ಕೆಚ್ಚೆದೆಯ ಹೋರಾಟಗಾರರು ಕಿಶನರಾವ್-ಮುರಡಿ ಭೀಮಜ್ಜ

ಸ್ವಾತಂತ್ರ‍್ಯ ಹೋರಾಟಗಾರರು
Advertisement

ಶ್ರೀಕಾಂತ ಸರಗಣಾಚಾರಿ
ಕುಷ್ಟಗಿ: ದೇಶಕ್ಕೆ ೧೯೪೭ರಲ್ಲಿ ಸ್ವಾತಂತ್ರ‍್ಯ ದೊರೆಯಿತು. ಆದರೆ, ಹೈದರಾಬಾದ್ ಪ್ರಾಂತ್ಯದ ಪಠಾಣ ಸೈನ್ಯದ ಮುಖ್ಯಸ್ಥ ಖಾಸಿಂರಜ್ವಿ ಎಂಬುವನು ಸ್ವಾತಂತ್ರ್ಯ ರಾಜ್ಯ ಸ್ಥಾಪನೆಗೆ ಯತ್ನಿಸಿದನು. ಇಂತಹ ಪರಿಸ್ಥಿತಿಯಲ್ಲಿ ಜನರ ಅಸಹಕಾರ ಆಂದೋಲನವು ಭೂಗತ ಚಟುವಟಿಕೆ ರೂಪ ತಾಳಿತು. ರಜಾಕಾರ ಹಾವಳಿಗೆ ಹೆದರಿದ ಜನರು ಊರು ಬಿಟ್ಟರು. ನಿಜಾಮರ ವಿರುದ್ಧ ಸ್ವಾತಂತ್ರ‍್ಯ ಹೋರಾಟಗಾರರು ಹೋರಾಡಿ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ. ಅಂತವರ ಸಾಲಿನಲ್ಲಿ ಕುಷ್ಟಗಿಯ ಸ್ವಾತಂತ್ರ‍್ಯ ಸೇನಾನಿಗಳಾದ ಬಿ.ಕಿಶನರಾವ್, ಪ್ರಹಲ್ಲಾದಾಚಾರ್ಯ ಬರುತ್ತಾರೆ.
ಬಿ.ಕಿಶನರಾವ್ ವಿದ್ಯಾರ್ಥಿದೆಸೆಯಲ್ಲಿಯೇ ಸ್ವಾತಂತ್ರ‍್ಯ ಹೋರಾಟಕ್ಕೆ ಧುಮುಕಿದರು. ಸ್ವಾತಂತ್ರ್ಯ ಹೋರಾಟಗಾರ ಮುರುಡಿ ಭೀಮಜ್ಜನವರ ಮಾರ್ಗದರ್ಶನದಲ್ಲಿ ಸ್ವಾತಂತ್ರ‍್ಯ ಹೋರಾಟದಲ್ಲಿ ಭಾಗವಹಿಸಿದರು. ಹೈದರಾಬಾದ್ ಪ್ರಾಂತ್ಯಕ್ಕೆ ಸೇರಿದ ಸಮೀಪದ ಸ್ಥಳಗಳಲ್ಲಿ ಶಿಬಿರ ತೆರೆದು ಜನರಲ್ಲಿ ದೇಶಭಕ್ತಿ ತುಂಬಿದರು. ಮುಂದೆ ೧೯೪೮ರಲ್ಲಿ ಹೈದರಾಬಾದ್ ಪ್ರದೇಶವು ಸ್ವಾತಂತ್ರ್ಯ ಭಾರತದಲ್ಲಿ ವಿಲೀನವಾಯಿತು.

ಮುರಡಿ ಭೀಮಜ್ಜ
ಮುರಡಿ ಭೀಮಜ್ಜ

ಈ ಭಾಗದಲ್ಲಿ ಮೊದಲು ಸ್ಥಾಪನೆಯಾದ ಗಜೇಂದ್ರಗಡ ಶಿಬಿರದ ಜವಾಬ್ದಾರಿಯನ್ನು ಜಗನ್ನಾಥರಾವ್ ಕಾರಟಗಿ, ರಂಗಪ್ಪ ದೇಸಾಯಿ ವಹಿಸಿದ್ದರು. ಆಗ ಪುಂಡಲಿಕಪ್ಪ, ವಿಜಯರಾವ್ ದೇಸಾಯಿ, ಬಿ.ವಿ. ದೇಸಾಯಿ, ಸವರಿ ಗುರಾಚಾರ್ಯರು ಕಾರ್ಯಕರ್ತರಾಗಿದ್ದರು. ಈ ಶಿಬಿರಕ್ಕೆ ಪುಂಡಲೀಕಪ್ಪನನ್ನು ಶಿಬಿರಾಧಿಪತಿಯನ್ನಾಗಿ ನೇಮಕ ಮಾಡಿ, ಮುರಡಿ ಭೀಮಜ್ಜ ದಿಕ್ಸೂಚಿಯಾಗಿದ್ದರು ಎನ್ನುತ್ತದೆ ಇತಿಹಾಸ.
ಪುಂಡಲೀಕಪ್ಪ ಜ್ಞಾನಮೋಟೆಯವರ ಮಾರ್ಗದರ್ಶನದಲ್ಲಿ ಬಿ.ಕಿಶನರಾವ್ ಕಾರ್ಯಪ್ರವೃತ್ತರಾಗಿ ರಾತ್ರಿಹೊತ್ತಿನಲ್ಲಿ ರಜಾಕಾರ ವಿರುದ್ಧದ ಆಂದೋಲನ ಅಡಿಯಲ್ಲಿ ಭಾರತದ ಸ್ವಾತಂತ್ರ್ಯದ ಅರಿವನ್ನು ಜನರಿಗೆ ಮೂಡಿಸುವುದಕ್ಕಾಗಿ ಹಳ್ಳಿ ಹಳ್ಳಿಗಳಲ್ಲಿ ತಿರುಗಾಡಿ, ನಿಜಾಮರ ವಿರುದ್ಧದ ಮುದ್ರಿತ ಕರಪತ್ರ ಹಂಚುವ ಹಾಗೂ ದೌರ್ಜನ್ಯ ಎಸಗುವ ರಜಾಕಾರರ ವಿರುದ್ಧದ ಕಾರ್ಯಚರಣಾ ಹೊಣೆ ಇವರದಾಗಿತ್ತು. ಆತ್ಮೀಯ ಗೆಳಯರಾದ ಹನುಮಂತರಾವ್ ಕಾಟಾಪೂರ ಜೊತೆ ಸೇರಿ ನಿಜಾಮ್‌ನ ಕುದುರೆಗಳನ್ನು ಹಾಗೂ ಶಸ್ತ್ರಾಸ್ತ್ರಗಳನ್ನು ಅಪಹರಿಸಿದ್ದು ಹಾಗೂ ಸ್ವಾತಂತ್ರ‍್ಯ ಹೋರಾಟದ ಅನೇಕ ಘಟನೆಗಳಲ್ಲಿ ಭಾಗಿಯಾಗಿದ್ದು ಇತಿಹಾಸದಲ್ಲಿ ದಾಖಲಾಗಿದೆ. ಬಿ.ಕಿಶನರಾವ್ ಸ್ವಾತಂತ್ರ‍್ಯ ಹೋರಾಟ ಗುರುತಿಸಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸ್ವಾತಂತ್ರ‍್ಯ ಹೋರಾಟಗಾರರಿಗೆ ಸಿಗುವ ಸೌಲಭ್ಯಗಳನ್ನು ೨೫-೩-೧೯೮೩ರಿಂದ ನೀಡಲಾರಂಭಿಸಿದವು.

ಬಿ.ಕಿಶನರಾವ್
ಬಿ.ಕಿಶನರಾವ್

ಹೋರಾಟಕ್ಕೆ ಧುಮುಕಿದ ವೀರ ಮಹಿಳೆ ಬಡಿಗೇರ ಸೀತಮ್ಮ:
೧೯೪೮ರಲ್ಲಿ ಈ ಭಾಗದಲ್ಲಿ ಸ್ವಾತಂತ್ರ‍್ಯ ಹೋರಾಟದ ಕಿಚ್ಚು ಉರಿಯುತ್ತಿತ್ತು. ಇಂತಹ ಪರಿಸ್ಥಿತಿಯಲ್ಲಿ ತಾಲೂಕಿನ ಮಾಲಗಿತ್ತಿ ಗ್ರಾಮದ ಬಡಿಗೇರ ಸೀತಮ್ಮ ಹೋರಾಟ ಮಾಡಿ ಪ್ರಾಣ ತ್ಯಾಗ ಮಾಡಿದ್ದಾರೆ. ೧೯೫೭ ಮಾಲಗಿತ್ತಿ ಗ್ರಾಮದ ಕೆಂಚಪ್ಪನ ಗಡ್ಡಿಯ ಗೋಪುರದ ಮೇಲೆ ಧ್ವಜ ಏರಿಸಲು ನಿರ್ಧರಿಸಿದಾಗ ಸುತ್ತಲಿನ ಹಳ್ಳಿಯ ಸಾವಿರಾರು ಜನರು ಕೋಲು, ಕತ್ತಿ, ಕವಣೆ ಹಿಡಿದು ಸ್ವಾತಂತ್ರ್ಯ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಬಡಿಗೇರ ಸೀತಮ್ಮ ಧ್ವಜಾರೋಹಣ ಮಾಡಿದರು.
ಸಂಯುಕ್ತ ಕರ್ನಾಟಕ ನೆನಪು
೧೯೩೩ರಲ್ಲಿ ಬೆಳಗಾವಿಯಲ್ಲಿ ಸಂಯುಕ್ತ ಕರ್ನಾಟಕ ಪತ್ರಿಕೆ ಉದಯಗೊಂಡಿತು. ಸ್ವಾತಂತ್ರ‍್ಯ ಹೋರಾಟದಲ್ಲಿ ಹೋರಾಟಗಾರರ ಜೊತೆಗೆ ಸಂಯುಕ್ತ ಕರ್ನಾಟಕ ಪ್ರಮುಖ ಪಾತ್ರ ವಹಿಸಿತ್ತು. ಜನರಲ್ಲಿ ಸ್ವಾತಂತ್ರ‍್ಯದ ಕಿಚ್ಚು ಹಚ್ಚಲು ಘಟನಾವಳಿಗಳ ಸಮಗ್ರ ವರದಿಯನ್ನು ಸಂ.ಕ ಪ್ರಸಾರ ಮಾಡುತ್ತಿತ್ತು. ಕುಷ್ಟಗಿ ಸೇರಿದಂತೆ ತಾಲೂಕಿನ ಅನೇಕ ಭಾಗಗಳಲ್ಲಿ ಬೆಳಗ್ಗೆ ಪತ್ರಿಕೆಯನ್ನು ಖರೀದಿ ಮಾಡಲು ಸ್ವಾತಂತ್ರ ಹೋರಾಟಗಾರರು ಬಂದರೆ ನಿಜಾಮರು ಅವರನ್ನು ಬೂಟಿನಿಂದ ಒದೆಯುತ್ತಿದ್ದರು. ಆದರೂ ಹೆದರದೆ ಅನೇಕ ಹೋರಾಟಗಾರರ ಜೊತೆಗೆ ಬಡಿಗೇರ ಸೀತಮ್ಮ ಅವರು ಕದ್ದುಮುಚ್ಚಿ ಪತ್ರಿಕೆ ತಂದು ಓದುತ್ತಿದ್ದರು.