ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿಗೆ 20 ವರ್ಷ ಜೈಲು

ನ್ಯಾಯ
Advertisement

ದಾವಣಗೆರೆ: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿಗೆ 20 ವರ್ಷಗಳ ಜೈಲು ಶಿಕ್ಷೆ, 15ಸಾವಿರ ದಂಡ ವಿಧಿಸಿದ್ದಲ್ಲದೇ ಸಂತ್ರಸ್ತ ಬಾಲಕಿಗೆ 6.50ಲಕ್ಷ ಪರಿಹಾರ ನೀಡುವಂತೆ ದಾವಣಗೆರೆ ಜಿಲ್ಲಾ ಮತ್ತು ಸತ್ರ ಮಕ್ಕಳ ಸ್ನೇಹಿ (ಫೋಕ್ಸೋ) ನ್ಯಾಯಾಲಯ ಆದೇಶ ನೀಡಿದೆ.
ಫೋಕ್ಸೋ ನ್ಯಾಯಾಲಯದ ನ್ಯಾಯಾಧೀಶರಾದ ಎನ್.ಶ್ರೀಪಾದ್ ಅವರು ಫೋಕ್ಸೋ ಪ್ರಕರಣದಲ್ಲಿ ಈ ಆದೇಶ ಹೊರಡಿಸಿದ್ದಾರೆ. ಸರ್ಕಾರದ ಪರವಾಗಿ ರೇಖಾ ಎಸ್. ಕೋಟೆಗೌಡರ್ ವಿಶೇಷ ಸರ್ಕಾರಿ ಅಭಿಯೋಜಕರಾಗಿ ಫೋಕ್ಸೋ ನ್ಯಾಯಾಲಯದಲ್ಲಿ ವಾದ ಮಂಡನೆ ಮಾಡಿದ್ದರು.
ಘಟನೆ ಹಿನ್ನೆಲೆ: ದಾವಣಗೆರೆ ಜಿಲ್ಲೆಯ ಬಸವಾಪಟ್ಟಣ ಪೋಲಿಸ್ ಠಾಣೆಯಲ್ಲಿ 2019 ರಲ್ಲಿ ಬಸವಾಪಟ್ಟಣ ಗ್ರಾಮದ ಮಹಿಳೆ ಠಾಣೆಗೆ ಹಾಜರಾಗಿ ಅಪ್ರಾಪ್ತ ಬಾಲಕಿಯಾದ ತನ್ನ ಮಗಳ ಮೇಲೆ ಬಸವಾ ಪಟ್ಟಣ ಸಮೀಪದ ಸಾಗರ ಕ್ಯಾಂಪ್ ವಾಸಿ ರಾಜು ಎಂಬಾತ ಲೈಂಗಿಕ. ಅತ್ಯಾಚಾರ ಮಾಡಿದ್ದ ಬಗ್ಗೆ ದೂರು ಸಲ್ಲಿಸಿದರು. ಮಹಿಳೆ ನೀಡಿದ ದೂರಿನಲ್ಲಿ ರಾಜು ಎಂಬಾತ ತನ್ನ 13ವರ್ಷ ವಯಸ್ಸಿನ ಅಪ್ರಾಪ್ತ ಬಾಲಕಿಯನ್ನು ಪರಿಚಯ ಮಾಡಿಕೊಂಡು, ಅವಳನ್ನು ಪ್ರೀತಿಸುವುದಾಗಿ, ಮದುವೆಯಾಗುವುದಾಗಿ ನಂಬಿಸಿ, ಹೆದರಿಸಿ ಪುಸಲಾಯಿಸಿ ಸ್ಥಳೀಯ ತರಳಬಾಳು ಶಾಲೆಯ ಹಿಂಭಾಗದಲ್ಲಿ ಅಪ್ರಾಪ್ತ ಬಾಲಕಿಯ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ಅತ್ಯಾಚಾರ ಎಸಗಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದರು.
ಪ್ರಕರಣದ ದಾಖಲಿಸಿಕೊಂಡ ಬಸವಾ ಪಟ್ಟಣ ಠಾಣೆಯ ಪೊಲೀಸರು ತನಿಖೆ ನಡೆಸಿ, ಅರೋಪಿತನ ವಿರುದ್ಧ ಆರೋಪ ದೃಢಪಟ್ಟ ಕಾರಣ, ಅಂದಿನ ತನಿಖಾಧಿಕಾರಿ ಮಂಜುನಾಥ್ ಗಂಗಲ್ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣವು ನ್ಯಾಯಾಲಯದಲ್ಲಿ ಸುದೀರ್ಘವಾಗಿ ಸುಮಾರು 3 ವರ್ಷಗಳ ವಿಚಾರಣೆ ನಡೆದು ರಾಜು ಎಂಬಾತನ ವಿರುದ್ಧ ಸಾಕ್ಷ್ಯಾಧಾರಗಳಿಂದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜಿಲ್ಲಾ ಮತ್ತು ಸತ್ರ ಮಕ್ಕಳ ಸ್ನೇಹಿ ನ್ಯಾಯಾಲಯದ ನ್ಯಾಯಾಧೀಶರಾದ ಆರೋಪಿಗೆ 20 ವರ್ಷಗಳ ಜೈಲು ಶಿಕ್ಷೆ ಮತ್ತು 15ಸಾವಿರ ದಂಡವನ್ನು ವಿಧಿಸಿದೆ. ಇದಲ್ಲದೇ ಸಂತ್ರಸ್ಥೆಗೆ ಪರಿಹಾರ ರೂಪದಲ್ಲಿ 6.50 ಲಕ್ಷ ರೂ.ಗಳ ಪರಿಹಾರ ನೀಡುವಂತೆ ಜಿಲ್ಲಾ ಉಚಿತ ಸೇವಾ ಪ್ರಾಧಿಕಾರಕ್ಕೆ ಆದೇಶಿಸಲಾಗಿದೆ.