ಬಾಂಬ್ ಸ್ಪೋಟ ಪ್ರಕರಣ: ಆರೋಪಿ ಮುಹಮ್ಮದ್ ಶಾರಿಕ್, ಕುಟುಂಬಸ್ಥರಿಂದ ಗುರುತು ಪತ್ತೆ

SHKEER
Advertisement

ಮಂಗಳೂರು: ನಗರದ ನಾಗುರಿ ಎಂಬಲ್ಲಿ ಶನಿವಾರ ಸಂಜೆ ಆಟೊ ರಿಕ್ಷಾದಲ್ಲಿ ಸಂಭವಿಸಿದ ಸ್ಫೋಟ ಪ್ರಕರಣದ ವೇಳೆ ರಿಕ್ಷಾದಲ್ಲಿದ್ದ ಆರೋಪಿ ಪ್ರಯಾಣಿಕನ ಗುರುತು ಪತ್ತೆಯಾಗಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ನಿವಾಸಿ ಮುಹಮ್ಮದ್ ಶಾರಿಕ್(೨೪) ಆರೋಪಿಯಾಗಿದ್ದಾನೆ. ಈತ ೨೦೨೦ರಲ್ಲಿ ಮಂಗಳೂರು ನಗರದಲ್ಲಿ ಕಂಡುಬಂದ ಪ್ರಚೋದನಕಾರಿ ಗೋಡೆ ಬರಹ ಪ್ರಕರಣದ ಆರೋಪಿಗಳಲ್ಲಿ ಓರ್ವನಾಗಿದ್ದ ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.
ಶಾರೀಕ್ ಚಿಕಿತ್ಸೆ ಪಡೆಯುತ್ತಿರುವ ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಗೆ ಇಂದು ಭೇಟಿ ನೀಡಿರುವ ಶಾರೀಕ್ ಕುಟುಂಬಸ್ಥರು ಆತನ ಗುರುತು ಪತ್ತೆ ಹಚ್ಚಿದ್ದಾರೆ.
ಶಾರೀಕ್ ವಿರುದ್ಧ ಮಂಗಳೂರಿನ ಪೂರ್ವ ಮತ್ತು ಉತ್ತರ ಪೊಲೀಸ್ ಠಾಣೆ ಹಾಗೂ ಶಿವಮೊಗ್ಗ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಎರಡು ಪ್ರಕರಣದಲ್ಲಿ ದಸ್ತಗಿರಿಯಾಗಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ ಎಂದು ಅವರು ಮಾಹಿತಿ ನೀಡಿದ್ದಾರೆ.
ಶಾರಿಕ್ ವಿರುದ್ಧ ೨೦೨೨ರ ಸೆ.೧೯ರಂದು ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಯುಎಪಿಎ ಪ್ರಕರಣ ದಾಖಲಾಗಿದ್ದು, ಇದರಲ್ಲಿ ಈತ ೧ನೇ ಆರೋಪಿಯಾಗಿದ್ದಾನೆ. ಪ್ರಕರಣ ದಾಖಲಾದ ನಂತರ ಶಾರಿಕ್ ಅಲ್ಲಿಂದ ತಲೆಮರೆಸಿಕೊಂಡು ಮೈಸೂರಿನಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದನು. ನ.೧೯ರಂದು ಮೈಸೂರಿನಿಂದ ಹೊರಟಿದ್ದ ಶಾರಿಕ್ ಹೂಣಸೂರು, ಮಡಿಕೇರಿ, ಮತ್ತೂರು, ಬಿ.ಸಿ.ರೋಡ್ ಮೂಲಕ ಮಂಗಳೂರಿಗೆ ಆಗಮಿಸಿ ನಗರ ಹೊರವಲಯದಲ್ಲಿ ಬಸ್ಸಿನಿಂದ ಇಳಿದು ನಂತರ ಆಟೋದಲ್ಲಿ ಪಂಪವೆಲ್ ಕಡೆಗೆ ಹೋಗುತ್ತಿದ್ದಾಗ ಈ ಸ್ಫೋಟ ಸಂಭವಿಸಿದೆ.
ಮೈಸೂರಿನಲ್ಲಿ ಆರೋಪಿ ವಾಸವಿದ್ದ ಬಾಡಿಗೆ ಮನೆಯಿಂದ ಸಲ್ಫೆಕ್ಸ್ ಸಲ್ಫರ್ ಪೌಡರ್, ನಟ್ ಬೋಲ್ಡ್‌ಗಳು, ಸರ್ಕ್ಯೂಟ್‌ಗಳು, ಮಲ್ಟಿ ಫಂಕ್ಷನ್ ಡಿಲೆ ಟೈಮರ್, ಗ್ರೈಂಡರ್, ಮಿಕ್ಸರ್, ಮ್ಯಾಚ್ ಬಾಕ್ಸ್, ಬ್ಯಾಟರಿ, ಮೈಕ್ಯಾನಿಕಲ್ ಟೈಮರ್, ಆಧಾರ್ ಕಾರ್ಡ್, ಅಲ್ಯೂಮಿನಿಯಂ ಫೈಲ್ ಸಿಮ್ ಕಾರ್ಡ್‌ಗಳು, ಮೊಬೈಲ್ ಡಿಸ್ಪೇಗಳು, ಸ್ಫೋಟಕಕ್ಕೆ ಬಳಸುವ ವಿವಿಧ ಬಗೆಯ ರಾಸಾಯನಿಕ ವಶಪಡಿಸಿಕೊಳ್ಳಲಾಗಿದೆ. ಸುಟ್ಟ ಗಾಯಗೊಂಡಿರುವ ಆರೋಪಿ ಗುಣಮುಖನಾದ ನಂತರ ಆತನನ್ನು ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆ ಮಾಡಲಾಗುವುದು. ಈ ಪ್ರಕರಣದ ತನಿಖೆಗೆ ಎಸಿಪಿ ಪರಮೇಶ್ವರ ಹೆಗಡೆಯವರನ್ನು ತನಿಖಾಧಿಕಾರಿಯಾಗಿ ನೇಮಕ ಮಾಡಲಾಗಿದೆ ಎಡಿಜಿಪಿ ತಿಳಿಸಿದ್ದಾರೆ.