ಸಮಾಜದ ಋಣ ತೀರಿಸಲು ಸದಾ ಹೋರಾಟಕ್ಕೆ ಸಿದ್ಧ

ಜಯ ಮೃತ್ಯಂಜಯ
Advertisement

ದಾವಣಗೆರೆ: ಡಿ.12 ರಂದು ಬೆಳಗಾವಿಯಲ್ಲಿ ರಾಜ್ಯ ಪಂಚಮಸಾಲಿ ಸಮಾಜದ ಕಾರ್ಯಕಾರಿಣಿ ಹಾಗೂ ಹಾಲಿ ಮತ್ತು ಮಾಜಿ ಜನಪ್ರತಿನಿಧಿಗಳ ಸಭೆಯನ್ನು ಗಾಂಧಿಭವನದಲ್ಲಿ ಕರೆಯಲಾಗಿದೆ ಎಂದು ಕೂಡಲಸಂಗಮದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀಬಸವ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದರು. ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಭೆಯ ನೇತೃತ್ವವನ್ನು ಹೋರಾಟ ಸಮಿತಿ ಅಧ್ಯಕ್ಷ ಬಸನಗೌಡ ಪಾಟೀಲ್ ಯತ್ನಾಳ್, ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ವಹಿಸಲಿದ್ದಾರೆ. ವೀರಣ್ಣ ಕಡಾಡಿ, ಲಕ್ಷ್ಮೀ ಹೆಬ್ಬಾಳ್ಕರ್, ಎಚ್.ಎಸ್.ಶಿವಶಂಕರ್ ಸೇರಿದಂತೆ ಅನೇಕ ನಾಯಕರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಮೀಸಲಾತಿ ಹೋರಾಟದ ಲಾಭವನ್ನು ಸಮಾಜದ ಮತ್ತೊಂದು ಪೀಠ ಪಡೆಯುತ್ತಿರುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸ್ವಾಮೀಜಿ, ಹೋರಾಟ ಯಶಸ್ಸು ಕಾಣುವ ಸಂದರ್ಭದಲ್ಲಿ ಅದರ ಲಾಭವನ್ನು ಅನೇಕರು ಪಡೆಯಲು ಪ್ರಯತ್ನಿಸುವುದು ಸಾಮಾನ್ಯ. ನಾನು ಬೀದಿಗಿಳಿದು ಹೋರಾಟ ಮಾಡಿದಾಗ, ಪಾದಯಾತ್ರೆ ಮಾಡಿದಾಗ ನನ್ನ ಬಗ್ಗೆ ವ್ಯಂಗ್ಯವಾಗಿ ಮಾತನಾಡಿದ್ದಾರೆ. ಆದರೂ ನಾನು ಛಲ ಬಿಡದೇ ಹೋರಾಟ ಮಾಡಿದೆ. ಇದರ ಪರಿಣಾಮ ಇಂದು ಅದರ ಪ್ರತಿಫಲ ಪಡೆಯುವ ದಿನ ಸಮೀಪವಾಗುತ್ತಿದೆ. ಈ ಎಲ್ಲ ಘಟನೆಗಳು ಸಮಾಜದ ಪ್ರತಿಯೊಬ್ಬ ಬಡವ, ಹುಡುಗನಿಗೂ ಗೊತ್ತಿದೆ. ಆದರೆ ಸಹಜವಾಗಿಯೇ ಇದರ ಲಾಭವನ್ನು ಅನೇಕರು ಪಡೆಯುವ ಯತ್ನ ಮಾಡುತ್ತಿದ್ದಾರೆ. ಇದಾವುದಕ್ಕೂ ನಾನು ತಲೆಕೆಡಿಸಿಕೊಳ್ಳದೇ ಸಮಾಜದ ಋಣ ತೀರಿಸಲು ಸದಾ ಹೋರಾಟಕ್ಕೆ ಸಿದ್ಧವಿರುವುದಾಗಿ ಉತ್ತರಿಸಿದರು. ಸತತ ಎರಡು ವರ್ಷಗಳಿಂದ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕೆಂಬ ಬೇಡಿಕೆ ಇದ್ದು, ಅದು ಜನಾಂದೋಲನವಾಗಿ ರೂಪಿಗೊಂಡಿದೆ. ಇದು ಪಂಚಮಸಾಲಿ ಬಂಧುಗಳಿಗೂ ಗೊತ್ತಿದೆ. ಧರ್ಮಗುರುಗಳು ಯಾವಾಗಲು ಸತ್ಯವನ್ನೇ ಹೇಳಬೇಕು. ಸಮಾಜವನ್ನು ದಾರಿ ತಪ್ಪಿಸುವ ಕೆಲಸ ಮಾಡಬಾರದು ಎಂದರು.
ಒಬಿಸಿ ಮೀಸಲಾತಿ ಬೇಕೆಂಬ ವಿಷಯದ ಮೇಲೆ ಮೊದಲ ಬಾರಿಗೆ ಬೆಳಕು ಚಲ್ಲಿದ್ದೇ ನಾನು, ವೀರಶೈವ ಸಮಾಜದ ಎಲ್ಲ ಒಳಪಂಡಗಳಿಗೆ ಒಬಿಸಿ ಮೀಸಲಾತಿಬೇಕು ಎಂದು 2020 ಅಕ್ಟೋಬರ್ 28 ರಂದು ನಾವೇ ಮೊದಲ ಬಾರಿಗೆ ಸರ್ಕಾರಕ್ಕೆ ಆಗ್ರಹಪಡಿಸಿದ್ದೆವು. ಈ ಕೆಲಸವನ್ನು ಮಹಾಸಭಾ ಮಾಡಬೇಕಿತ್ತು. ಆದರೆ ನಾನು ಮಾಡಿದೆ. 32 ಲಿಂಗಾಯತ ಒಳಪಡಂಗಡಗಳಿಗೂ ಕೇಂದ್ರದ ಒಬಿಸಿ ಸಿಗಲಿ. ಆದರೆ ಪಂಚಮಸಾಲಿ ಸಮಾಜಕ್ಕೆ ರಾಜ್ಯದ 2ಎ ಮೀಸಲಾತಿ ಬೇಕು ಎಂದರು.
ದಾವಣಗೆರೆಯಲ್ಲಿ ಇದೇ ಡಿಸೆಂಬರ್ 24 ರಿಂದ ನಗರದಲ್ಲಿ ಹಮ್ಮಿಕೊಂಡಿರುವ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಮಹಾ ಅಧಿವೇಶನಕ್ಕೆ ನಮಗೆ ಯಾವುದೇ ಕರೆ ಬಂದಿಲ್ಲ. ಕರೆದರೆ ಹೋಗುತ್ತೇನೆ. ಮಹಾಸಭಾ ಕಟ್ಟುವಲ್ಲಿ ಪಂಚಮಸಾಲಿ ಸಮಾಜದ ಕೊಡುಗೆ ದೊಡ್ಡದಿದೆ ಎಂದರು.
ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಅಶೋಕ ಗೋಪನಾಳ್, ಕಂಚಿಕೆರೆ ಸಿದ್ದಣ್ಣ, ಕಾರಿಗೂರು ಬಸವರಾಜ್, ರಾಘವೇಂದ್ರ, ಯೋಗಿಶ್, ಪ್ರಕಾಶ್ ಹೊನ್ನಮರಡಿ, ಧನಂಜಯ, ಎನ್.ಬಕ್ಕೇಶ್ ವಿಜಯ್ ಬೆಂಡಿಗೆರೆ, ಚನ್ನಬಸವನಗೌಡ, ಸುದ್ದಿಗೋಷ್ಠಿಯಲ್ಲಿದ್ದರು.