ಭಗತ್‌ಸಿಂಗ್‌ ಪಾತ್ರದ ಅಭ್ಯಾಸದ ವೇಳೆ – ಬಾಲಕ ನೇಣಿಗೆ ಶರಣು

ಚಿತ್ರದುರ್ಗ
Advertisement

ಚಿತ್ರದುರ್ಗ: ನಗರದ ಎಸ್.ಎಲ್.ವಿ ಶಿಕ್ಷಣ ಸಂಸ್ಥೆಯಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸಂಜಯಗೌಡ ಭಗತ್ ಸಿಂಗ್ ನೇಣುಗಂಬಕ್ಕೆ ಏರುವ ಪಾತ್ರದ ಅಭ್ಯಾಸದ ವೇಳೆ ಆಕಸ್ಮಿಕವಾಗಿ ನೇಣು ಹಾಕಿಕೊಂಡು ಮೃತಪಟ್ಟ ಘಟನೆ ನಗರದ ಕೆಳಗೋಟೆಯಲ್ಲಿ ನಡೆದಿದೆ.
ನಾಗರಾಜ್ ಮತ್ತು ಭಾಗ್ಯಲಕ್ಷ್ಮಿ ದಂಪತಿಯ ಪುತ್ರ ಸಂಜಯ್ ಗೌಡ (12) ಮೃತ ವಿದ್ಯಾರ್ಥಿ. ನಗರದ ಎಸ್.ಎಲ್.ವಿ ಶಿಕ್ಷಣ ಸಂಸ್ಥೆಯಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು. ಶಾಲೆಯಲ್ಲಿ ತರಬೇತಿ ಬಳಿಕ ಮನೆಗೆ ಬಂದಿರೋ ಬಾಲಕ ಮನೆಯಲ್ಲೂ ಪ್ರಾಕ್ಟೀಸ್‌ ಮಾಡಲು ಮುಂದಾಗಿದ್ದು, ಇದಕ್ಕೆ ಸಿದ್ಧತೆ ಮಾಡಿಕೊಳ್ಳುವ ಸಮಯದಲ್ಲಿ ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ನವೆಂಬರ್‌ 1ರಂದು ರಾಜ್ಯೋತ್ಸವ ಸಮಾರಂಭದಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂಜಯ್, ಭಗತ್ ಸಿಂಗ್ ಪಾತ್ರ ಮಾಡಬೇಕಿತ್ತು. ‘ಶನಿವಾರ ರಾತ್ರಿ ಮನೆಯಲ್ಲಿ ಪೋಷಕರು ಇಲ್ಲದೇ ಇರುವಾಗ ಸಂಜಯ್, ಭಗತ್ ಸಿಂಗ್ ಪಾತ್ರ ಅಭ್ಯಾಸ ಮಾಡುತ್ತಿದ್ದನು. ನೇಣಿಗೆ ಕೊರಳೊಡ್ಡುವ ಸಂದರ್ಭದ ಅಭಿನಯಕ್ಕೆ ಫ್ಯಾನಿಗೆ ನೂಲಿನ ಹಗ್ಗ ಕಟ್ಟಿಕೊಂಡಿದ್ದನು. ಸ್ಟೂಲ್ ಮೇಲೆ ನಿಂತು ಮುಖವನ್ನು ಟೋಪಿಯಿಂದ ಮುಚ್ಚಿಕೊಂಡು ಅಭ್ಯಾಸ ಮಾಡುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಸ್ಟೂಲ್ ಜಾರಿ ನೇಣು ಬಿಗಿದುಕೊಂಡಿದೆ’ ಎಂದು ಬಡಾವಣೆ ಠಾಣೆಗೆ ನೀಡಿದ ದೂರಿನಲ್ಲಿ ಪೋಷಕರು ತಿಳಿಸಿದ್ದಾರೆ.