ವಿವಾಹ, ವಿಚ್ಛೇದನ-ಭಾರತ, ವಿದೇಶಗಳಲ್ಲಿ

Advertisement

ವರನಟ ಡಾ. ರಾಜಕುಮಾರರವರ ದೊಡ್ಮನೆಯು ಆದರ್ಶ ಭಾರತೀಯ ಕುಟುಂಬಗಳಲ್ಲೊಂದು. ಡಾ. ರಾಜಕುಮಾರ ಪಾರ್ವತಮ್ಮ ದಂಪತಿ ತಮ್ಮ ಕುಟುಂಬದ ಕುಡಿಗಳನ್ನು ಸಂಸ್ಕಾರಯುತ ಸಭ್ಯ ನಾಗರಿಕರನ್ನಾಗಿ, ಉತ್ತಮ ನಟರನ್ನಾಗಿ ಬೆಳೆಸಿದ್ದಾರೆ. ಡಾ. ರಾಜಕುಮಾರರಂತೂ ತಮ್ಮ ಸಿನಿಮಾಗಳ ಪಾತ್ರಗಳಂತೆ ನಿಜಜೀವನದಲ್ಲೂ ಅನುಕರಣೀಯವಾದ ಬದುಕನ್ನೇ ಸವೆಸಿದ್ದಾರೆ. ಕಾಲಚಕ್ರ ಉರುಳಿದೆ. ನಂತರದ ಒಂದು ಪೀಳಿಗೆ ಅವರ ಆದರ್ಶವನ್ನು ಕಾಪಿಟ್ಟುಕೊಂಡು ಬಂದಿದೆ. ಆದರೆ ತದನಂತರದ ಸಂತತಿಯಲ್ಲಿ ಅದೇಕೋ ಸಡಿಲತೆ ಕಾಣಿಸಿದೆ. ಶ್ರೀದೇವಿಯೊಂದಗಿನ ಗುರು(ಯುವ)ನ ವಿವಾಹ ವಿಚ್ಛೇದನದ ಸುದ್ದಿ ರಾಜಕುಮಾರ ಕುಟುಂಬವನ್ನಷ್ಟೇ ಅಲ್ಲ, ಅವರ ಅಭಿಮಾನಿಗಳೆಲ್ಲರಿಗೂ ನೋವನ್ನುಂಟು ಮಾಡಿದೆ. ದೊಡ್ಡವರ ಮನೆಯ ಸಣ್ಣ ಸುದ್ದಿಯೂ ದೊಡ್ಡದೇ ಆಗುತ್ತದೆ. ಅಂತಹುದರಲ್ಲಿ ಕೌಟುಂಬಿಕ ಮೌಲ್ಯಗಳನ್ನು ಸದಾ ಎತ್ತಿ ಹಿಡಿದ ಡಾ. ರಾಜಕುಮಾರ ಅವರ ಪರಿವಾರದಲ್ಲಿ ವಿಚ್ಛೇದನದಂತಹ ಘಟನೆ ಸಹಜವಾಗಿಯೇ ಆಘಾತವನ್ನುಂಟು ಮಾಡಿದೆ.

ಈ ಸುದ್ದಿಗೂ ಮೊದಲೇ ಚಂದನ್ ಶೆಟ್ಟಿ-ನಿವೇದಿತಾಗೌಡ ಅವರ ವಿಚ್ಛೇದನದ ಸುದ್ದಿ ಹರಿದಾಡಿತ್ತು. ನಾಲ್ಕಾರು ವರ್ಷಗಳಿಂದ ಚಂದನವನದ ಯುವ ಜೋಡಿಯಾಗಿ ಮೆರೆದ ಅವರ ಸಂಬಂಧದಲ್ಲಿ ಬಿರುಕು ಕಂಡಿತ್ತು. ಹೊಂದಿಕೆಯಾಗದ ಕಾರಣಕ್ಕೆ ಪರಸ್ಪರ ಒಪ್ಪಿಕೊಂಡೇ ವಿಚ್ಛೇದನ ಪಡೆದರು. ಒಟ್ಟಾಗೇ ಕುಳಿತು ಪತ್ರಿಕಾಗೋಷ್ಟಿಯಲ್ಲಿ ಉಹಾಪೋಹಗಳಿಗೆ ತೆರೆ ಎಳೆದರು. ಈ ಎರಡು ಜೋಡಿಗಳು ಸೆಲೆಬ್ರೆಟಿಗಳಾಗಿದ್ದರಿಂದ ಮಾಧ್ಯಮದಲ್ಲಿ ಪ್ರಚಾರ ಪಡೆದವು. ಆದರೆ ದುರದೃಷ್ಟವಶಾತ್ ಈ ವಿಚ್ಛೇದನವೆಂಬ ಕುಟುಂಬ ಕಂಟಕವು ಭಾರತೀಯ ಸಮಾಜದಲ್ಲಿ ಕ್ರಮೇಣ ಹೆಚ್ಚುತ್ತಿದೆ. ಭಾರತೀಯ ಕೌಟುಂಬಿಕ-ಸಾಮಾಜಿಕ ಮೌಲ್ಯಗಳಿಗೆ ಮರ್ಮಾಘಾತ ಕೊಡುತ್ತಿರುವ ಇಂತಹ ಬೆಳವಣಿಗೆಗಳು ಅಪೇಕ್ಷಣೀಯ ಮತ್ತು ಅಸಮರ್ಥನೀಯವಾಗಿವೆ. ವಿದೇಶದಿಂದ ಬಳುವಳಿಯಾಗಿ ಬಂದ ವಿಚ್ಛೇದನ ಸಂಸ್ಕೃತಿಯು ಸುಶಿಕ್ಷಿತ ಜನರಿರುವ ಬೃಹನ್ನಗರಗಳಲ್ಲಿ ಎಷ್ಟು ವ್ಯಾಪಕವಾಗಿ ಹೆಚ್ಚಿದೆ ಎಂದರೆ ಅದಕ್ಕಾಗಿ ಸ್ಪೆಷಲಿಸ್ಟ್ ವಕೀಲರು ಹುಟ್ಟಿಕೊಂಡಿದ್ದಾರೆ!

ಮದುವೆ ಎನ್ನುವುದು ಭಾರತೀಯ ಜೀವನದ ಒಂದು ಅತ್ಯಂತ ಪ್ರಮುಖವಾದ ಘಟ್ಟವಾಗಿದೆ. ಯುವಾವಸ್ಥೆಯಿಂದ ಗೃಹಸ್ಥಾಶ್ರಮಕ್ಕೆ ಪ್ರವೇಶಿಸುವ ಪರ್ವ ಕಾಲವಾಗಿದೆ. ಅದು ಕೇವಲ ಲೈಂಗಿಕ ಅವಶ್ಯಕತೆಗಾಗಿ ಪಶು-ಪಕ್ಷಿಗಳಂತೆ ಗಂಡು-ಹೆಣ್ಣು ಒಂದುಗೂಡುವ ಕ್ರಿಯೆಯಲ್ಲ. ಅದಕ್ಕಾಗಿ ಸಮಾಜದಿಂದ ಸಾರ್ವಜನಿಕವಾಗಿ ಲೈಸನ್ಸ್ ಪಡೆದುಕೊಳ್ಳುವ ಪ್ರಕ್ರಿಯೆಯಲ್ಲ. ಮದುವೆ ಎಂಬುದು ಜೀವನಪರ್ಯಂತ ಕಾಯಾ-ವಾಚಾ-ಮನಸಾ ಜೊತೆಯಲ್ಲೇ ಇರಲು ಜೋಡಿಗಳು ಶಪಥತೊಡುವ ಸಂದರ್ಭ. ಅದು ಏಳೇಳು ಜನ್ಮಗಳ ಸಂಬಂಧ. ಧರ್ಮ-ಅರ್ಥ-ಕಾಮ-ಮೋಕ್ಷಗಳಲ್ಲೆಲ್ಲ ಪರಸ್ಪರ ಹಿಂಬಾಲಿಸುವ ನಂಬಿಕೆಯ ವಾಗ್ದಾನವದು. ಅದು ಇಬ್ಬರು ವಧು-ವರರನ್ನು ಮಾತ್ರ ಕೂಡಿಸುವ ಪ್ರಸಂಗವಲ್ಲ. ಭಾರತೀಯರ ಪ್ರಕಾರ ವಿವಾಹವೆಂದರೆ ಒಂದು ಹೆಣ್ಣು-ಒಂದು ಗಂಡು ಕೂಡಿ ಇಬ್ಬರಾಗುವ ಸರಳ ಗಣಿತವಲ್ಲ. ಅದು ದ್ವಿಭುಜರಾದ ಒಬ್ಬೊಬ್ಬರೂ ಚತುರ್ಭುಜರಾಗುವ ಅಂದರೆ ದ್ವಿಗುಣ ಶಕ್ತಿಶಾಲಿಗಳಾಗುವ ಜೀವನ ಗಣಿತ. ಒಂದು ಮದುವೆಯು ಎರಡು ಕುಟುಂಬಗಳನ್ನು ಕೂಡಿಸಿ ಬಲಪಡಿಸುತ್ತದೆ. ಆಗ ೧+೧=೧೧ ಆಗುತ್ತದೆ. ಭಾರತೀಯ ವೈವಾಹಿಕ ಪದ್ಧತಿಯು ಚೆನ್ನಾಗಿ ಪರೀಕ್ಷಿಸಲ್ಪಟ್ಟ, ಸಾಬೀತಾದ ಮತ್ತು ತುಂಬ ವಿಶ್ವಾಸಾರ್ಹವಾದ ಸಂಬಂಧಗಳ ಬೆಸುಗೆಯೆಂದು ಹೇಳಬಹುದು. ಮದುವೆಗಳು ಸ್ವರ್ಗದಲ್ಲೇ ಆಗಿರುತ್ತವೆ. ಪ್ರತಿ ಗಂಡು-ಹೆಣ್ಣಿಗೂ ದೇವರು ಜೊತೆಗಾರರನ್ನು ಇಟ್ಟೇ ಇಟ್ಟಿರುತ್ತಾನೆ. ಶ್ರೀನಿವಾಸ ಕಲ್ಯಾಣೋತ್ಸವ, ಶಿವ-ಪಾರ್ವತಿ ಕಲ್ಯಾಣೋತ್ಸವ ಮಾಡಿದರೆ ಮದುವೆಯ ಭಾಗ್ಯ ಲಭಿಸುತ್ತದೆ ಎನ್ನುವ ನಂಬಿಕೆ ಹಿಂದುಗಳಿಗಿದೆ. ಸ್ವಗೋತ್ರದವರಲ್ಲಿ ಮದುವೆ ಸಲ್ಲ. ಹೀಗೆ ಮದುವೆ ಬಗೆಗೆ ಹತ್ತಾರು ವೈಜ್ಞಾನಿಕ-ಅವೈಜ್ಞಾನಿಕ ನಂಬಿಗೆ, ಆಚರಣೆಗಳು ಭಾರತದ ಉದ್ದಗಲಕ್ಕೂ ಜಾರಿಯಲ್ಲಿವೆ.

ಕೆಲವು ಧರ್ಮೀಯರಲ್ಲಿ ಮದುವೆಯು ಕೇವಲ ಜೊತೆಯಾಗಿರುವ ಒಪ್ಪಂದವಾಗಿರುತ್ತದೆ. ಬೇಕೆನಿಸುವವರೆಗೆ ಜೊತೆಯಾಗಿದ್ದು, ಬೇಡವೆನಿಸಿದಾಗ ಬೇರೆಯಾಗಬಹುದು. ಕೆಲವು ಧರ್ಮಗಳಲ್ಲಂತೂ ಏಕಪಕ್ಷೀಯವಾಗಿ ಬೇಡ ಎಂದು ೩ ಸಲ ಹೇಳಿದರೆ ಸಾಕು, ವಿಚ್ಛೇದನವಾಗಿಬಿಡುತ್ತಿತ್ತು. ಅದೂ ಕೂಡ ಪ್ರತ್ಯಕ್ಷವಾಗಿ ಎದುರಿಗಿದ್ದುಕೊಂಡೇ ಹೇಳಬೇಕೆಂದಿರಲಿಲ್ಲ. ಮೊಬೈಲ್ ಮೂಲಕವೂ ವಿದೇಶದಲ್ಲಿದ್ದುಕೊಂಡೂ ಹೇಳಬಹುದಾಗಿತ್ತು! ಪರಸ್ಪರ ಒಪ್ಪಿಕೊಂಡು, ಕುಟುಂಬಗಳ ಹಿರಿಯರು ಮತ್ತು ಸಮಾಜದ ಪ್ರಮುಖರ ಮುಂದೆ ಸಡಗರದ ಮದುವೆ ನಡೆದಿದ್ದರೂ ಇರ‍್ಯಾರ ಒಪ್ಪಿಗೆಯನ್ನು ಕೇಳದೇ ಕ್ಷಣಾರ್ಧದಲ್ಲಿ ವೈವಾಹಿಕ ಜೀವನಕ್ಕೆ ತಿಲಾಂಜಲಿಯನ್ನು ಕೊಡಬಹುದಾಗಿತ್ತು. ಇದ್ದಕ್ಕಿಂದ್ದಂತೆ ಸಂಬಂಧಗಳು ಮುರಿದು ಬೀಳುತ್ತಿದ್ದವು. ಇದರಿಂದ ಆದ ಸಮಸ್ಯೆಗಳು ಅಷ್ಟಿಷ್ಟಲ್ಲ. ಜೀವನಾಧಾರ/ಭದ್ರತೆಯನ್ನು ಕಳೆದುಕೊಂಡ ಹೆಣ್ಣು ಮಕ್ಕಳು ಹಾಗೂ ತಂದೆ-ತಾಯಂದಿರದ್ದೂ ಅನಾಥರಾದ ಮಕ್ಕಳು ನರಕಯಾತನೆಯನ್ನು ಅನುಭವಿಸುತ್ತಿದ್ದರು. ಛಿದ್ರಗೊಂಡ ಸಂಬಂಧದಿಂದ ಹೆಣ್ಣುಮಗಳು ಮತ್ತು ಮತ್ತವಳ ಮಕ್ಕಳನ್ನು ಸಮಾಜವೂ ಕೀಳು ದೃಷ್ಟಿಯಲ್ಲಿ ಕಾಣುತ್ತದೆ.

“ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ” ಎಂದಿದ್ದರೂ ಒಮ್ಮೊಮ್ಮೆ ಇದು ವಿಚ್ಛೇದನದ ಮಟ್ಟಕ್ಕೆ ಹೋಗುತ್ತದೆ. ಪರಸ್ಪರ ಪ್ರೀತಿಸಿಯೇ ಮದುವೆಯಾಗಿದ್ದರೂ ಸಹ ಚಿಕ್ಕ ಚಿಕ್ಕ ಕಾರಣಗಳಿಗೆ ಪ್ರಾರಂಭವಾದ ಜಗಳ ವಿಕೋಪಕ್ಕೆ ಹೋಗುತ್ತವೆ. ವರದಕ್ಷಿಣೆ ಕಿರುಕುಳ, ಅತೃಪ್ತ ವೈವಾಹಿಕ ಜೀವನ, ವಿಕೃತ ವರ್ತನೆ ಅಥವಾ ಅನೈತಿಕ ಸಂಬಂಧಗಳು ವಿಚ್ಛೇದನಗಳಿಗೆ ಕಾರಣಗಳಾಗುತ್ತವೆ. ಹೀಗೆ ಮಾಡಿಸುವ ಪ್ರೀತಿ ಅದೆಂತಹುದೋ?! ದ್ವೇಷವಾಗಿ ಮಾರ್ಪಟ್ಟು ವಿಚ್ಛೇದನದವರೆಗೆ ಎಳೆಸುವ ಪ್ರೀತಿ ನಿಜವಾದ ಪ್ರೀತಿಯೇ? ಒಮ್ಮೆ ಮದುವೆ ಆದ ಮೇಲೆ ಕಷ್ಟಾನೋ ಸುಖಾನೋ ಹೊಂದಿಕೊಂಡಿರಬೇಕು. ಮಕ್ಕಳ ಮುಖ ನೋಡಿಯಾದರೂ ತಮ್ಮನ್ನು ತಾವು ನಿಯಂತ್ರಿಸಿಕೊಳ್ಳಬೇಕು. ಹಾಗೆ ನೋಡಿದರೆ ವಿಚ್ಛೇದನ ಅನ್ನುವುದು (ಪ್ರೇಮ) ವಿವಾಹಕ್ಕೆ ವೈರಿ ಇದ್ದಂತೆ. ಅವರು ನಿಜವಾಗಿಯೂ ಪರಸ್ಪರ ಅರ್ಥ ಮಾಡಿಕೊಂಡು ಮದುವೆ ಆಗಿದ್ದರೆ ವಿಚ್ಛೇದನವಾಗುತ್ತಿರಲಿಲ್ಲ. ಮದುವೆಗೂ ಮೊದಲು ಪೂರ್ಣ ಅರ್ಥಮಾಡಿಕೊಂಡಿರದಿದ್ದರೂ ನಂತರವಾದರೂ ಅರ್ಥೈಸಿಕೊಳ್ಳಬೇಕಿತ್ತು. ಅದು ಅವರ ವಿಶುದ್ಧ ಪ್ರೇಮಕ್ಕೊಂದು ಅರ್ಥಕೊಡುತ್ತಿತ್ತು. ಅವರ ಬದ್ಧತೆಯನ್ನು ಸಾರಿ ಹೇಳುತ್ತಿತ್ತು. ಸಣ್ಣ-ಪುಟ್ಟ ವ್ಯತ್ಯಾಸ, ಮನಸ್ತಾಪಗಳನ್ನು ಮೆಟ್ಟಿ ನಿಲ್ಲದ್ದು ಅದೆಂತಹ ಪ್ರೇಮ?! ತಾನೇ ಸರಿ ಎನ್ನುವುದೆಷ್ಟು ಸರಿ? ಅಹಮಿಕೆಯನ್ನು ನಿಯಂತ್ರಿಸಲಾಗದ್ದು, ಜೊತೆಗಾರರಿಗಾಗಿ ತ್ಯಾಗ ಮಾಡಲಾಗದ್ದು ಪ್ರೇಮವೇ? ಪರಸ್ಪರ ಭಾವನೆಗಳನ್ನು ಗೌರವಿಸುವ, ಹೊಂದಿಕೊಂಡು ಹೋಗುವ ಸ್ವಭಾವವಿರದವರೇ ವಿಚ್ಛೇದನಕ್ಕೆ ಮುಂದಾಗುತ್ತಾರೆ. ಹಿರಿಯರ, ಅನುಭವಸ್ಥರ ಮಾತು ಕೇಳದ ಮತ್ತು ಸ್ವೇಚ್ಛಾಚಾರ ಬಯಸುವ ಇಂದಿನ ಯುವಜನತೆಯಲ್ಲಿ ಕಾದು ನೋಡುವ, ಹೊಂದಿಕೊಂಡು ಹೋಗುವ ತಾಳ್ಮೆ ಇಲ್ಲ. ತಮ್ಮಲ್ಲಿರದದ್ದನ್ನು ಅವರು ಜೊತೆಗಾರರಿಂದ ಬಯಸುತ್ತಾರೆ!

ವಿಚ್ಛೇದನದಿಂದಾಗಿ ಉಂಟಾದ ದುಷ್ಪರಿಣಾಮಗಳನ್ನು ಪಾಶ್ಚಾತ್ಯ ಸಮಾಜಗಳಲ್ಲಿ ಅತ್ಯಂತ ಸ್ಪಷ್ಟವಾಗಿ ನೋಡಬಹುದು. ಅಲ್ಲಿ ಬಂಧುಮಿತ್ರರಿಗೆ ತಮ್ಮ ಜೊತೆಗಾರರನ್ನು ಪರಿಚಯಿಸುವಾಗ “ಇವರು ನನ್ನ ಮಕ್ಕಳು, ಅವರು ಅವಳ ಮಕ್ಕಳು, ಇನ್ನು ಇವರು ನಮ್ಮಿಬ್ಬರ ಮಕ್ಕಳು” ಎಂದು ಹೇಳಲಾಗುತ್ತದೆ. ಇದರಿಂದ ಮಕ್ಕಳ ಮನಸ್ಸಿನ ಮೇಲೆ ಏನು ಪರಿಣಾಮವಾಗಬೇಡ? ತಮ್ಮ ವೈಯುಕ್ತಿಕ ಆಸೆ-ಆಕಾಂಕ್ಷೆಗಳಿಂದಾಗಿ ತಮ್ಮದೇ ಮಕ್ಕಳ ಭವಿಷ್ಯವನ್ನು ಅನಿಶ್ಚಿತತೆಗೆ ದೂಡುವ ಸಂಕುಚಿತ ನಡೆಯೇ ವಿಚ್ಛೇದನ ಎನಿಸುವುದಿಲ್ಲವೇ? ತೀರ ಅನಿವಾರ್ಯವಾದ ನಿಯಂತ್ರಿಸಲಾಗದ ಸಂದರ್ಭಗಳಲ್ಲಿ ವಿಚ್ಛೇದನವನ್ನು ಒಪ್ಪಬಹುದಾದರೂ ಉದ್ದೇಶಪೂರ್ವಕವಾಗಿ ವಿಚ್ಛೇದನ ಪಡೆಯಲು ಅನಿವಾರ್ಯವೆನಿಸುವ ಸ್ಥಿತಿಗೆ ಯೋಜನಾ ಬದ್ಧವಾಗಿ ನಡತೆ, ಘಟನೆ, ಯೋಚನೆಗಳನ್ನು ಹೊಂದಿಸುವುದು ಜೊತೆಗಾರನಿಗೆ ಅಪಚಾರವೆಸಗಿದಂತಾಗುತ್ತದೆ. ವಿಚ್ಛೇದಿತರು ಸಮಾಜದ ದೃಷ್ಟಿಯಲ್ಲಿ ಪರಸ್ಪರ ಹೊಂದಿಕೊಂಡು ಹೋಗಲಾಗದವರು, ಅರಿತುಕೊಳ್ಳದವರು, ಅಹಂಕಾರವುಳ್ಳವರು, ಮತ್ತೊಬ್ಬರ ಭಾವನೆ/ಚಿಂತನೆಗಳಿಗೆ ಬೆಲೆ ಕೊಡದವರು ಎಂದಾಗುತ್ತಾರೆ.

ಇತ್ತೀಚೆಗೆ ಭಾರತದ ಸರ್ವೋಚ್ಚ ನ್ಯಾಯಾಲಯವು ಕೂಡ ಅಗ್ನಿಸಾಕ್ಷಿಯಾಗಿ ಸಪ್ತಪದಿ ತುಳಿಯುವುದು, ಧಾರೆಯೆರೆಯುವುದು, ಮಂಗಳಸೂತ್ರಧಾರಣೆ ಇತ್ಯಾದಿಗಳು ಕ್ರಮಬದ್ಧವಾಗಿ ನಡೆದಾಗ ಮಾತ್ರ ಅದನ್ನು ಹಿಂದೂ ಧರ್ಮದಂತೆ ಆದ ಮದುವೆ ಎಂದು ಗುರುತಿಸಲಾಗುತ್ತದೆ ಎಂದಿದೆ. ಹಿಂದೂ ವೈವಾಹಿಕ ಕಾನೂನಿನಲ್ಲಿ ವಿವಾಹ ವಿಚ್ಛೇದನಕ್ಕೆ ಅವಕಾಶವಿದೆ. ಆದರೆ ಆದ್ಯತೆ ಇಲ್ಲ. ಕೌಟುಂಬಿಕ ನ್ಯಾಯಾಲಯಗಳ ಮೂಲಕ ಇಂತಹ ಕೇಸುಗಳನ್ನು ಇತ್ಯರ್ಥಪಡಿಸಲು ಮೊದಲು ಪ್ರಯತ್ನಿಸಲಾಗುತ್ತದೆ. ಭಾವಾವೇಶದಲ್ಲಿ ವಿಚ್ಛೇದನಕ್ಕೆ ಧಾವಿಸಿದ ಪ್ರಕರಣಗಳನ್ನು ಗುರುತಿಸಿ ಅವರಿಗೆ ಪರಸ್ಪರ ಅರ್ಥ ಮಾಡಿಕೊಳ್ಳಲು, ಹೊಂದಿಕೊಂಡು ಸಂಸಾರವನ್ನು ಮುಂದುವರಿಸಲು ಬೇಕಾಗುವ ಕಾಲಾವಕಾಶವನ್ನು ನೀಡಲಾಗುತ್ತದೆ. ವಿಚ್ಛೇದನವನ್ನು ಕೊನೆಯ ಅಸ್ತ್ರವಾಗಿ ಪರಿಗಣಿಸಲು ತಿಳಿಹೇಳಲಾಗುತ್ತದೆ. ಯಾವುದೇ ದೃಷ್ಟಿಯಿಂದಲೂ ಇಬ್ಬರಲ್ಲೂ ಹೊಂದಾಣಿಕೆ ಸಾಧ್ಯವೇ ಇಲ್ಲ, ಪರಸ್ಪರ ಬೇರೆ ಬೇರೆಯಾಗಿರುವುದರಲ್ಲಿಯೇ ಇಬ್ಬರ ಒಳಿತಿದೆ ಎಂದು ಮನವರಿಕೆಯಾದಾಗ ಮಾತ್ರ ವಿಚ್ಛೇದನಕ್ಕೆ ಅಂತಿಮ ಮುದ್ರೆಯನ್ನು ಒತ್ತಲಾಗುತ್ತದೆ. ಅದು ಕೂಡ ಪತ್ನಿ ಮತ್ತು ಮಕ್ಕಳ ಆರ್ಥಿಕ ಭದ್ರತೆಯನ್ನು ಖಾತ್ರಿಪಡಿಸಿದ ನಂತರ. ಆದರೂ ಸಾಧ್ಯವಾದಷ್ಟು  ಪತಿ-ಪತ್ನಿಯರನ್ನು ಒಂದುಗೂಡಿಸಲು ಮೊದಲ ಪ್ರಾಶಸ್ತ್ಯವಿರುತ್ತದೆ.

ಪಶ್ಚಿಮ ಆಫ್ರಿಕಾದ ಮಾರೀಟಾನಿಯಾ ಗಣರಾಜ್ಯದಲ್ಲಿ ವಿವಾಹ ವಿಚ್ಛೇದನವನ್ನು ಡೈವೋರ್ಸ್ ಪಾರ್ಟಿಯ ಹೆಸರಿನಲ್ಲಿ ಹಬ್ಬದಂತೆ ಸಂಭ್ರಮಿಸಲಾಗುತ್ತದೆ! ಹೊಂದಿಕೊಳ್ಳಲಾಗದ ಸಂಬಂಧದಿಂದ ಹೊರಬಂದವಳ ಧೈರ್ಯವನ್ನು ಶ್ಲಾಘಿಸಿ, ಅವಳು ತನ್ನ ಮುಂದಿನ ಜೀವನಕ್ಕೆ ತಯಾರಾಗಿದ್ದಾಳೆಂದು ಸಾರುವ ಸಂದರ್ಭ ಅದಾಗಿರುತ್ತದೆ! ಇದಕ್ಕಾಗಿ ವಿಚ್ಛೇದನ ಮಾರುಕಟ್ಟೆಯೇ ಅಲ್ಲಿದೆ! ಬಹುಪತಿತ್ವ ಮತ್ತು ಬಹುಪತ್ನಿತ್ವಗಳೆರಡೂ ಮಾನ್ಯವಿರುವ ಇಲ್ಲಿ ಮದುವೆಯೊಂದು ಸಾಮಾನ್ಯ ವೈವಾಹಿಕ ವೃತ್ತಿ ಎಂದು ಪರಿಗಣಿಸಲ್ಪಟ್ಟಿದೆ. ಆ ದೇಶದಲ್ಲಿ ಹೊಸದಾಗಿ ಮದುವೆಯಾಗುವರಿಗಿಂತ ವಿಚ್ಛೇದನೆಗೊಂಡು ಮದುವೆ ಆಗುವ ಹೆಣ್ಣಿಗೆ ಹೆಚ್ಚಿನ ಬೇಡಿಕೆ ಇದೆ! ಹೀಗಾಗಿ ಇಲ್ಲಿನ ಮಹಿಳೆಯರು ತಮ್ಮ ಜೀವಿತ ಅವಧಿಯಲ್ಲಿ ೫ ರಿಂದ ೧೫ ಸಲ ವಿವಾಹವಾಗುತ್ತಾರೆ! ಆದ್ದರಿಂದ ಮಾರೀಟಾನಿಯಾ ಗಣರಾಜ್ಯದಲ್ಲಿ ವಿವಾಹಕ್ಕಿಂತ ವಿಚ್ಛೇದನಕ್ಕೇ ಹೆಚ್ಚು ಬೆಲೆ, ನೆಲೆ!

ವಿಚ್ಛೇದನವು ವಿದೇಶಗಳಲ್ಲಿ ಸಹಜ ಮತ್ತು ಸರ್ವೇಸಾಮಾನ್ಯ. ಆದರೆ ಭಾರತದಲ್ಲಿ ಮುಜುಗರದ ವಿಷಯ. ಅದು ಎರಡು ಕುಟುಂಬಗಳ ಮರ್ಯಾದೆಯ ಪ್ರಶ್ನೆ. ಭವಿಷ್ಯದ ಸಂಬಂಧಗಳ ಮೇಲೆಯೂ ಅದರ ಪರಿಣಾಮವಿರುತ್ತದೆ. ಹೀಗಾಗಿ ಯಾರೂ ವಿಚ್ಛೇದನಗಳನ್ನು ಸ್ವಾಗತಿಸುವುದಿಲ್ಲ. ಇಂತಹ ಪ್ರಕರಣಗಳು ಪತಿ-ಪತ್ನಿಯರನ್ನು ಒಂದುಗೂಡಿಸಿ ಸುಖಾಂತ್ಯವಾಗಬೇಕೆಂದು ಹೆಚ್ಚಿನವರು ಬಯಸುತ್ತಾರೆ. ಆ ಬಯಕೆಯಲ್ಲಿ ಇದ್ದಿದ್ದರಲ್ಲೇ ಸುಧಾರಿಸಿಕೊಂಡು ಹೋಗುವುದಕ್ಕೆ ಒತ್ತಾಸೆ ಇದೆ. ಆದರೆ ವಿದೇಶಗಳಲ್ಲಿ ವೈಯಕ್ತಿಕ ಹಕ್ಕು ಆಕಾಂಕ್ಷೆಗಳಿಗೆ ಹೆಚ್ಚಿನ ಬೆಲೆ ಇದೆ. ಮಕ್ಕಳು ಮತ್ತು ಆರೋಗ್ಯಕರ ಕುಟುಂಬದ ದೃಷ್ಠಿಯಿಂದ ಭಾರತೀಯ ದೃಷ್ಟಿಕೋನ ಸರಿಯೆನಿಸಿದರೆ ವೈಯುಕ್ತಿಕ ದೃಷ್ಟಿಯಿಂದ ನೋಡಿದಾಗ ವಿದೇಶೀ ಚಿಂತನೆ ಸ್ವಾರ್ಥವೆನಿಸುತ್ತದೆ. ಅಂದಹಾಗೆ ಇತ್ತೀಚೆಗೆ ಭಾರತೀಯ ವೈವಾಹಿಕ ಮತ್ತು ಕೌಟುಂಬಿಕ ಪದ್ಧತಿಗಳನ್ನು ಅನೇಕ ವಿದೇಶಿಯರು ಮೆಚ್ಚಿಕೊಳ್ಳುತ್ತಿದ್ದಾರೆ. ರಶಿಯಾ, ಪೋಲಂಡ್ ಮುಂತಾದ ದೇಶಗಳ ಯುವಕ-ಯುವತಿಯರು ಭಾರತದವರನ್ನು ಪ್ರೀತಿಸಿ, ಭಾರತಕ್ಕೆ ಬಂದು ಭಾರತೀಯ ಶೈಲಿಯಲ್ಲೇ ಮದುವೆಯಾಗುತ್ತಿದ್ದಾರೆ. ಆದರೆ ಭಾರತೀಯ ಯುವ ಪೀಳಿಗೆಯು ವಿದೇಶಿಗರ ಸ್ವಚ್ಛಂದಕ್ಕೆ ಮಾರು ಹೋಗಿ ವಿಚ್ಛೇದನ ಕೊಡುತ್ತಿದ್ದಾರೆ! ಎಂತಹ ವಿಪರ್ಯಾಸ ನೋಡಿ!