆ. ನುಡಿದಂತೆ ನಡೆದ ಸರ್ಕಾರ ನಮ್ಮದು.
- ನಿಮ್ಮ ಕಾರ್ಯವೈಖರಿ ಹೇಗಿರಲಿದೆ?
ನಾನು ಹೊಸಬ ಹೌದು. ಆದರೆ ಅಲ್ಲಿ ಏನೇನಾಗುತ್ತದೆ ಎನ್ನುವುದರ ಬಗ್ಗೆ ಸ್ಪಷ್ಟ ಅರಿವಿದೆ. ಜನಾದೇಶ ಎನ್‌ಡಿಎಗೆ ಸಿಕ್ಕಿದೆ. ಪ್ರತಿಪಕ್ಷದಲ್ಲಿ ಕುಳಿತೇ ಅಭಿವೃದ್ಧಿಗೆ ಪ್ರಯತ್ನೀಸ್ತೀನಿ. ಬೀದರ್ ಕ್ಷೇತ್ರಕ್ಕೆ ಸೀಮಿತವಾಗದೆ ರಾಜ್ಯದ ಧ್ವನಿಯಾಗಿ ಕೆಲಸ ಮಾಡ್ತೀನಿ. ಬೀದರ್ ಅನ್ನು ದೇಶದಲ್ಲೇ ಮಾದರಿ ಕ್ಷೇತ್ರವಾಗಿ ಮಾಡುವ ಸಂಕಲ್ಪ ಹೊಂದಿದ್ದೇನೆ.
- ಕುಟುಂಬ ರಾಜಕಾರಣದ ಬಗ್ಗೆ ನಿಮ್ಮ ಅಭಿಪ್ರಾಯ
ರಾಜಕೀಯ ಅಂದ್ರೆ ಜನಸೇವೆ. ಅಧಿಕಾರ ಜನಸೇವೆಗೆ ಸೀಮಿತ. ಕುಟುಂಬ ರಾಜಕಾರಣ ತಪ್ಪಲ್ಲ. ನಮ್ಮ ಕುಟುಂಬದವರು ಯಾರೂ ನಾಮನಿರ್ದೇಶನದಿಂದ ರಾಜಕೀಯಕ್ಕೆ ಬಂದವರಲ್ಲ. ಎಲ್ಲರೂ ಜನಾದೇಶದಿಂದಲೇ ಆಯ್ಕೆಯಾದವರು. ಜನರು ಆರಿಸುವಾಗ ಕುಟುಂಬ ನೋಡಲ್ಲ. ಈ ವ್ಯಕ್ತಿ ಸಮರ್ಥ ಅನ್ನಿಸಿದ್ರೆ ಗೆಲ್ಲಿಸ್ತಾರೆ. ನಮ್ಮ ಕುಟುಂಬದಲ್ಲಿ ಹಾಗೆಯೇ ಆಗಿದೆ.
- ಬೀದರ್‌ನಲ್ಲಿ ನೀವು ಒನ್‌ಟೈಂ ಎಂಪಿನಾ?
ಅದು ಜನರ ಕೈಯ್ಯಲ್ಲಿದೆ. ನಾನಂತೂ ಪ್ರಾಮಾಣಿಕವಾಗಿ ಅಭಿವೃದ್ಧಿ ಕೆಲಸ ಮಾಡ್ತೀನಿ. ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತರಲು ಶ್ರಮಿಸ್ತೀನಿ. ಉಳಿದದ್ದು ಜನರಿಗೆ ಬಿಟ್ಟಿದ್ದು. ಕೆಲಸ ಮಾಡ್ತಾರೆ ಅನ್ನೋ ವಿಶ್ವಾಸ ಇದ್ರೆ ಗೆಲ್ಲಿಸ್ತಾರೆ. ಇಲ್ಲಾಂದ್ರೆ ಬದಲಿಸ್ತಾರೆ ಅಷ್ಟೇ.
- ರಾಜಕಾರಣದಲ್ಲಿ ನಿಮ್ಮ ಮೈಂಡ್‌ಸೆಟ್ ಏನು?
ಬಸವಣ್ಣ ಜನಿಸಿದ ನಾಡು ನಮ್ಮದು. ನಾನು ಜಾತಿ ಧರ್ಮ ನೋಡಲ್ಲ. ಬಡತನ ನನ್ನ ಧರ್ಮ. ಬಡವರ ಪರವಾಗಿ ಹೋರಾಡ್ತೀನಿ. ಎಲ್ಲ ಜಾತಿ, ಧರ್ಮದ ಬಡವರೇ ಸಮಾಜದಲ್ಲಿ ಸಮಸ್ಯೆ ಎದುರಿಸೋರು. ಹಾಗಾಗಿ ಯಾವುದೇ ಜಾತಿ, ಧರ್ಮ ಮುಖ್ಯವಲ್ಲ. ಜನರನ್ನು ಬಡತನದಿಂದ ಮೇಲೆತ್ತಲು ಎಷ್ಟು ಸಾಧ್ಯವೋ ಅದೆಲ್ಲ ಪ್ರಯತ್ನ ಮಾಡ್ತೇನೆ.
Like this:
Like Loading...