ಡೆಂಗ್ಯುಗೆ ಮಗು ಬಲಿ

Advertisement

ಧಾರವಾಡ: ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ಜಿಲ್ಲೆಯಲ್ಲಿ ಡೆಂಗ್ಯು ಪ್ರಕರಣ ಕಂಡುಬಂದಿದ್ದು, ತಾಲೂಕಿನ ಮುಮ್ಮಿಗಟ್ಟಿ ಗ್ರಾಮದ ೪ ವರ್ಷದ ಮಗುವೊಂದು ಡೆಂಗ್ಯುಗೆ ಬಲಿಯಾಗಿದೆ.
ಜಿಲ್ಲೆಯಲ್ಲಿ ಈ ವರೆಗೆ ೪೬ ಪ್ರಕರಣಗಳು ಕಂಡುಬಂದಿದ್ದು, ಅದರಲ್ಲಿ ೪ ಜನರಲ್ಲಿ ಡೆಂಗ್ಯು ಖಚಿತವಾಗಿದೆ. ಮುಮ್ಮಿಗಟ್ಟಿ ಗ್ರಾಮದಲ್ಲಿಯೇ ಹೆಚ್ಚಿನ ಜನರಲ್ಲಿ ಡೆಂಗ್ಯು ಶಂಕೆ ವ್ಯಕ್ತಪಡಿಸಿದ್ದು, ಬುಧವಾರ ಆರೋಗ್ಯ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ದಿಢೀರ ಭೇಟಿ ನೀಡಿ ಇಡೀ ಗ್ರಾಮವನ್ನೇ ಪರಿಶೀಲನೆ ಮಾಡಿದ್ದಾರೆ. ಗ್ರಾಮದ ೪ ವರ್ಷದ ಮಗುವಿಗೆ ವಿಪರೀತ ಜ್ವರ ಕಂಡುಬಂದಿತ್ತು. ತಕ್ಷಣ ಮಗುವನ್ನು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಿಸದೇ ಮೃತಪಟ್ಟಿದೆ.
ಅಲ್ಲದೇ ಕೆಲವು ಮನೆಗಳ ಅಕ್ಕಪಕ್ಕದಲ್ಲಿ ಘನತ್ಯಾಜ್ಯ ಸೇರಿದಂತೆ ಇತರೆ ವಸ್ತುಗಳನ್ನು ಸಂಗ್ರಹಿಸಿಡಲಾಗಿದ್ದು, ಅವುಗಳ ವಿಲೇವಾರಿ ಮಾಡುವಂತೆ ಮನೆಯವರಿಗೆ ಸೂಚಿಸಲಾಯಿತು. ಅಲ್ಲದೇ ಗ್ರಾಮ ಪಂಚಾಯತ್ ಸಹಯೋಗದಲ್ಲಿ ಇಡೀ ಗ್ರಾಮದಲ್ಲಿ ವಿಶೇಷ ಜಾಗೃತಿ ನಡೆಸಿ ಡೆಂಗ್ಯು ಸೊಳ್ಳೆ ಬಗೆಗೆ ಮಾಹಿತಿ ನೀಡಲಾಯಿತು. ಜೊತೆಗೆ ಗ್ರಾಮದೆಲ್ಲೆಡೆ ಫಾಗಿಂಗ್ ಸಹ ಮಾಡಲಾಯಿತು.
ಇಷ್ಟು ಮಾತ್ರವಲ್ಲದೇ ಬಹುತೇಕರಲ್ಲಿ ಜ್ವರ ಕಂಡುಬಂದ ಹಿನ್ನೆಲೆಯಲ್ಲಿ ಮುಮ್ಮಿಗಟ್ಟಿ ಗ್ರಾಮದಲ್ಲಿಯೇ ತಾತ್ಕಾಲಿಕವಾಗಿ ಜ್ವರ ಚಿಕಿತ್ಸಾಲಯ ಪ್ರಾರಂಭಿಸಿದ್ದು, ಜನರು ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ತಿಳಿಸಲಾಯಿತು.
ಕಳೆದ ಏ. ೧೬ರಿಂದ ಇಲ್ಲಿಯ ವರೆಗೆ ಜಿಲ್ಲೆಯ ೩೦೫೭ ಮನೆಗಳಲ್ಲಿ ಲಾರ್ವಾ ನಿರ್ಮೂಲನೆ ಸಮೀಕ್ಷೆ ನಡೆಸಿದ್ದು, ಅವುಗಳಲ್ಲಿ ೧೫೭ ಮನೆಗಳಲ್ಲಿ ಲಾರ್ವಾ ಕಂಡುಬಂದಿದೆ. ಅವುಗಳನ್ನು ಸಂಪೂರ್ಣವಾಗಿ ನಾಶಪಡಿಸಲಾಗಿದೆ. ಈ ವರೆಗೆ ೬ ಜನರು ಜ್ವರದ ಚಿಕಿತ್ಸೆ ಪಡೆಯುತ್ತಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ. ಜಿಲ್ಲೆಯಲ್ಲಿ ಡೆಂಗ್ಯು ಪ್ರಕರಣ ಹೆಚ್ಚಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.