ಕಪ್ಪತಗುಡ್ಡದ ಹಸಿರ ಖುಷಿ… ದೇವ-ದಾರಿಯೂ ಉಳಿಯಲಿ

Advertisement

ಇದೆಂಥ ಲಜ್ಜೆಗೆಟ್ಟ ಕೃತ್ಯ? ದೆಹಲಿ ಅರಾವಳಿ ಚಿರತೆ ವನ್ಯಜೀವಿ ಕಾರಿಡಾರ್‌ನಲ್ಲಿ ೧೧೦೦ ಮರಗಳ ಮಾರಣ ಹೋಮ ನಡೆಸಿದರ‍್ಯಾರು? ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದರ‍್ಯಾರು? ದೆಹಲಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಲೆಫ್ಟಿನೆಂಟ್ ಗವರ್ನರ್‌ಗೆ ಸುಪ್ರೀಂ ಕೋರ್ಟ್ ಈ ಚಾಟಿ ಬೀಸಿತು.

೧೧೦೦ ಮರಗಳನ್ನು ಚಿರತೆ ವನ್ಯಜೀವಿ ಕಾರಿಡಾರ್ ಆಗಿರುವ ದೆಹಲಿ ರಿಜ್ ಅರಣ್ಯ ಪ್ರದೇಶದಲ್ಲಿ ಕಡಿಯಲು ಲೆಫ್ಟಿನೆಂಟ್ ಗವರ್ನರ್ ವಿನಯ್ ಸಕ್ಸೇನಾ ನಿರ್ದೇಶನ ನೀಡಿದ್ದಕ್ಕೆ ಸೋಮವಾರವಷ್ಟೇ ತರಾಟೆ ತೆಗೆದುಕೊಂಡಿತ್ತು. ಲೆಫ್ಟಿನೆಂಟ್ ಗವರ್ನರ್ ಅವರೇ ನೀವೇ ನಿರ್ದೇಶನ ನೀಡಿ, ನ್ಯಾಯಾಲಯದ ಆದೇಶ ಉಲ್ಲಂಘಿಸಿ ಮರಗಳ ಮಾರಣ ಹೋಮ ನಡೆಸಿರುವುದಕ್ಕೆ ನಮ್ಮಲ್ಲಿರುವ ದಾಖಲೆ ಹೇಳುತ್ತದೆ; ಪರಿಸರ ರಕ್ಷಣೆಯ ವಿಚಾರದಲ್ಲಿ ಇದನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ… ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು ಹೀಗೆಂದು ತುಂಬ ಆಕ್ರೋಶಿತರಾಗಿ ಬಹಿರಂಗ ಪೀಠದಲ್ಲಿ ತರಾಟೆಗೆ ತೆಗೆದುಕೊಂಡರು. ಪೀಠಕ್ಕೆ ಸಿಟ್ಟು ಬರಲು ಕಾರಣ, ಸರ್ವೋಚ್ಚ ನ್ಯಾಯಾಲಯದ ಆದೇಶವಿದ್ದರೂ, ಮರಗಳನ್ನು ಕಡಿಯುವುದಕ್ಕೆ ನಿರ್ಬಂಧ ಇದ್ದರೂ, ಲೆಫ್ಟಿನೆಂಟ್ ಗವರ್ನರ್ ಭೇಟಿ ನೀಡಿ ದೆಹಲಿ ವೃಕ್ಷ ಸಂರಕ್ಷಣಾ ಕಾಯ್ದೆಯನ್ನೇ ಉಲ್ಲಂಘಿಸಿ ಮರ ಕಡಿಯಲು ಹೇಳಿದ್ದು!

ಎಷ್ಟು ಧೈರ್ಯ ನೋಡಿ. ದೆಹಲಿಯಲ್ಲಿ ದಟ್ಟ ಹೊಗೆ. ಉಸಿರಾಡಲೂ ಸಿಗದ ಆಮ್ಲಜನಕ. ಮಂಜು. ಅತೀ ಹೆಚ್ಚಾದ ಕಾರ್ಬನ್ ಡಯಾಕ್ಸೆಡ್. ಹೀಗೆ ಎಲ್ಲ ಬಗೆಯ ಕಲುಷಿತ ವಾತಾವರಣದಲ್ಲಿ ಅಲ್ಪಸ್ವಲ್ಪ ಮರಗಳು ಉಳಿದಿದ್ದರೆ ಅದು ಸರ್ವೋಚ್ಚ ನ್ಯಾಯಾಲಯ ರೂಪಿಸಿದ ದೆಹಲಿ ಮರ ಸಂರಕ್ಷಣಾ ಕಾಯ್ದೆ. ಅದನ್ನೂ ಗವರ್ನರ್ ಉಲ್ಲಂಘಿಸಿ ನ್ಯಾಯಾಲಯವನ್ನೇ ಅಪಹಾಸ್ಯ ಮಾಡಿದಂತಿತ್ತು. ಇಷ್ಟಕ್ಕೂ ನಿಲ್ಲದ ನ್ಯಾಯಮೂರ್ತಿಗಳ ಕೋಪ `ಲಜ್ಜೆಗೆಟ್ಟವರು’ ಎಂಬ ಪದವನ್ನು ಬಳಸಿತು.

ದೆಹಲಿಯಲ್ಲಿ ೧೧೦೦ ಮರ ಕಡಿದು ಉರುಳಿಸಿದರೆ ದಕ್ಷಿಣ ಭಾರತದ ಶುದ್ಧ ಗಾಳಿಯ ತಾಣ, ಔಷಧೀಯ ವನಸ್ಪತಿಗಳ ಬೀಡು, ಜೀವ ವೈವಿಧ್ಯದ ಸಂಪತ್ತು ಮೇಳೈಸಿದ ಕಪ್ಪತಗುಡ್ಡದಲ್ಲಿ ಕೂಡ ಇದೇ ಸೋಮವಾರ ನ್ಯಾಯಾಲಯದ ಅಭಯ ದೊರೆತಿದೆ. ಕಪ್ಪತಗುಡ್ಡದ ಸುತ್ತ ಕಲ್ಲು ಕ್ವಾರಿ ಗಣಿಗಾರಿಕೆ ಮತ್ತು ಮರದ ದಿಮ್ಮಿ, ಕಬ್ಬಿಣದ ಅದಿರು ಸಾಗಿಸುವ ಪಟ್ಟಭದ್ರರ ಹುನ್ನಾರಕ್ಕೆ ರಾಜ್ಯ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಗಾರಿಯಾ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.ದಿಕ್ಷೀತ್ ಅವರು ಕಪ್ಪತಗುಡ್ಡಕ್ಕೆ ಅಭಯ ನೀಡಿದ್ದಾರೆ.

ಕಪ್ಪತಗುಡ್ಡದ ಮೀಸಲು ಅರಣ್ಯ ಪ್ರದೇಶದ ಒಂದು ಕಿಮೀ ವ್ಯಾಪ್ತಿಯಲ್ಲಿ ಯಾವುದೇ ಗಣಿಗಾರಿಕೆ, ಬ್ಲಾಸ್ಟಿಂಗ್, ಕಲ್ಲು ಕ್ವಾರಿ ಚಟುವಟಿಕೆಗಳಿಗೆ ಅನುಮತಿ ನೀಡಲು ಆಗದು ಎಂದು ಸ್ಪಷ್ಟವಾಗಿ ನಿರ್ದೇಶನ ನೀಡಿ ಅದಿರು ಸಾಗಿಸುವ, ಕಲ್ಲು ಪುಡಿಗೈಯುವವರ ಬಾಯಿಗೆ ಮಣ್ಣು ತುಂಬಿತು.

ಕಪ್ಪತಗುಡ್ಡ ೨೪೪.೧೫ ಚದುರ ಕಿಮೀ ವಿಸ್ತೀರ್ಣ ಹೊಂದಿದೆ. ಯುನೆಸ್ಕೋ ಮಾನ್ಯತೆ ಪಡೆದ ಐತಿಹಾಸಿಕ ತಾಣ. ೨೯೫ ಜಾತಿಯ ಔಷಧೀಯ ಸಸ್ಯಗಳಿವೆ. ವನ್ಯಜೀವಿ ಧಾಮವೇ ೩೨,೩೪೬ ಹೆಕ್ಟೇರ್ ವಿಸ್ತೀರ್ಣ ಹೊಂದಿದೆ. ಈ ಗುಡ್ಡ ಉತ್ತರ ಕರ್ನಾಟಕ ಅಷ್ಟೇ ಅಲ್ಲ, ದಕ್ಷಿಣ ಭಾರತದ ಮಳೆ, ಹವಾಮಾನ, ಪರಿಸರ ಸಮತೋಲನದ ಬೃಹತ್ ಬೆಟ್ಟ. ದುರಂತ ಎಂದರೆ ಈ ಬೆಟ್ಟದ ಮಣ್ಣು ಕೆಂಪು ಅದಿರು (ಮ್ಯಾಂಗನೀಸ್). ಇಲ್ಲಿಯ ಕಲ್ಲು ಕಬ್ಬಿಣಕ್ಕಿಂತ ಬಿರುಸು-ಸೆಡವು. ಇಲ್ಲಿಯ ಮರಗಳು ನೇರ ಮತ್ತು ಕೆಂಚು.

ಈ ಎಲ್ಲ ವಿಶೇಷತೆಗಳನ್ನು ಹೊಂದಿರುವುದರಿಂದಲೇ ಕಾಡುಗಳ್ಳರ, ಗಣಿಗಳ್ಳರ ಕಣ್ಣು ಕಪ್ಪತಗುಡ್ಡದ ಮೇಲೆ ಬಿದ್ದಿದೆ. ಕಪ್ಪತಗುಡ್ಡದ ಸಂರಕ್ಷಣೆಗಾಗಿಯೇ ಅನೇಕ ಹೋರಾಟಗಳು ನಡೆದಿವೆ. ಅನೇಕರು ಜೀವನದುದ್ದಕ್ಕೂ ಈ ಗುಡ್ಡಕ್ಕಾಗಿಯೇ ತಪಸ್ಸಿನ ರೀತಿ ಬಾಳಿ, ಸಂರಕ್ಷಿಸಿಕೊಂಡು ಬಂದಿದ್ದಾರೆ. ಇಷ್ಟಾಗಿಯೂ ಇದನ್ನು ಪುಡಿಗಟ್ಟಿಸುವ, ಇಡೀ ಕಪ್ಪತಗುಡ್ಡವನ್ನೇ ನೆಲಸಮಗೊಳಿಸುವ ದುಷ್ಕೃತ್ಯ, ದುರಹಂಕಾರ ಕಳೆದ ಐದಾರು ದಶಕಗಳಿಂದ ನಡೆದೇ ಇದೆ.

ನಂದಿವೂರು ಮಠದ ಸ್ವಾಮೀಜಿಯಂಥವರು ಅದೇ ಗುಡ್ಡದಲ್ಲಿ ಆಶ್ರಮ ಕಟ್ಟಿ, ಇಡೀ ಅರಣ್ಯಕ್ಕೆ ಬೇಸಿಗೆಯಲ್ಲಿ ನೀರುಣಿಸಿ, ವಿವಿಧ ವನಸ್ಪತಿ ಬೆಳೆಸಿದವರು. ಕಪ್ಪತಗುಡ್ಡದ ಸಂರಕ್ಷಣೆ ಎಂದರೆ ಬೆಂಕಿಯೊಂದಿಗೆ ಸೆಣಸಾಟ. ಇಡೀ ಕಾಡು ಧ್ವಂಸಗೊಳಿಸಲು, ಬೇಸಿಗೆ ಬಂತೆಂದರೆ ಬೆಂಕಿ ಇಟ್ಟು ಅರಣ್ಯ ಭಸ್ಮ ಮಾಡುವ ದುಷ್ಕರ್ಮಿಗಳ ದುಷ್ಟ ಹೇತು ಪಡೆಯೇ ಇದೆ. ಅವರಿಗೆಲ್ಲ ಸಂರಕ್ಷಿಸುವ ಪ್ರಬಲ ರಾಜಕೀಯ ಮತ್ತು ಅಧಿಕಾರಿಗಳ ಕೃಪಾಪೋಷಣೆ ಇದೆ. ಇಷ್ಟಾಗಿಯೂ ಕಪ್ಪತಗುಡ್ಡ ಉಳಿದಿದೆ ಎಂದರೆ ಅದು ಹೋರಾಟದ ಫಲವೇ.

ಇಲ್ಲಿಯ ಗುಡ್ಡದ ಮಡಿಲಲ್ಲಿ ಕಲ್ಲು ಗಣಿ ಮತ್ತು ಕ್ವಾರಿಗೆ ಪರವಾನಗಿ ಪಡೆಯಲು ನಿರಂತರ ಪ್ರಯತ್ನ ನಡೆಯುತ್ತಲೇ ಇತ್ತು. ಇಷ್ಟಾಗಿಯೂ ಇದನ್ನು ಉಳಿಸುವಲ್ಲಿ ಮತ್ತು ಈ ಗಣಿ ಕಂಟಕ ನಿವಾರಿಸಿ ಸಂರಕ್ಷಿಸುವಲ್ಲಿ ಬಹುದೊಡ್ಡ ಹೋರಾಟವೇ ನಡೆಯಿತು.

ಸುಮಾರು ೧೩೧೯ ಹೆಕ್ಟೇರ್ ಪ್ರದೇಶವನ್ನು ವನ್ಯಜೀವಿ ಧಾಮದಿಂದ ಮುಕ್ತಗೊಳಿಸಬೇಕೆಂಬ ದುಷ್ಟ ಪ್ರಯತ್ನ ನಿರಂತರ ನಡೆಯುತ್ತಲೇ ಇತ್ತು. ಹೈಕೋರ್ಟಿನ ವಿಭಾಗೀಯ ಪೀಠ ನೀಡಿದ ಆದೇಶದಿಂದ ಗುಡ್ಡ ಸಂರಕ್ಷಣೆಗೆ ಒಳಗಾದಂತಾಯಿತು ಎನಿಸುತ್ತದೆ. ಅಭಿವೃದ್ಧಿಯಾಗಬೇಕೆನ್ನುತ್ತೀರಿ. ಆದರೆ ಈ ಅಭಿವೃದ್ಧಿಗೆ ಕಲ್ಲು ಮಣ್ಣು ಬೇಡವೇ? ಎಲ್ಲಿ ಸಿಗುವುದು ಅವೆಲ್ಲ? ಕಪ್ಪತಗುಡ್ಡದ ಕೆಲಭಾಗ ಬಗೆದರೆ ಏನಾದೀತು? ಎಂದು ಸೊಕ್ಕಿನಿಂದ ಪ್ರಶ್ನಿಸಿದವರಿಂದ ಈಗಂತೂ ಸದ್ಯ ಕಪ್ಪತಗುಡ್ಡ ಉಳಿದಂತಾಯಿತು.

ನಿಜ. ಅಭಿವೃದ್ಧಿ ಮತ್ತು ಪರಿಸರ ಎರಡೂ ತದ್ವಿರುದ್ಧ. ಆದರೆ ಅಭಿವೃದ್ಧಿ ಎಂದರೆ ಏನು? ಪರಿಸರ ಅಂದರೆ ಏನು ಎನ್ನುವ ಸ್ಪಷ್ಟ ಮತ್ತು ನಿಖರ ಕಲ್ಪನೆ ಇದ್ದರೆ ಕಪ್ಪತಗುಡ್ಡದಂತಹ ಸಾವಿರಾರು ಅರಣ್ಯ ಪ್ರದೇಶಗಳನ್ನು ಉಳಿಸಬಹುದು. ಲಕ್ಷಾಂತರ ಮರಗಳ ಮಾರಣ ಹೋಮ ತಪ್ಪಿಸಬಹುದು. ಇಷ್ಟಾಗಿಯೂ ಕಪ್ಪತಗುಡ್ಡದ ಮೇಲಿನ ಕಾಕದೃಷ್ಟಿಯಂತೂ ತಪ್ಪಿದ್ದಲ್ಲ.

ಈ ಮಧ್ಯೆ ಬಳ್ಳಾರಿ ಜಿಲ್ಲೆಯ ದೇವದಾರಿ ಅರಣ್ಯದ ಕೂಗು.

ದೇವದಾರಿ ಅರಣ್ಯದಲ್ಲಿ ಕುದುರೆಮುಖ ಕಬ್ಬಿಣ ಅದಿರು ಕಂಪನಿಗೆ ೪೦೧ ಹೆಕ್ಟೇರ್ ಪ್ರದೇಶವನ್ನು ಗುತ್ತಿಗೆ ನೀಡುವ ಪ್ರಸ್ತಾವನೆಗೆ ಇದೇ ರಾಜ್ಯದವರಾದ ಕೇಂದ್ರ ಉಕ್ಕು ಮತ್ತು ಬೃಹತ್ ಉದ್ಯಮ ಸಚಿವ ಎಚ್.ಡಿ.ಕುಮಾರಸ್ವಾಮಿ ಒಪ್ಪಿಗೆ ಸೂಚಿಸಿದ್ದಾರೆ. ರಾಜ್ಯ ಮತ್ತು ಕೇಂದ್ರದ ನಡುವಿನ ಸಂಘರ್ಷಕ್ಕೆ ದೇವದಾರಿ ರಹದಾರಿ ಆದೀತು! ಇಷ್ಟಕ್ಕೂ ದೇವದಾರಿಯ ಕುಮಾರಸ್ವಾಮಿ ಗುಡ್ಡ ಪ್ರಾಕೃತಿಕ ಸಂಪತ್ತಿನ ಆಗರ. ರಾಜ್ಯ ಕೇಂದ್ರ ಸಂಘರ್ಷದಲ್ಲಿ ಬಹುಶಃ ಬೆತ್ತಲಾದೀತೇನೋ? ಕುದುರೆಮುಖ ಕಬ್ಬಿಣ ಅದಿರು ಕಂಪನಿ ಕುದುರೆಮುಖದ ಸುತ್ತ ಎಲ್ಲವನ್ನೂ ಬಗೆದು, ಆ ನಂತರ ಒಂದಿಷ್ಟು ಬೆಟ್ಟಗುಡ್ಡಗಳತ್ತ ದೃಷ್ಟಿ ಹಾಯಿಸಿ, ಕೊನೆಗೆ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದ ಅನ್ವಯವೇ ಸ್ವಲ್ಪ ಕಾಲದಿಂದ ತಟಸ್ಥವಾಗಿ ಉಳಿದಿದೆ. ಕೆಐಓಸಿಎಲ್ ಕುದುರೆಮುಖದಲ್ಲಿ ೨೦೦೬ರಲ್ಲಿಯೇ ಗಣಿಗಾರಿಕೆ ಚಟುವಟಿಕೆ ಸ್ಥಗಿತಗೊಳಿಸಿತ್ತು. ಹಾಗಾಗಿ ತನ್ನ ಕಾರ್ಖಾನೆಗೆ ಉತ್ತರಾಖಂಡ, ಛತ್ತೀಸಗಡದಿಂದ ಅದಿರು ಖರೀದಿಸುತ್ತಿದೆ.

ದೇವದಾರಿಗೆ ಇತಿಹಾಸವಿದೆ. ಹಾಗೇ ಆಮ್ಲಜನಕದ ಬ್ಯಾಂಕ್ ಎಂದೇ ಖ್ಯಾತಿ ಪಡೆದಿರುವ ಹೆಗ್ಗಳಿಕೆ ಇದರದ್ದು. ನೋಡಲು ಕುರುಚಲು ಸಸ್ಯಗಳಿದ್ದರೂ ಅಲ್ಲಿಂದ ಬರುವ ಶುದ್ಧ ಗಾಳಿ ಜೀವಕಣಗಳಿಗೆ ಆರೋಗ್ಯಕರ. ಶ್ರೀಗಂಧ, ರಕ್ತಚಂದನ, ಬಿದಿರು-ಹೊನ್ನೆ-ಬೀಟೆ ಹೀಗೆ ಅಮೂಲ್ಯ ಸಸ್ಯ ಸಂಕುಲವೇ ಅಲ್ಲಿದೆ. ಇದೇ ಕಾರಣಕ್ಕೇ ಅಲ್ಲವೇ, ಹಿಂದೆ ಇದೇ ಕುದುರೆಮುಖ ಅದಿರು ಕಂಪನಿಗೆ ದೇವದಾರಿಯಲ್ಲಿ ಗಣಿ ಆರಂಭಿಸಲು ನಿರಾಕರಿಸಿದ್ದು!?

ದೇವದಾರಿಯಲ್ಲಿ ಕುದುರೆಮುಖ ಕಂಪನಿ ಗಣಿ ಬಗೆದು ಧೂಳೆಬ್ಬಿಸಲು ವಿರೋಧಿಸುವ ಹೋರಾಟಕ್ಕೆ ಮೂರು ದಶಕಗಳ ಇತಿಹಾಸವೂ ಇದೆ. ಸ್ವತಃ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಗಣಿಗಾರಿಕೆಗೆ ಪರವಾನಗಿ ನಿರಾಕರಿಸಿದವರು. ತಮಾಷೆ ಎಂದರೆ ಅವರೇ ಕೈಗಾರಿಕಾ ಮಂತ್ರಿಯಾಗಿ ಸಹಿ ಹಾಕಿದ ಪ್ರಥಮ ಕಡತ ಕೆಐಓಸಿಎಲ್‌ಗೆ ದೇವದಾರಿ ಗಣಿಗಾರಿಕೆ ಪರವಾನಗಿಯದ್ದು!!

ದೇವದಾರಿಯ ಗಣಿ ತೋಡುವ ಯೋಜನೆಗೆ ಸಮಾಜ ಪರಿವರ್ತನಾ ಸಮುದಾಯ, ಜನಸಂಗ್ರಾಮ ಪರಿಷತ್ತಿನಂತಹ ಸಂಘಟನೆಗಳು ಸರ್ವೋಚ್ಚ ನ್ಯಾಯಾಲಯದಲ್ಲೂ ಆಕ್ಷೇಪಿಸಿವೆ. ವಿಚಾರಣೆ ಹಂತದಲ್ಲಿದೆ. ಹಾಗಿದ್ದೂ ಕುಮಾರಸ್ವಾಮಿ ಒಪ್ಪಿಗೆ ಸೂಚಿಸಿದ್ದೇಕೆ? ಈ ಬಗ್ಗೆ ಅವರೇ ಹೇಳುವಂತೆ ಕುದುರೆಮುಖ ಕಂಪನಿ ಸಂರಕ್ಷಿಸುವುದು ಸರ್ಕಾರದ ಕರ್ತವ್ಯ. ದೂರದ ಛತ್ತಿಸಗಡ, ಉತ್ತರಾಖಂಡದಿಂದ ಮ್ಯಾಂಗನೀಸ್ ಅದಿರು ಬರುತ್ತಿದೆ. ನಮ್ಮಲೇ ಇದೆ. ಏಕೆ ಬಳಸಿಕೊಳ್ಳಬಾರದು ಎನ್ನುವ ಉದ್ದೇಶ ಹೊಸ ಕೈಗಾರಿಕಾ ಸಚಿವರದ್ದು.

ದೇವದಾರಿ ಅರಣ್ಯದಲ್ಲಿ ಗಣಿಗಾರಿಕೆಗೆ ಅವಕಾಶ ಇಲ್ಲ ಎಂದು ಶಿಫಾರಸು ಮಾಡಿದವರಲ್ಲಿ ಬಿಜೆಪಿ- ಜೆಡಿಎಸ್ ಸರ್ಕಾರವೂ ಇದೆ. ರಾಜಕೀಯವಾಗಿ ಈ ವಿವಾದ ಸಾಕಷ್ಟು ಧೂಳೆಬ್ಬಿಸಲಿದೆ.

೧೧೦೦ ಮರ ಕಡಿದ ಲೆಫ್ಟಿನೆಂಟ್ ಗವರ್ನರ್‌ಗೆ ಲಜ್ಜೆಗೇಡಿ ವರ್ತನೆ ಎಂದು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್, ದೇವದಾರಿ ಅರಣ್ಯ ಬಗೆಯಲು ಪರವಾನಗಿ ನೀಡೀತೇ? ಈಗಾಗಲೇ ಎಸ್.ಆರ್.ಹಿರೇಮಠ ಸರ್ವೋಚ್ಚ ನ್ಯಾಯಾಲಯ ಮತ್ತು ಹಸಿರು ನ್ಯಾಯಪೀಠದ ಬಾಗಿಲು ತಟ್ಟಿದ್ದಾರೆ. ಅವರ ಹೋರಾಟದ ಫಲವೇ ಬಳ್ಳಾರಿಯ ಗಣಿ ಲಾಬಿ ಮಣ್ಣು ಮುಕ್ಕಲು ಮತ್ತು ಅಲ್ಲಿಯ ಜನರಿಗೆ ನೆಮ್ಮದಿ ತರಲು ಕಾರಣ.ಆಳುವ ಪ್ರಭುಗಳಿಗೆ ದೂರದೃಷ್ಟಿ, ಸೂಕ್ಷ್ಮ ದೃಷ್ಟಿ ಇಲ್ಲದಿದ್ದರೆ ಏನಾದೀತು ಎನ್ನುವುದಕ್ಕೆ, ನಮ್ಮಲ್ಲಿಯ ಇಂತಹ ಅಮೂಲ್ಯ ಜೀವ ವೈವಿಧ್ಯ ಉಳಿಸಿಕೊಳ್ಳಲಾಗದ್ದಕ್ಕೆ ನಿದರ್ಶನವಿದು. ಕುದುರೆಮುಖ ಕಂಪನಿಗೆ ದೇವದಾರಿ ಭೂಮಿ ನೀಡುವ ಕಡತವೇ ಪ್ರಥಮ ಪ್ರಾಧಾನ್ಯವೇ? ಅಥವಾ ಆಗಲಿ ಬಿಡಿ, ರಾಜಕೀಯ ಸಂಘರ್ಷ ಎನ್ನುವ ಉದ್ದೇಶವೋ? ಇಲ್ಲವೇ ತಪ್ಪು ಮಾಹಿತಿಯ ಪರಿಣಾಮವೋ?ಇಷ್ಟಕ್ಕೂ ಬಸವಳಿದದ್ದು, ಬಸವಳಿಯಲಿರುವುದು ಮಾತ್ರ ಸುಂದರ ಹಸಿರು ಪರಿಸರ…!

ಶೇಕಡಾ ೨೭ಕ್ಕೆ ಕುಸಿದಿರುವ ಅರಣ್ಯ ಪ್ರದೇಶದ ಇನ್ನಷ್ಟು ನಾಶಕ್ಕೆ ಅವಕಾಶ ಮಾಡಿಕೊಡದಿರಲಿ ಎನ್ನುವುದು ಜನಾಶಯ.