ಪರಿಹಾರ ಹಂಚಿಕೆಯಲ್ಲಿ ತಾರತಮ್ಯ: ವೃದ್ಧ ಆತ್ಮಹತ್ಯೆ

sucide
Advertisement

ಧಾರವಾಡ: ಅತೀವೃಷ್ಟಿಯಿಂದ ಬಿದ್ದ ಮನೆಯ ಪರಿಹಾರ ಹಂಚಿಕೆಯಲ್ಲಿ ತಾರತಮ್ಯ ಆರೋಪ ಕೇಳಿಬಂದಿದ್ದು, ಕೊನೆಯ ಹಂತದಲ್ಲಿ ಬಿ ಕೆಟಗೇರಿ ಪಟ್ಟಿಯಲ್ಲಿದ್ದ ಹೆಸರನ್ನು ಸಿ ಕೆಟಗೇರಿಗೆ ಸೇರಿಸಿದ್ದರಿಂದ ಮನನೊಂದ ವೃದ್ಧ ಸಂತ್ರಸ್ತನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲ್ಲೂಕಿನ ಮಾದನಬಾವಿ ಗ್ರಾಮದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ.
ಭೀಮಪ‍್ಪ ಬಸಪ್ಪ ಪಾಟೀಲ(74) ಮೃತಪಟ್ಟವರು. ಕಳೆದ ಒಂದು ತಿಂಗಳ ಹಿಂದೆ ಸುರಿದ ಧಾರಕಾರ ಮಳೆಗೆ ಮೃತನ ಮನೆ ಹಾನಿಗೀಡಾಗಿತ್ತು. ಈ ಸಂಬಂಧ ಸ್ಥಳಕ್ಕೆ ಭೇಟಿ ನೀಡಿದ ಗ್ರಾಮ ಲೆಕ್ಕಾಧಿಕಾರಿ ಮತ್ತು ಇತರ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿ, ₹5 ಲಕ್ಷ ಪರಿಹಾರದ ಬಿ2 ಕೆಟಗೇರಿಯಡಿ ಹೆಸರು ಸೇರಿಸಿದ್ದರು. ಆದರೆ, ಏಕಾಏಕಿ ಅ.27ರಂದು ₹50 ಸಾವಿರ ಪರಿಹಾರದ ಸಿ ಕೆಟಗೇರಿಯಲ್ಲಿ ಸೇರಿಸಿದ್ದಾರೆ. ಒಂದು ಕಡೆ ಕಾಯಿಲೆ ಮತ್ತೊಂದು ಪರಿಹಾರದಲ್ಲಿ ಆದ ತಾರತಮ್ಯದಿಂದ ಮನನೊಂದ ಭೀಮಪ್ಪ, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  
ನಗರದ ಜಿಲ್ಲಾಸ್ಪತ್ರೆ ಬಳಿ ಶವಾಗಾರದ ಎದುರು ಜಮಾಯಿಸಿದ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. 1 ತಾಸಿಗೂ ಅಧಿಕ ಹೆಚ್ಚು ಕಾಲ ಮರಣೋತ್ತರ ಪರೀಕ್ಷೆಗೆ ಅವಕಾಶ ನೀಡದೇ, ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು. ಕುಟುಂಬದವರಿಗೆ ₹25 ಲಕ್ಷ ಪರಿಹಾರ ಹಾಗೂ ಮನೆಹಾನಿ 5 ಲಕ್ಷ ಪರಿಹಾರ ನೀಡಬೇಕು ಎಂದು ಪಟ್ಟುಹಿಡಿದರು.
ನಂತರ ಸ್ಥಳಕ್ಕೆ ಬಂದ ತಹಶೀಲ್ದಾರ್ ಸಂತೋಷ ಹಿರೇಮಠ ಅವರನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು, ನೈಜ ಫಲಾನುಭವಿಗೆ ಪರಿಹಾರ ಒದಗಿಸಬೇಕಾದ ಜನಪ್ರತಿನಿಧಿಗಳು, ಅಧಿಕಾರಿಗಳು ತಾರತಮ್ಯ ಎಸಗಿದ್ದು ಅಕ್ಷಮ್ಯ. ಬಿ ಕೆಟಗೇರಿಯಲ್ಲಿದ್ದ ಹೆಸರು ಸಿ ಗೆ ಸೇರಿಸಿದ್ದು ಏಕೆ? ಯಾರ ಕುಮ್ಮಕ್ಕಿನಿಂದ ಪಟ್ಟಿ ಬದಲಾಯಿಸಿದ್ದೀರಿ? ಎಂದು ಪ್ರಶ್ನೆಗಳ ಸುರಿಮಳೆಗೈದರು.
ನಂತರ ಸ್ಪಷ್ಟನೆ ನೀಡಿದ ತಹಶೀಲ್ದಾರ್ ಸಂತೋಷ ಹಿರೇಮಠ, ಪರಿಹಾರ ಹಂಚಿಕೆಯಲ್ಲಿ ಆಗಿದೇ ಎನ್ನಲಾದ ತಾರತಮ್ಯದ ಕುರಿತು ಮರುಪರೀಶಿಲನೆ ನಡೆಸಿ, ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದರು. ಆಗ ಗ್ರಾಮಸ್ಥರು ಮರಣೋತ್ತರ ಪರೀಕ್ಷೆಗೆ ಅನುವು ಮಾಡಿಕೊಟ್ಟರು. ಈ ಸಂಬಂಧ ಗರಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.